ಸುಪ್ರೀಂ ಕೋರ್ಟ್ ಟಿಇಟಿ ಕಡ್ಡಾಯ ತೀಪು೯ | ಲಕ್ಷಾಂತರ ಶಿಕ್ಷಕರಿಗೆ ದಿಗಿಲು | ಆದೇಶ ಮರುಪರಿಶೀಲನೆಗೆ ಮನವಿ | ಸಚಿವ ಸಂಪುಟದಲ್ಲಿ ಧೃಡ ನಿಧಾ೯ರಕ್ಕೆ ನುಗ್ಗಲಿ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಶಿಕ್ಷಕರು ಬಡ್ತಿಗಾಗಿ ಹಾಗೂ ಸೇವೆಯಲ್ಲಿ ಮುಂದುವರೆಯಲು ಕಡ್ಡಾಯ ಅರ್ಹತಾ ಟಿಇಟಿ ಪರೀಕ್ಷೆ ಪಾಸಾಗಬೇಕೆಂದು ಸುಪ್ರೀಂ ಕೋರ್ಟ್ ಈಚೆಗೆ ತೀಪು೯ ನೀಡಿದ್ದು ಇದು ಶಿಕ್ಷಕ ಸಮೂಹದ ಹಿತಾಸಕ್ತಿಗೆ ತೀವ್ರ ವಿರುದ್ಧವಾಗಿದೆಲ್ಲದೇ ಮುಂದಿನ ದಿನಮಾನದಲ್ಲಿ ಶಿಕ್ಷಣ ರಂಗಕ್ಕೆ ಕಠಿಣಾತೀತ ರೀತಿಯಲ್ಲಿ ಮಾರಕವಾಗಿ ಕಾಡಲಿದೆ. ಇದು ಶಾಲಾ ಶಿಕ್ಷಣ ವ್ಯವಸ್ಥೆಗೆ ಅನ್ವಯಗೊಂಡರೆ ಇಡೀ ಶಿಕ್ಷಣ ವ್ಯವಸ್ಥೆಯೇ ಬುಡಮೇಲಾಗಿ ಭಾಗಶಃ ಕುಸಿಯುತ್ತದೆ ಎಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಆತಂಕ ವ್ಯಕ್ತಪಡಿಸಿದೆ.
ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಹಾಗೂ ಪ್ರಧಾನ ಕಾರ್ಯದರ್ಶಿ ಚೇತನ್.ಹೆಚ್.ಎಸ್ ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿ, ಶಿಕ್ಷಕರ ಕುಟುಂಬಗಳು ಮತ್ತು ಶಿಕ್ಷಕ ಸಮುದಾಯದ ವಿಶಾಲ ಹಿತಾಸಕ್ತಿಯ ದೃಷ್ಟಿಯಿಂದ ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಮರುಪರಿಶೀಲಿಸಿ ಮರುಮೌಲ್ಯಮಾಪನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ೨೫-೩೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಇದೀಗ ಟಿಇಟಿ ಪರೀಕ್ಷೆಗೆ ಅಣಿಯಾಗಿ, ಎದುರಿಸಿ ಎಂದು ಈಗ ಹೇಳುವುದು ಎಷ್ಟು ಸಮಂಜಸ ? ಈ ರೀತಿಯ ಸುಪ್ರೀಂ ಕೋರ್ಟ್ ಆದೇಶವು ಕರ್ನಾಟಕ ರಾಜ್ಯದ ಗಣನೀಯ ಸಂಖ್ಯೆಯ ಶಾಲಾ ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.ಸುಪ್ರೀಂ ತೀರ್ಪನ್ನು ರಾಜ್ಯ ಸಕಾ೯ರ ಪೂರ್ವಾನ್ವಯಗೊಳಿಸಬಾರದು. ಸಚಿವ ಸಂಪುಟದಲ್ಲಿ ಧೃಡ ನಿರ್ಧಾರ ತೆಗೆದುಕೊಂಡು ಲಕ್ಷಾಂತರ ಶಿಕ್ಷಕರಿಗೆ ನ್ಯಾಯ ಒದಗಿಸಬೇಕೆಂದು ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ಹೆಚ್.ಎಸ್. ಸಕಾ೯ರಕ್ಕೆ ಒತ್ತಾಯಿಸಿದ್ದಾರೆ.