ಆಲಮಟ್ಟಿ ಈಗ ಶೃಂಗಾರಮಯ | ಜಲರಾಶಿ, ಹೂಘಮ, ರಮ್ಯತೆಯ ಸಿರಿಗಂಧ | ಕೃಷ್ಣೆ ಜಲಧಿಗೆ ಪವಿತ್ರತೆಯ ಉತ್ಕಟ ಸ್ಥಾನಮಾನ
ಉದಯರಶ್ಮಿ ದಿನಪತ್ರಿಕೆ
ವರದಿ: ಸಂಪದಾ ಹಿರೇಮಠ
ಆಲಮಟ್ಟಿ: ಉತ್ತರ ಕರ್ನಾಟಕದ ರೈತರ ಜೀವನಾಡಿ ಕೃಷ್ಣೆಯ ಒಡಲಿಗೆ ಇದೇ ಶನಿವಾರ ಶ್ರದ್ಧೆ, ಭಕ್ತಿಪೂರ್ವಕ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆಯ ಸುಯೋಗ. ಆ ನಿಮಿತ್ಯ ಆಲಮಟ್ಟಿ ಅಂಗಳಕ್ಕೆ ಈಗ ಅಂದ ಚೆಂದದ ಸ್ಪರ್ಶ ! ಇಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಆವರಣ ಮಧುವಣಗಿತ್ತಿಯಂತೆ ಅಲಂಕಾರದ ತೋರಣದಲ್ಲಿ ಮಿನುಗಿ ಗಮನ ಸೆಳೆಯುತ್ತಿದೆ.
ಅತ್ಯಾಕರ್ಷಕ ರೂಪದಲ್ಲಿ ಬಾಗಿನ ಸಲ್ಲಿಕೆಯ ಸ್ಥಳ ಸೇರಿದಂತೆ ಹಲ ವೃತ್ತಗಳು ಘಮಘಮಿಸುವ ಹೂ ಪೋರಣಗಳ ಅಲಂಕಾರದಿಂದ ಕಂಗೊಳಿಸಿ ಕೃಷ್ಣೆ ಜಲಧಿಗೆ ಪವಿತ್ರತೆಯ ಉತ್ಕಟ ಸ್ಥಾನಮಾನ ಸಾಕ್ಷೀಕರಿಸುತ್ತಿವೆ. ಹಸಿಯೋನ್ಮಾದ ಶೃಂಗಾರ ಕಾವ್ಯದ ಲಾಲೀತ್ಯದಲ್ಲಿ ಹೃನ್ಮನ ತಣಿಸುತ್ತಿವೆ. ಅಭೂತಪೂರ್ವ ಐತಿಹ್ಯ ನೋಟ ಬೀರುತ್ತಿವೆ. ತಂಪು ವಾತಾವರಣದ ಕಂಪಿನಲ್ಲಿ ಆಣೆಕಟ್ಟು ಮುಂಭಾಗದ ಹಾಗೂ ಅಕ್ಕಪಕ್ಕದ ಪರಿಸರ ಹಿತಮಯವಾಗಿ ಉನ್ಮಾದ ರಸಸ್ವಾದ ನೀಡುತ್ತಿವೆ.
ಇನ್ನೊಂದೆಡೆ ಅಪಾರ ಜಲರಾಶಿ ತನ್ನೊಡಲೊಳು ತುಂಬಿಕೊಂಡಿರುವ ಕೃಷ್ಣೆಯ ಪರಂಪವಿತ್ರ ಜಲಧಿಯ ಸುಂದರ ದೃಶ್ಯ ವೈಭವೋಪೇತ ಅನ್ನದಾತರ ತೃಷೆಯ ಆಶಾಕಿರಣ ಇಮ್ಮಡಿಗೊಳಿಸುತ್ತಿದೆ.
ಈ ಮಧ್ಯೆ ರಾಜ್ಯದ ದೊರೆಯ ಅಮೃತಹಸ್ತದಿಂದ ಶನಿವಾರ ಗಂಗಾಪೂಜೆ, ಬಾಗಿನ ಅರ್ಪಿಸಿಕೊಳ್ಳಲು ಕಾತರದಿಂದ ಕಾಯುತ್ತಿರುವಂತಿದೆ ಕೃಷ್ಣೆಯ ಜಲಧಿ. ಈ ಸುಕ್ಷಣಕ್ಕೆ ಸನ್ನದ್ಧ ಸ್ಥಿತಿಯಲ್ಲಿಗ ಕೃಷ್ಣೆ ಒಡಲು ಜಲಭರಪೂರ ವಯ್ಯಾರದ ಅಲೆಗಳು ಉಮ್ಮಳಿಸಿ ತೇಲಿ ಬರುತ್ತಿವೆ.
ಕರುನಾಡಿನ ಪ್ರತಿಷ್ಟಿತ ಆಲಮಟ್ಟಿ ಜಲಾಶಯದಲ್ಲಿ ಗರಿಷ್ಟ ಮಟ್ಟಕ್ಕೆ ನೀರು ಸಂಗ್ರಹಣೆಯಾದ ಪ್ರಯುಕ್ತ ಶನಿವಾರ ಆಲಮಟ್ಟಿ ಸ್ಮರಣೀಯ ನೋಟಕ್ಕೆ ಅಣಿಯಾಗುತ್ತಿದೆ. ಶನಿವಾರ ಬೆಳಿಗ್ಗೆ ೧೧ ಗಂಟೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಕೃಷ್ಣೆಯ ಜಲಧಿಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲ್ಲಿದ್ದಾರೆ. ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ನೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ ಅವರ ಘನ ಉಪಸ್ಥಿತಿಯಲ್ಲಿ ಆಯೋಜನೆಗೊಂಡಿರುವ ಈ ಸಮಾರಂಭದಲ್ಲಿ ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ,ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಅಧ್ಯಕ್ಷತೆ ವಹಿಸಲ್ಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಡಾ.ಎಂ.ಬಿ.ಪಾಟೀಲ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಭಾಗಿಯಾಗಲ್ಲಿದ್ದಾರೆ.
ಸಂಸದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಸೇರಿದಂತೆ ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯ ಶಾಸಕರು, ವಿಪ ಸದಸ್ಯರು, ಅಧಿಕಾರಿಗಳು ಹಾಗೂ ಪ್ರಮುಖರು ಪಾಲ್ಗೊಳ್ಳಲ್ಲಿದ್ದಾರೆ.