ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಶಿಕ್ಷಣ ಎಂದರೆ ಮಗುವಿನ ಭವಿಷ್ಯದ ತಯಾರಿ ಅಲ್ಲ, ಮಗುವಿನಲ್ಲಿ ಅಡಗಿರುವ ವಿದ್ಯೆಯನ್ನು ಹೆಕ್ಕಿತೆಗೆದು ಅವರ ಜೀವನನ್ನು ರೂಪಿಸುವದೇ ಶಿಕ್ಷಣ ಎಂದು ಪ್ರೌಢ ಶಾಲಾ ಶಿಕ್ಷಕ, ವಾಗ್ಮಿ ಬಸವರಾಜ ಹಂಚಲಿ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವ, ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅವರು ವಿಶೇಶ ಉಪನ್ಯಾಸ ನೀಡಿದರು.
ಇಡೀ ಜಗತ್ತನ್ನು ಬದಲಾಯಿಸುವ ಮತ್ತು ಚರಿತ್ರೆಯನ್ನು ನಿರ್ಮಾಣ ಮಾಡುವ ಶಕ್ತಿ ಇರೋದು ಶಿಕ್ಷಣಕ್ಕೆ ಮಾತ್ರ. ಆ ಶಿಕ್ಷಣವನ್ನು ನೀಡಿ ದೇಶವನ್ನು ಹಟ್ಟುವ ಕೆಲಸವನ್ನು ಪ್ರತಿಯೊಬ್ಬ ಶಿಕ್ಷಕ ಮಾಡುತ್ತಿದ್ದಾನೆ. ಆದರೆ ಸಧ್ಯದ ದಿನಮಾನಗಳಲ್ಲಿ ಅತಿಯಾದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕೊಲೆ, ಸುಲಿಗೆ, ದರೋಡೆ, ಜಾತಿ, ಧರ್ಮ ತೊಳಲಾಟ ಇವುಗಳೆಲ್ಲ ಶಿಕ್ಷಣದ ಮೌಲ್ಯಗಳನ್ನು ಕಳೆಯುತ್ತಿವೆ. ಇಂಜಿನೀಯರಗಳು ರಸ್ತೆ ಹಾಳಾದರೂ ಪರವಾಗಿಲ್ಲ ನಾನು ಮಾತ್ರ ಚನ್ನಾಗಿರಬೇಕು ಅನ್ನೋವಾಗ, ವೈದ್ಯರು ಮೃತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಿ, ಬಿಲ್ ಕಟ್ಟದಿದ್ದರೆ ಹೆಣವನ್ನೂ ನೀಡುವದಿಲ್ಲ ಅನ್ನುತ್ತಿರುವಾಗ ಎಲ್ಲಿ ಹೋಗಿದೆ ನಮ್ಮ ಶಿಕ್ಷಣ? ನಾವು ಕೊಡುತ್ತಿರುವ ಶಿಕ್ಷಣ ಎಂಥದ್ದು, ಎಂತಹ ಸಮಾಜವನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದು ಶಿಕ್ಷಕರಾದ ನಾವೆಲ್ಲ ಒಂದು ಬಾರಿ ಯೋಚಿಸಬೇಕು ಎಂದರು.
ಸಮಾರಂಭವನ್ನು ಉದ್ಘಾಟಿಸಿ ಶಾಸಕ ಸಿ.ಎಸ್.ನಾಡಗೌಡರು ಮಾತನಾಡಿ, ಶಿಕ್ಷಣ ಒಂದು ದೊಡ್ಡ ಅಸ್ತç. ಸಾಮಾಜಿಕ ಬದಲಾವಣೆ ತರಲು ಶಿಕ್ಷಣದಿಂದ ಮಾತ್ರ ಸಾಧ್ಯ, ಬೇರೆ ಯಾವುದರಿಂದಲೂ ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಸ್ವರೂಪವನ್ನೇ ಬದಲಾವಣೆ ಮಾಡುವ ಶಕ್ತಿ ಶಿಕ್ಷಣಕ್ಕಿದೆ. ಸರ್ಕಾರ ಯಾವ ಶಿಕ್ಷಣ ನೀತಿ ತಂದರೇನು ಅದನ್ನು ಅನುಷ್ಟಾನಕ್ಕೆ ತರುವವರು ಶಿಕ್ಷಕರು. ಎಲ್ಲ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಮರೆಯದಿದ್ದರೆ ಮಾತ್ರ ಸುಭದ್ರ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಇದೇ ವೇಳೆ ೨೦೨೩-೨೪ ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ತಾಲೂಕಿಗೆ ಟಾಪರ್‌ಗಳಾದ ಪ್ರಭುದೇವ ರಾಠೋಡ, ಸುನೀಲ ಕುಂಬಾರ ಮತ್ತು ಸಿದ್ದನಗೌಡ ಬಿರಾದಾರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಿಗೆ ಸ್ಮಾನಿಸಿ ಗೌರವಿಸಲಾಯಿತು. ತಹಸೀಲ್ದಾರ ವೆಂಕಟೇಶ ವಂದಾಲ ಅಧ್ಯಕ್ಷತೆ ವಹಿಸಿದ್ದರು. ತಾಳಿಕೋಟೆಯ ತಹಸೀಲ್ದಾರ ವಿನಯಾ ಹೂಗಾರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವಾಯ್.ಕವಡಿ, ಶಿಕ್ಷಣ ಸಂಯೋಜಕ ಎಂ.ಕೆ.ಬಾಗವಾನ, ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ, ಪ್ರೌ.ಶಾ.ಸ.ಶಿ ಸಂಘದ ಅಧ್ಯಕ್ಷ ಎನ್.ಬಿ.ಪಿಂಜಾರ, ಪ್ರೌ.ಶಾ.ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಎಂ.ಎಸ್.ಕವಡಿಮಟ್ಟಿ, ದೈ.ಶಿ.ಪ್ರೌ.ಶಿ.ಸಂಘದ ಅಧ್ಯಕ್ಷ ಎ.ಸಿ.ಕೆರೂರ, ಪ್ರೌ.ಶಾ.ಮು.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಪಾಟೀಲ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಎಂ.ಜಿ.ವಾಲಿ, ಎಸ್.ಸಿ/ಎಸ್.ಟಿ ನೌ.ಕ್ಷೇ ಸಂಘದ ಅಧ್ಯಕ್ಷ ಎಚ್.ಎಂ.ತಮದಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಸೇರಿದಂತೆ ಹಲವರು ವೇದಿಕೆಯ ಮೇಲಿದ್ದರು. ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಸ್ವಾಗಿಸಿದರು. ಶಿಕ್ಷಕರುಗಳಾದ ಎಸ್.ಬಿ.ಬಿಜ್ಜೂರ, ಗುಂಡು ಚೌವ್ಹಾಣ ನಿರೂಪಿಸಿದರು.
“ಶಿಕ್ಷಕರ ವಲಯದಲ್ಲಿ ವಿವಿಧ ಘಟಕಗಳಾಗಿವೆ. ಎಲ್ಲ ಅಧಿಕಾರಿಗಳು ಪದಾಧಿಕಾರಿಗಳು ಸೇರಿದರೆ ೧೦೮ ಜನ ಆಗುತ್ತಾರೆ. ದಯಮಾಡಿ ಎಲ್ಲ ೧೦೮ ಜನರಿಗೂ ಕೈಮುಗಿದು ಕೇಳುತ್ತೇನೆ ನೀವು ನಿಮ್ಮ ಶಾಲೆಯಲ್ಲಿರಿ. ಇಲ್ಲಿ ರಾಜಕಾರಣದ ಹಸ್ತಕ್ಷೇಪವಾಗುತ್ತಿದೆ. ಕೆಲವರು ಉದ್ದೇಶಪೂರ್ವಕವಾಗಿ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೇಲಿದೆ.”
– ಸಿ.ಎಸ್.ನಾಡಗೌಡ ಶಾಸಕರು, ಮುದ್ದೇಬಿಹಾಳ