ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದಲ್ಲಿ ಕಳೆದ ಎರಡು ದಿನಗಳ ಕಾಲ ಗ್ರಾಮದಲ್ಲಿ ಸಂಭ್ರಮ ಮೂಡಿಸಿದ್ದ ಆರಾದ್ಯದೈವ ಶ್ರೀ ಪ್ರಭುಲಿಂಗೇಶ್ವರ ಕಿಚಡಿ ಜಾತ್ರೆ ಹಾಗೂ ರಥೋತ್ಸವವು ಹಲವಾರು ವಿಶೇಷಗಳೊಂದಿಗೆ ವಿಜ್ರಂಭನೆಯಿಂದ ನೆರವೇರಿತು.
ಬುಧವಾರ ಮುಂಜಾನೆಯೇ ಸರದಿಯಲ್ಲಿ ನಿಲ್ಲಲು ಪ್ರಾರಂಭಿಸಿದ ಕಿಚಡಿ ತಯಾರಿಸುವ ಸಾಮಗ್ರಿ ಒಯ್ಯುವ ಸೇವಾ ನಿರತ ಅಲಂಕೃತ ಟ್ರ್ಯಾಕ್ಟರಗಳು ಸಂಜೆಯ ಹೊತ್ತಿಗೆ ನೂರರ ಗಡಿ ದಾಟಿದ್ದವು ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಸುಮಾರು ಎರಡು ಕಿ.ಮಿ. ವರೆಗೆ ಸರದಿ ಸಾಲಿನಲ್ಲಿ ನಿಂತಿದ್ದವು ರಾತ್ರಿ ೧೦ ಘಂಟೆಯಿಂದ ಓಂ ಪ್ರಭುಲಿಂಗೇಶ್ವರ ಸೇವಾ ಸಮೀತಿಯ ಪ್ರಮುಖರು ಕಿಚಡಿ ಪ್ರಸಾದದ ಸಾಮಗ್ರಿಯನ್ನು ಪ್ರತಿಯೊಂದು ಟ್ರ್ಯಾಕ್ಟರಗಳಲ್ಲಿ ಗ್ರಾಮದಿಂದ ಒಂದು ಕಿ.ಮಿ. ದೂರದ ಗುಡ್ಡದ ಪ್ರಭುಲಿಂಗೇಶ್ವರ ದೇವಸ್ಥಾನಕ್ಕೆ ಸಾಗಿಸಲಾಯಿತು ಈ ಅಲಂಕೃತ ಟ್ರ್ಯಾಕ್ಟರಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಒಂದೊಂದು ಟ್ರ್ಯಾಕ್ಟರಗಳ ಶೃಂಗಾರಕ್ಕೆ ರೈತರು ಇಪ್ಪತ್ತು ಸಾವಿರದಿಂದ ಒಂದು ಲಕ್ಷ ರೂ.ಗಳವರೆಗೆ ಖರ್ಚು ಮಾಡಿರುತ್ತಾರೆ.
ಗುರುವಾರ ಬೆಳಿಗ್ಗೆ ೬ ಘಂ,ಗೆ ನಡೆಯುವ ರುದ್ರಾಭಿಷೇಕದೊದಿಗೆ ಪ್ರಾರಂಭಗೊಂಡ ಜಾತ್ರೆಯಲ್ಲಿ ಷಟಸ್ಥಲ ಧ್ವಜಾರೋಹಣ, ಅಡ್ಡ ಪಲ್ಲಕ್ಕಿ ಮಹೋತ್ಸವ ನಂತರ ನಡೆದ ವಚನ ಚಿಂತನಗೋಷ್ಟಿಯಲ್ಲಿ ನಾಡಿನ ಅನೇಕ ಶ್ರೀಮಠಗಳ ಪೂಜ್ಯ ಮಠಾಧೀಶರು, ರಾಜಕೀಯ ನಾಯಕರು ಪಾಲ್ಗೋಂಡಿದ್ದರು.
ಮುಂ.೧೧ ಘಂ.ಗೆ ಶ್ರೀಗಳ ಹಸ್ಥಸ್ಪರ್ಶದೊಂದಿಗೆ ಆರಂಭಗೊಡ ಕಿಚಡಿ ಪ್ರಸಾದ ವಿತರಣೆಯಲ್ಲಿ ಬಾಗಲಕೋಟ, ವಿಜಯಪುರ, ಬೆಳಗಾವಿ ಜಿಲ್ಲೆಯಲ್ಲದೇ ನೆರೆಯ ಮಹಾರಾಷ್ಟ್ರದಿಂದಲೂ ಲಕ್ಷಾಂತರ ಜನ ಭಕ್ತಾಧಿಗಳು ಆಗಮಿಸಿ ಕಿಚಡಿ ಪ್ರಸಾದ ಸವಿದು ಶ್ರೀ ಪ್ರಭುವಿನ ಕೃಪೆಗೆ ಪಾತ್ರರಾದರು.
ಸಂಜೆ ಬೊಂಬೆ ವೇಷಧಾರಿ ಸೋಗು, ಕರಡಿ ಮಜಲು, ಡೊಳ್ಳು, ಬ್ಯಾಂಡ ಬಾಜಾ, ಹಲಗಿ ಮೇಳ ಸೇರಿದಂತೆ ವಿವಿಧ ವಾದ್ಯವೃಂದಗಳೊಂದಿಗೆ ನಡೆದ ಅಲಂಕೃತ ಜೋಡಿ ನಂದಿಕೋಲ ಉತ್ಸವ ಹಾಗೂ ಪ್ರಪ್ರಥಮ ರಥೋತ್ಸವದ ಅದ್ಭುತ ದೃಷ್ಯವನ್ನು ನೆರೆದ ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಈ ಜಾತ್ರಾ ಮಹೋತ್ಸವದಲ್ಲಿ ಸಂಸದ ಪಿಸಿ ಗದ್ದಿಗೌಡರ್, ಕ್ಷೇತ್ರ ಶಾಸಕ ಸಿದ್ದು ಸವದಿ, ಕವಿತಾ ಸಿದ್ದು ಕೊಣ್ಣೂರ, ಡಾ. ಎ.ಆರ. ಬೆಳಗಲಿ ಸೇರಿದಂತೆ ಹಲವಾರು ಪ್ರಮುಖ ರಾಜಕಾರಣಿಗಳು ಹಿರಿಯ ಅಧಿಕಾರಿಗಳು ಆಗಮಿಸಿದ್ದರು.
ಡಿವೈಎಸ್ಪಿ ಎಸ್. ರೋಷನ್‌ಜಮೀರ, ಬನಹಟ್ಟಿ ಸಿಪಿಐ ಸಂಜು ಬಳಗಾರ ಮಾರ್ಗದರ್ಶದಲ್ಲಿ ಪಿಎಸ್‌ಐ ಶಾಂತಾ ಹಳ್ಳಿ ಸೂಕ್ತ ಬಂದೋಬಸ್ತ ಕೈಗೊಂಡಿದ್ದರು. ಸರ್ವ ಧರ್ಮಿಯರೂ ಸೇರಿ ನಡೆಸುವ ಈ ಜಾತ್ರೆಯಲ್ಲಿ ಸುಮಾರು ೨೧೦ ಕೆಜಿ. ಅಕ್ಕಿ ಬೇಳೆ, ೩೦ ಕ್ವಿಂಟಾಲ್ ಮಸಾಲೆ ಪದಾರ್ಥಗಳಿಂದ ತಯಾರಿಸಲಾಗಿದ್ದ ಕಿಚಡಿ ಪ್ರಸಾದ ಕೇವಲ ೬ ಘಂಟೆಗಳಲ್ಲಿ ಭಕ್ತಾಧಿಗಳು ಸ್ವೀಕರಿಸಿ ಪುನೀತರಾದರು.