ಸಿಂದಗಿಯಲ್ಲಿ ಡಾ.ರಾಧಾಕೃಷ್ಣನ್ ಜನ್ಮದಿನೋತ್ಸವ ಉದ್ಘಾಟಿಸಿದ ಪುರಸಭೆ ಅದ್ಯಕ್ಷ ಡಾ.ಶಾಂತವೀರ ಮನಗೂಳಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಡಾ.ಸರ್ವಪಲ್ಲಿ ರಾಧಾಕೃಷ್ಣರು ವಿವಿಯ ಕುಲಪತಿ, ಪ್ರಾಧ್ಯಾಪಕ, ಉಪರಾಷ್ಟ್ರಪತಿ, ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿ ಶಿಕ್ಷಕ ಸಮೂಹಕ್ಕೆ ದಾರಿ ದೀಪವಾಗಿದ್ದಾರೆ. ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿರುವುದು ಶಿಕ್ಷಕರು ನೀಡುವ ಶಿಕ್ಷಣ ಜೀವನದುದ್ದಕ್ಕೂ ಮರೆಯದಂತಹ ಸಂಬಂಧ ಬೆಳೆಸುತ್ತಾರೆ ಎಂದು ಪುರಸಭೆ ಅದ್ಯಕ್ಷ ಡಾ.ಶಾಂತವೀರ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಗುಂದಗಿ ಪಂಕ್ಷನ್ ಹಾಲ್‌ನಲ್ಲಿ ವಿಜಯಪುರ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕಾಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಹಾಗೂ ಶಿಕ್ಷಕರ ದಿನೋತ್ಸವ ಸಮಿತಿಯ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರ ೧೩೭ನೇ ಜನ್ಮದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಸಿಂದಗಿ ಪುರಸಭೆಯು ಇಂದು ನಗರ ಸಭೆಯಾಗಿ ಮೇಲ್ದರ್ಜೆಗೆರಿದೆ. ಇದರಿಂದ ಸಾಕಷ್ಟು ಅನುದಾನ ಹರಿದು ಬರುತ್ತದೆ. ಅದನ್ನು ಶಾಲೆ-ಕಾಲೇಜು, ಅಂಗನವಾಡಿ ಕೇಂದ್ರಗಳನ್ನು ನಿರ್ಮಾಣ ಮಾಡುವ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತೇವೆ ಎಂದು ತಿಳಿಸಿದರು.
ಈ ವೇಳೆ ಕಲಬುರ್ಗಿ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೋ.ಎಚ್.ಟಿ.ಪೋತೆ ಅತಿಥಿ ಉಪನ್ಯಾಸ ನೀಡಿ, ದೈವದ ಬೆರಗು, ಅಕ್ಷರ ಬೆರಗು ಶಿಕ್ಷಕ. ಬ್ರಹ್ಮನಿಗಿಂತ ದೊಡ್ಡ ವ್ಯಕ್ತಿ ಗುರುವಾಗಿದ್ದಾನೆ. ಪ್ರತಿಯೊಂದು ಕ್ಷೇತ್ರದಲ್ಲಿ ಗುರುವಿಲ್ಲದಿದ್ದರೆ ಸಾಧನೆ ಶೂನ್ಯ. ಅಲ್ಲದೆ ಶಿಕ್ಷಣ ಕ್ಷೇತ್ರಕ್ಕೆ ಬುದ್ಧ, ಬಸವ, ಸಾವಿತ್ರಿಬಾಯಿ ಪುಲೆ ಅವರು ಕೊಡುಗೆ ಅಪಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮೂರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಿ, ೮೩ಜನ ಸೇವಾ ನಿವೃತ್ತ ಶಿಕ್ಷಕರಿಗೆ, ೧೦ ಜನ ಮೃತ ಶಿಕ್ಷಕರ ಕುಟುಂಬದ ಸದಸ್ಯಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಶ್ರೀಶೈಲ ಕವಲಗಿ, ಅಶೋಕ ಕೊಳಾರಿ, ದೇವರ ಹಿಪ್ಪರಗಿ ತಾಪಂ ಇಒ ಭಾರತಿ ಚಲುವಯ್ಯ, ಸಿಂದಗಿ ತಾಪಂ ಇಒ ರಾಮು ಅಗ್ನಿ, ಕ್ಷೇತ್ರ ಸಮನ್ವಯಾಧಿಕಾರಿ ಆಯ್.ಎಸ್.ಟಕ್ಕೆ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಆನಂದ ಭೂಸನೂರ, ದೇವರ ಹಿಪ್ಪರಗಿ ಅದ್ಯಕ್ಷ ಎ.ಎಚ್.ವಾಲೀಕಾರ, ಪ್ರೌಡಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಆರ್.ಎಚ್.ಬಿರಾದಾರ, ನೌಕರರ ಸಂಘದ ಅದ್ಯಕ್ಷ ಅಶೋಕ ತೆಲ್ಲೂರ, ದೇವರ ಹಿಪ್ಪರಗಿ ಪ್ರೌಡಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಎಸ್.ಎನ್ ಯಾಳವಾರ, ಮಹಾಮಂಡಳ ಅದ್ಯಕ್ಷ ಅರುಣ ನಾಯ್ಕೋಡಿ, ಅನುದಾನಿತ ಪ್ರೌಡಶಾಲೆಗಳ ಅಧ್ಯಕ್ಷ ಬುಳ್ಳಪ್ಪ ಡಿ, ಶಿಕ್ಷಣ ಸಂಯೋಜಕ ಐ.ಎಫ್ ಬಾಲ್ಕಿ, ಅಕ್ಷರ ದಾಸೋಹ ಅಧಿಕಾರಿ ಎ.ಎಸ್.ಡೋಣೂರ, ದೈಹಿಕ ಶಿಕ್ಷಣ ರ‍್ವಿಕ್ಷಕ ರಮೇಶ ಬಿರಾದಾರ, ಶಿಕ್ಷಕಿ ಶೋಭಾ ಚಿಗರಿ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಶಿಕ್ಷಕಿ ಹೊನ್ನಮ್ಮ ಹಿರೇಮಠ ಪ್ರಾರ್ಥಿಸಿದರು. ಶೈನಾಬಿ ಮಸಳಿ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಶಿಕ್ಷಕ ಜಗದೀಶ ಸಿಂಗೆ ರೈತಗೀತೆ ಹಾಡಿದರು. ಶಿಕ್ಷಕರ ದಿನೋತ್ಸವ ಸಮಿತಿ ಅಧ್ಯಕ್ಷ ಹಾಗೂ ತಾಪಂ ಅಧಿಕಾರಿ ರಾಮು ಅಗ್ನಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಸವರಾಜ ಸೋಂಪೂರ ನಿರೂಪಿಸಿದರು. ರವಿ ಹೊಸಮನಿ ವಂದಿಸಿದರು.