ರೈತ ಮುಖಂಡ ಅರವಿಂದ ಕುಲಕರ್ಣಿ ಹಾಗೂ ಧುರೀಣ ಅಶೋಕಗೌಡ ಪಾಟೀಲ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಮಾಡುವ ನೆಪದಲ್ಲಿ ಸ್ವಂತ ಜಾಗೆಯಲ್ಲಿ ನಿರ್ಮಿಸಿದ ಮನೆಗಳಲ್ಲಿ ಬಹು ಕಾಲದಿಂದಲೂ ವಾಸವಾಗಿದ್ದ ಕುಟುಂಬಗಳನ್ನು ಅಭಿವೃದ್ಧಿಯ ನೆಪದಲ್ಲಿ ಅಂದಾಜು ೧೪೨ ಮನೆಗಳ ಕುಟುಂಬಗಳನ್ನು ಹೊರ ಹಾಕಿ ಎಲ್ಲ ಮನೆಗಳನ್ನು ಜೆ,ಸಿ.ಬಿ ಯಂತ್ರಗಳಿಂದ ನೆಲಸಮ ಮಾಡುವ ಮೂಲಕ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರು ಸ್ವಲ್ಪವೂ ಮಾನವಿಯತೆ ಇಲ್ಲದಂತೆ ವರ್ತಿಸಿದ್ದಾರೆ ಎಂದು ಎಂದು ರೈತ ಮುಖಂಡ ಅರವಿಂದ ಕುಲಕರ್ಣಿ ಹಾಗೂ ಕುದರಿ ಸಾಲವಾಡಗಿ ಗ್ರಾಮದ ಧುರಿಣರಾದ ಅಶೋಕಗೌಡ ಪಾಟೀಲ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರದಂದು ವಿಜಯಪುರ ನಗರದ ಅಂಬೇಡ್ಕರ ಭವನದಲ್ಲಿ ಕರೆದಿದ್ದ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲರು ಪೋಲೀಸ್ ಇಲಾಖೆ ಬಳಸಿಕೊಂಡು ಪೈಶಾಚಿಕ ಕೃತ್ಯವೆಸಗಿದ್ದಾರೆ. ಈಗ ಮನೆ ಕಳೆದುಕೊಂಡ ಕುಟುಂಬಸ್ಥರು ದಿಕ್ಕೂ ದೆಸೆ ಇಲ್ಲದಂತೆ ಬೀದಿ ಪಾಲಾಗಿದ್ದಾರೆ. ಮನೆ ಕಳೆದುಕೊಂಡ ಜನತೆ ಈ ರೀತಿ ಪೈಶಾಚಿಕ ಕೃತ್ಯವೆಸಗಿದ ಶಾಸಕರಿಗೆ ನೊಂದ ಕುಟುಂಬದವರೂ ಹಿಡಿ ಶಾಪ ಹಾಕುತ್ತಿದ್ದಾರೆ. ಏಕಾ ಏಕಿ ಮನೆಗಳನ್ನು ದ್ವಂಸ ಮಾಡಿರುವುದು ಇದರ ಹಿಂದಿನ ಉದ್ದೇಶವಾದರು ಏನು?. ಈ ರೀತಿ ಮನೆಗಳನ್ನು ನೆಲಸಮ ಮಾಡಿ ಗ್ರಾಮದ ಅಭಿವೃದ್ಧಿ ಮಾಡಿರುವುದು ಯಾವ ಪುರುಷಾರ್ಥಕ್ಕಾಗಿ?. ಇಂತಹ ಕೃತ್ಯ ವ್ಯಸಗಿರುವ ಶಾಸಕರ ಮನಸ್ಥಿತಿ ಯಾವ ಮಟ್ಟಕ್ಕೆ ಬಂದಿದೆ? ಸ್ವಂತ ಮನೆ ಉಳ್ಳವರ ಮೇಲೆ ದಬ್ಬಾಳಿಕೆ ಮಾಡಿ ಮನೆ ದ್ವಂಸ ಮಾಡಿ ಏನು ಸಾಧಿಸಲು ಹೊರಟಿದ್ದಾರೆಂದು ಶಾಸಕರನ್ನು ಪ್ರಶ್ನಿಸಿದ್ದಾರೆ.
ಮನೆ ಕಳೆದುಕೊಂಡು ನಿರಾಶ್ರಿತರಾದ ಸುಮಾರು ೧೪೨ ಕುಟುಂಬಗಳು ಯಾವುದೇ ಅಭಿವೃದ್ಧಿಗೆ ಅಡ್ಡಿ ಪಡಿಸುವುದಿಲ್ಲವೆಂದು ಹೇಳಿ ನಮಗೆ ಬೇರೆಕಡೆ ಮನೆ ನಿರ್ಮಾಣ ಮಾಡಿ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಟ್ಟರೆ ಮನೆ ತೆರವುಗೊಳಿಸಲು ನಮ್ಮಿಂದ ಯಾವುದೇ ಅಡ್ಡಿವಿಲ್ಲವೆಂದು ತಿಳಿಸಿದ್ದರೂ ಕೂಡಾ ಸಮಯವಕಾಶ ಕೊಡದೇ .ಅದಕ್ಕೆ ಖ್ಯಾರೆ ಅನ್ನದೇ ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರು ಪೋಲೀಸ್ ಇಲಾಖೆಯ ಭದ್ರತೆಯೊಂದಿಗೆ ಮನೆಗಳನ್ನು ಕೆಡಿವಿ ಕುಟುಂಬಸ್ಥರನ್ನು ಬೀದಿಗೆ ತರಲಾಗಿದೆ. ರಸ್ತೆ ಅಗಲೀಕರಣ ಮಾಡಲು ಇನ್ನೂ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲವೆಂದು ತಿಳಿದು ಬಂದಿದೆ. ಹಾಗಿದ್ದರೆ ಸ್ವಂತ ಮನೆಗಳನ್ನು ತೆರೆವುಗೊಳಿಸಲು ಇವರಿಗೆ ಹೇಳಿದವರು ಯಾರು. ೬೦ ಕ್ಕೂ ಹೆಚ್ಚು ಪೋಲೀಸ್ ಭದ್ರತೆಯಲ್ಲಿ ಮನೆಗಳನ್ನು ತೆರೆವುಗೊಳಿಸಲು ನ್ಯಾಯಾಲಯದಿಂದ ಆದೇಶ ಪಡೆದುಕೊಂಡಿದ್ದಾರೆ ಹೇಗೆ?. ರಸ್ತೆಯ ಅಗಲೀಕರಣಕ್ಕೆ ಸರ್ಕಾರದಿಂದ ಒಂದು ಬಿಡಿಗಾಸು ಹಣ ಬಂದಿಲ್ಲವೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಆದರೆ ದಬ್ಬಾಳಿಕೆಯಿಂದ ಮನೆಗಳನ್ನು ಹಾಳು ಮಾಡಲಾಗಿದೆ. ಈಗ ಬೀದಿಗೆ ಬಿದ್ದ ಕುಟುಂಬಗಳ ಗತಿ ಏನು?. ಅವರ ಬದುಕನ್ನೇ ಮುರಾಬಟ್ಟಿ ಮಾಡಿದ ಶಾಸಕರು ತಾವೇ ಇದಕ್ಕೆ ಜವಾಬ್ದಾರಿ ಹೊತ್ತುಕೊಂಡು ಈಗ ತೆರೆವುಗೊಳಿಸಿರುವ ಜಾಗೆಯಲ್ಲಿಯೇ ಹೊಸ ಮನೆಗಳನ್ನು ನಿರ್ಮಿಸಿಕೊಡಬೇಕು. ಒಂದು ವೇಳೆ ನೊಂದ ಕುಟುಂಬಗಳಿಗೆ ನ್ಯಾಯ ಕೊಡದಿದ್ದರೆ ಶಾಸಕರ ಮನೆಯ ಮುಂದೆ ಧರಣಿ ಸತ್ಯಾಗ್ರಹ ಕುಳಿತುಕೊಳ್ಳಬೇಕಾಗುತ್ತದೆ ಎಂದು ರೈತ ಮುಖಂಡ ಅರವಿಂದ ಕುಲಕರ್ಣಿ ಮತ್ತು ಅಶೋಕಗೌಡ ಪಾಟೀಲ ಎಚ್ಚರಿಸಿದ್ದಾರೆ.