ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕೃಷ್ಣೆಯ ಜಲಧಿಗೆ ಶನಿವಾರ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ಭಾಗದ ಜನತೆಯ ಅಹವಾಲು ಸ್ವೀಕರಿಸುತ್ತಿದ್ದಂತೆ ಮನವಿಗಳ ಮಹಾಪೂರವೇ ಹರಿದುಬಂತು.
ವಿವಿಧ ಸಂಘ-ಸಂಸ್ಥೆಯ ಮುಖಂಡರು ತಮ್ಮ ಪ್ರಮುಖ ಕಾರ್ಯಕರ್ತರೊಂದಿಗೆ ಆಲಮಟ್ಟಿಗೆ ಬೆಳಿಗ್ಗೆಯೇ ಆಗಮಿಸಿದರು. ಸಿಎಂ,ಡಿಸಿಎಂ ಬಾಗಿನ ಸಲ್ಲಿಸಿದ ಬಳಿಕ ಜನತೆಯ ಅಹವಾಲು ಸ್ವೀಕಾರಕ್ಕೆ ಮುಂದಾಗ ಹಲವಾರು ಸಂಘಟನೆಯ ಮುಖಂಡರು ಕೈಯಲ್ಲಿ ಮನವಿ ಪತ್ರಗಳನ್ನು ಹಿಡಿದುಕೊಂಡು ದೊರೆಗಳಿಗೆ ಸಲ್ಲಿಸಲು ಪೈಪೋಟಿ ನಡೆಸಿ ಹರಸಾಹಸ ಪಟ್ಟರು. ಈ ವೇಳೆ ಸಿಎಂ, ಡಿಸಿಎಂ ಸಮಾಧಾನ ಚಿತ್ತರಾಗಿ ಮನವಿಗಳನ್ನು ಸ್ವೀಕರಿಸಿದರು.
ಐಟಿಐ ಸಿಬ್ಬಂದಿಗಳ ಗೋಳು, ವೇತನಾನುದಾನಕ್ಕೆ ಮನವಿ
೧೯೯೭ರ ಪರಿಷ್ಕçತ ವೇತನಾನುದಾನ ಸಂಹಿತೆಯಂತೆ ೨೦೧೮ರಲ್ಲಿ ಪೂರ್ವಭಾವಿ ಪರೀವೀಕ್ಷಣೆಯಾಗಿರುವ ಅನುದಾನರಹಿತ ವೇತನಾನುದಾನ ಮಂಜೂರು ಮಾಡುವವಂತೆ ಸಿಎಂ ಅವರಿಗೆ ಪ್ರಮುಖರು ಮನವಿ ಸಲ್ಲಿಸಿದರು.
ಕಳೆದ ವರ್ಷ ಫೆ.೮ರಂದು ವಿಧಾನಸೌಧದ ಮುಂಭಾಗದಲ್ಲಿ ಜರುಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ ತಮ್ಮನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವು. ತಾವು ನಮ್ಮ ಮನವಿಯನ್ನು ಶಾಂತ ಚಿತ್ತ ದಿಂದ ಆಲಿಸಿದ್ದೀರಿ. ಮುಂದೆ ಅದಕ್ಕೆ ಪ್ರತಿಯಾಗಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮಾನ್ಯ ಆಯುಕ್ತರಿಂದ ಬೇಡಿಕೆ ಸಮಂಜಸವಾಗಿರುವ ಬಗ್ಗೆ ಪತ್ರ ಬಂದಿದ್ದು ಸರ್ಕಾರ ಈಗಿರುವ ವಿದ್ಯಾರ್ಥಿ ಕೇಂದ್ರಿತ ಅನುದಾನ ಸಂಹಿತೆ ಹಿಂಪಡೆದು ವೇತನಾನುದಾನ ನೀಡಬಹುದೆಂದು ತಿಳಿಸಿರುತ್ತಾರೆ. ಅಲ್ಲದೇ ೨೦೧೮ರಲ್ಲಿ ಅಂದಿನ ಕೌಶಲ್ಯಾಭಿವೃದ್ಧಿ ಸಚಿವರು ೪೫೬ ಐಟಿಐಗಳಿಗೆ ೧೨೫ ಕೋಟಿ ರೂ. ಬಜೆಟ್ ನಿಗದಿಗೊಳಿಸಿ ಪ್ರಯತ್ನ ಪಟ್ಟಿದ್ದರು ಎಂದು ಸಿಎಂ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
೨೦೦೧ ರಿಂದ ೨೦೧೦ ರ ಅವಧಿಯಲ್ಲಿ ಖಾಸಗಿ ಐಟಿಐಗಳಿಗೆ ಅನುಮತಿ ನೀಡುವಾಗ ಇತರೆ ಶಾಲಾ ಕಾಲೇಜುಗಳಿಂದ ತಪ್ಪದೇ ಪಡೆಯುವ ಶಾಶ್ವತ ಅನುದಾನರಹಿತವಾಗಿ ನಡೆಸಬೇಕೆಂಬ ಶರತ್ತನ್ನು ಇಲಾಖೆ ವಿಧಿಸಿರುವದಿಲ್ಲ. ಇದಕ್ಕೆ ಕಾರಣ ಖಾಸಗಿ ಐಟಿಐಗಳು ಕನಿಷ್ಠ ೭ವರ್ಷ ತರಬೇತಿ ನೀಡಿದರೆ ವೇತನ ಸಹಾಯಾನುದಾನ ನೀಡಲಾಗುವದೆಂದು ೧೯೯೭ರ ಸರ್ಕಾರದ ಆದೇಶವು ಜಾರಿಯಲ್ಲಿತ್ತು. ಹಾಗಾಗಿ ಸರ್ಕಾರದ ಆದೇಶ ನಂಬಿಕೊಂಡು ಸಂಘ, ಸಂಸ್ಥೆಗಳು ಐಟಿಐಗಳನ್ನು ಸ್ಥಾಪಿಸಿವೆ. ಆದರೆ ೧೫-೨೦ವರ್ಷವಾದರೂ ಅನುದಾನವಿಲ್ಲದೇ ಬಿಇ, ಡಿಪ್ಲೋಮಾ, ಎಟಿಎಸ್ ವಿದ್ಯೆಯ ತಾಂತ್ರಿಕ ಹಾಗೂ ತಾಂತ್ರಿಕೇತರ ಸಿಬ್ಬಂದಿಗಳು ತೀವ್ರ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಇನ್ನು ಈಗಾಗಲೇ ೨೦೦೦ ನೇ ಸ್ಥಾಪನೆಯಾಗಿರುವ ೧೯೬ ಖಾಸಗಿ ಐಟಿಐಗಳು ರಾಜ್ಯ ಸರ್ಕಾರದ ವೇತನಾನುದಾನಕ್ಕೆ ಒಳಪಟ್ಟಿರುತ್ತವೆ.
ಕಾರಣ ತಾವುಗಳು ನಾಡಿಗೆ ಹತ್ತು ಹಲವು ಭಾಗ್ಯಗಳನ್ನು ನೀಡಿ ಭಾಗ್ಯಗಳ ಸರದಾರ ಎಂಬ ಕೀರ್ತಿಗೆ ಪಾತ್ರರಾಗಿದ್ದೀರಿ. ಆದರೆ ನಮ್ಮ ಈ ಬೇಡಿಕೆಯನ್ನು ಕೂಡಲೇ ಮಂಜೂರು ಮಾಡಲು ಮತ್ತೊಮ್ಮೆ ತಮ್ಮಲ್ಲಿ ಮನವಿ ಮಾಡುತ್ತೇನೆ. ದಶಕದಿಂದ ನೆನೆಗುದಿಗೆ ಬಿದ್ದಿರುವ ನ್ಯಾಯಯುತವಾದ ಖಾಸಗಿ ಐಟಿಐಗಳ ಈ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದಿದ್ದಾರೆ ಪ್ರಮುಖರು.
ಕೃಷಿ,ತೋಟಗಾರಿಕೆ ಬೆಳೆಹಾನಿ ಪರಿಹಾರ ನೀಡಿ :* ಪ್ರಸಕ್ತ ಸಾಲಿನ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಹಾಗೂ ಜಿಲ್ಲೆಯ ಸಮಗ್ರ ನೀರಾವರಿಗೆ ಆದ್ಯತೆ ನೀಡಬೇಕು ಎಂದು ಭಾರತೀಯ ಕಿಸಾನ ಸಂಘದ ಕನಾ೯ಟಕ ಉತ್ತರ ಪ್ರಾಂತದ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ ಮನವಿ ಸಲ್ಲಿಸಿದ್ದಾರೆ.
ಈ ವರ್ಷದ ಮುಂಗಾರು ಅತಿವೃಷ್ಟಿ ಮಳೆಯಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಬಾಳೆ, ಲಿಂಬೆ, ತರಕಾರಿ, ಕಾಯಿಪಲ್ಯ ಬೆಳೆಗಳು ಹಾಗೂ ತೊಗರಿ, ಹತ್ತಿ, ಶೇಂಗಾ, ಸೂರ್ಯಕಾಂತಿ, ಗೋವಿನ ಜೋಳ ಮುಂತಾದ ಬೆಳೆಗಳು ಹಾಳಾಗಿದ್ದು, ರೈತರು ಕಂಗಾಲಾಗಿದ್ದಾರೆ. ಅವರಿಗೆ ತುರ್ತು ನೆರವು ನೀಡಬೇಕು ಎಂದಿದ್ದಾರೆ.