ಲೇಖನ
– ಡಾ.ರಾಜಶೇಖರ ನಾಗೂರ
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ಈ ಜೀವನ ಎನ್ನುವುದು ನಾವು ಹೆಜ್ಜೆ ಇಟ್ಟ ತಕ್ಷಣ ತೆರೆದುಕೊಳ್ಳುವ ಕೆಂಪು ಹಾಸಿಗೆ ( Red carpet) ಖಂಡಿತ ಅಲ್ಲಾ. ಇಲ್ಲಿ ಪ್ರತಿಯೊಂದು ಕ್ರಿಯೆಗೂ, ಪ್ರಕ್ರಿಯೆಗೂ, ಕಾರ್ಯಕ್ಕೂ ಸಮಯ ಬೇಕು. ಆ ಸಮಯ ಬರುವವರೆಗೆ ಕಾಯುವ ತಾಳ್ಮೆ ನಮಗಿರಬೇಕು. ಯಾರು ಈ ತಾಳ್ಮೆಯನ್ನು ಮೈಗೂಡಿಸಿಕೊಂಡು ಸಾಗುತ್ತಾರೋ ಅವರು ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಬಲ್ಲರು. ಏನನ್ನಾದರೂ ಪಡೆಯಬಲ್ಲರು.
ತಾಯಿಯ ಗರ್ಭದಿಂದ ಮಗು ಜನಿಸಲು 9 ತಿಂಗಳು ತಾಳ್ಮೆಯಿಂದ ಕಾಯಬೇಕು. ಒಂದು ರಾತ್ರಿ, ಹಗಲಾಗಿ ಪರಿವರ್ತನೆ ಹೊಂದಲು 12 ಗಂಟೆಗಳು ಕಳೆಯಲೇ ಬೇಕು. ಒಂದು ಮತ ಚಲಾಯಿಸುವ ಹಕ್ಕು ಪಡೆಯಲು 18 ವರ್ಷದವನಾಗಲೇ ಬೇಕು. ಹೀಗೆ ಬದುಕಿನಲ್ಲಿ ತಾಳ್ಮೆಯೇ ಅಮೂಲ್ಯ ಸಂಪತ್ತು.
ಈ ಬದುಕನ್ನು ಒಲಿಸಿ ಕೊಳ್ಳುವುದು ಎಂದರೆ ದೇವರನ್ನು ತಾಳ್ಮೆಯಿಂದ ಒಲಿಸಿಕೊಂಡಂತೆ. ತಾಳ್ಮೆ ಇಲ್ಲದ ವರ್ತನೆ ನಮ್ಮನ್ನು ಎಲ್ಲಿಯೂ ಕೊಂಡೊಯುವುದಿಲ್ಲ. ಈ ತಾಳ್ಮೆಯ ಮಹತ್ವವನ್ನು ಒಂದು ಘಟನೆಯ ಮೂಲಕ ಪ್ರಸ್ತುತಪಡಿಸುತ್ತೇನೆ.

ಮಹಾಭಾರತದ ಅನುಷಾಸನ ಪರ್ವದಲ್ಲಿ ಭೀಷ್ಮ ಪಿತಾಮಹ ಒಂದು ಮಾತನ್ನು ಹೇಳುತ್ತಾನೆ. ಯಾವುದೇ ಒಂದು ಕಾರ್ಯವನ್ನು ನಿರಂತರವಾಗಿ 12 ವರ್ಷಗಳ ಕಾಲ ಬಿಟ್ಟೂಬಿಡದೆ ಮಾಡಿದರೆ ಆ ಕಾರ್ಯ ಸಿದ್ದಿ ಆಗುವುದು ಎಂದು.
‘ಗೋಕುಲ’ ಎಂಬಲ್ಲಿ ‘ಕೃಷ್ಣದಾಸ’ ಎಂಬ ವಯಸ್ಸಾದ ಕೃಷ್ಣನ ಭಕ್ತನಿದ್ದ. ಮಹಾಭಾರತವನ್ನು ಆಲಿಸುವಾಗ ಈ ಮೇಲಿನ ಭಿಷ್ಮನ ಮಾತು ಇವನ ಕಿವಿಗೆ ಬೀಳುತ್ತದೆ. ಭೀಷ್ಮನ ಮಾತಿನಂತೆ ಇವನು ಕೂಡ ಮನಸ್ಸಲ್ಲಿ ಒಂದು ಸಂಕಲ್ಪವನ್ನು ಮಾಡಿಕೊಂಡು ಸತತ 12 ವರ್ಷ ಕಾರ್ಯೋನ್ಮುಕನಾಗಿ ಈ ಮಾತನ್ನು ಪರೀಕ್ಷೆ ಮಾಡೋಣ ಅಂದ್ಕೊಂಡ.
ಶ್ರೀಕೃಷ್ಣನ ದೇವಸ್ಥಾನಕ್ಕೆ ಹೋಗಿ ಆ ದೇವರ ಮೂರ್ತಿಗೆ ಹೀಗೆ ಹೇಳುತ್ತಾನೆ. ಕೃಷ್ಣನೇ ಸತತ ಮುಂದಿನ 12 ವರ್ಷ ಪ್ರತಿದಿನ ನಾನು ನಿನ್ನ ದೇವಸ್ಥಾನಕ್ಕೆ ಬಂದು ಹೂಮಾಲೆಯನ್ನು ಹಾಕಿ ಹೋಗುತ್ತೇನೆ. 12 ವರ್ಷ ಮುಗಿದು 13ನೇ ವರ್ಷದ ಮೊದಲನೇ ದಿನ ಈ ಹೋಮಾಲೆಯನ್ನು ಹಾಕಿಸಿಕೊಳ್ಳಲು ನೀನು ನಾನಿರುವಲ್ಲಿಗೆ ಬರಬೇಕು. ಇದಷ್ಟೇ ನನ್ನ ಸಂಕಲ್ಪ ಎಂದು ಹೇಳಿ ಮೊದಲ ದಿನ ಹೂಮಾಲೆಯನ್ನು ಹಾಕಿ ಹೊರಡುತ್ತಾನೆ. ಹೀಗೆ ಪ್ರತಿ ದಿನ ತಾಳ್ಮೆಯಿಂದ ಅಷ್ಟೇ ಭಕ್ತಿಯಿಂದ ಮನಸ್ಸಲ್ಲಿ ಸ್ವಲ್ಪವೂ ಬೇಸರಿಸಿಕೊಳ್ಳದೆ ಹೂಮಾಲೆಯನ್ನು ಮಾಡಿಕೊಂಡು ಬಂದು ಶ್ರೀಕೃಷ್ಣನ ಮೂರ್ತಿಗೆ ಹಾಕಿ ಪೂಜೆ ಮಾಡಿ ಹೊರಡುತ್ತಿರುತ್ತಾನೆ.
ಪ್ರತಿಯೊಬ್ಬರೂ ಇವನ ತಾಳ್ಮೆಗೆ ಮೊದಲು ಹುಚ್ಚ ಎಂದರೂ ಕೂಡ ಆಮೇಲೆ ತಲೆದೂಗುತ್ತಾರೆ. ಕೃಷ್ಣದಾಸ ಹೀಗೆ ತನ್ನ ಅಛಲವಾದ ಭಕ್ತಿಯಿಂದ ಅಗಾಧವಾದ ತಾಳ್ಮೆಯಿಂದ 12 ವರ್ಷಗಳ ಕಾಲ ಸತತವಾಗಿ ಶ್ರೀ ಕೃಷ್ಣನಿಗೆ ಹೂಮಾಲೆಯನ್ನು ಹಾಕಿ 12 ವರ್ಷ ಕಳೆಯುತ್ತಾನೆ. 13ನೇ ವರ್ಷದ ಮೊದಲ ದಿನ ಬಂದಾಗ ಇಂದು ಶ್ರೀ ಕೃಷ್ಣ ನಾನಿರುವಲ್ಲಿಗೆ ಹಾರ ಹಾಕಿಸಿಕೊಳ್ಳಲು ಬರುತ್ತಾನೆ ಎಂದುಕೊಂಡು ಅವತ್ತು ದೇವಸ್ಥಾನಕ್ಕೆ ಹೋಗದೆ ತನ್ನ ಗುಡಿಸಲಿನಲ್ಲಿಯೇ ಎಲ್ಲ ರೀತಿಯ ತಿಂಡಿಗಳನ್ನು ಮಾಡಿಕೊಂಡು ಶ್ರೀ ಕೃಷ್ಣನಿಗಾಗಿ ರಾತ್ರಿಯಿಂದಲೇ ಬೆಳಕಾಗುವವರೆಗೆ ಕುತೂಹಲದಿಂದ ಕಾಯುತ್ತಾನೆ. ಪೂಜೆಗೆ ಹೂಮಾಲೆ ಸಿದ್ದ ಮಾಡಿಕೊಂಡಿರುತ್ತಾನೆ.
ಆದರೆ ಬೆಳಿಗ್ಗೆ ಸುಮಾರು ಹೊತ್ತು ಕಾಯ್ದುರೂ ಶ್ರೀ ಕೃಷ್ಣ ಬರಲೇ ಇಲ್ಲ. ಆ ಮುದುಕ ಸ್ವಲ್ಪ ಬೇಸರಗೊಂಡರು ಕೂಡ ತಾಳ್ಮೆಯಿಂದ ಕಾಯುವುದನ್ನು ಬಿಡುವುದಿಲ್ಲ. ಬೆಳಿಗ್ಗೆ ಕಳೆಯಿತು ಮಧ್ಯಾಹ್ನವಾಯಿತು. ಮಧ್ಯಾಹ್ನ ಕಳೆಯಿತು ಸಾಯಂಕಾಲವಾಯಿತು. ಕೃಷ್ಣನ ಆಗಮನ ಆಗಲೇ ಇಲ್ಲ. ಯಾಕೋ ಅವನಿಗೆ ಸಂಶಯ ಬರಲು ಪ್ರಾರಂಭವಾಯಿತು. ಬೇಸರವಾಗಲು ಪ್ರಾರಂಭವಾಯಿತು. ಬೆಳಿಗ್ಗೆಯಿಂದ ಹೂವಿನ ಹಾರವನ್ನು ಸಿದ್ಧ ಮಾಡಿಕೊಂಡು ನಾನು 13ನೇ ವರ್ಷದ ಮೊದಲನೇ ದಿನ ಬೆಳಗ್ಗೆಯಿಂದ ಕಾಯುತ್ತಿದ್ದರೂ ಕೂಡ ಶ್ರೀ ಕೃಷ್ಣ ಬರಲೇ ಇಲ್ಲ ಎಂದುಕೊಂಡು, ನೊಂದುಕೊಂಡು ರಾತ್ರಿಯಿಂದ ಸಿದ್ಧಮಾಡಿಕೊಂಡ ಎಲ್ಲಾ ತಿಂಡಿ ಪದಾರ್ಥಗಳನ್ನು ತನ್ನ ಮೈ ಮೇಲಿನ ಬಟ್ಟೆಯಲ್ಲಿ ಕಟ್ಟಿ ತನ್ನ ಗುಡಿಸಲಿನಿಂದ ಹೊರಬಂದು ಶ್ರೀ ಕೃಷ್ಣನ ಮಂದಿರದ ಕಡೆ ನೋಡುತ್ತಾ ಯಾವ ಕೃಷ್ಣನೂ ಇಲ್ಲ, ಯಾವ ದೇವರು ಇಲ್ಲ. ಇದೊಂದು ಕಲ್ಲಿನ ಮೂರ್ತಿಯಷ್ಟೇ. ಶ್ರೀಕೃಷ್ಣ ಇರುವುದೇ ಸುಳ್ಳು ಎಂದು ಕಣ್ಣೀರು ಹಾಕುತ್ತಾ ರಸ್ತೆಯ ಆಚೆ, ತಿಂಡಿಗಳನ್ನು ಎಸೆಯಲು ಹೊರಡುತ್ತಾನೆ. ಅಷ್ಟರಲ್ಲಿ ಇನ್ನೊಂದು ಕಡೆಯಿಂದ ನೂರಾರು ಗೋವುಗಳ ದಂಡು ಇವನೆಡೆ ದಾವಿಸಿ ಬರುತ್ತದೆ. ಆ ದನಗಳನ್ನು ಕಾಯಲು ಇರುವ ಆ ಹುಡುಗ ಕೂಗುತ್ತಾ ಅಜ್ಜ ದಾರಿಯಿಂದ ಆಚೆ ಸರಿ ಗೋವುಗಳು ತಿವಿದಾವು ಎನ್ನುತ್ತಾ ಹತ್ತಿರ ಬರುತ್ತಾನೆ.
ಅಜ್ಜ ನಿನ್ನ ಬಟ್ಟೆ ಗಂಟಿನಲ್ಲಿ ಏನೋ ಇರುವ ಹಾಗಿದೆ! ತಿಂಡಿಯ ಸುವಾಸನೆ ಬರುತ್ತಿದೆ. ನೀನು ಊಟಾ ಮಾಡಿದ ಹಾಗೆ ಕಾಣುವುದಿಲ್ಲ. ಯಾಕೆ ಎಂದು ಬಾಲಕ ಕೇಳುತ್ತಾನೆ. ಆಗ ಆ ಕೃಷ್ಣದಾಸನು ನಡೆದದ್ದನ್ನು ಹುಡುಗನಿಗೆ ವಿವರಿಸುತ್ತಾನೆ ಈ ಶ್ರೀ ಕೃಷ್ಣನಿಗೆ 12 ವರ್ಷಗಳ ಕಾಲ ಸತತವಾಗಿ ನಾನು ಅವನ ಮಂದಿರಕ್ಕೆ ಹೋಗಿ ಹೂ ಮಾಲೆಯನ್ನು ಹಾಕಿ ಬಂದಿದ್ದೇನೆ. ಇವತ್ತು 13ನೇ ವರ್ಷದ ಮೊದಲ ದಿನ ಅವನು ನಾನಿರುವಲ್ಲಿಗೆ ಬರಬೇಕು. ನನ್ನಲ್ಲಿಗೆ ಬಂದು ಹೋಮಾಲೆಯನ್ನು ಹಾಕಿಸಿಕೊಳ್ಳಬೇಕು ಎಂಬುದು ನನ್ನ ಇಚ್ಛೆಯಾಗಿತ್ತು. ಇದಷ್ಟೇ ನನ್ನ ಜೀವನದ ಉದ್ದೇಶ. ಆದರೆ ಈ ಕೃಷ್ಣ ಬರಲೇ ಇಲ್ಲ. ಬೆಳಿಗ್ಗೆಯಿಂದ ಕಾಯುತ್ತಿದ್ದೇನೆ ಸಾಯಂಕಾಲ ಆಯ್ತು. ಇಲ್ಲಿವರೆಗೂ ಬರಲಿಲ್ಲ ನಿರಾಶೆಯಾಗುವುದಿಲ್ಲವೇ ನೀನೇ ಹೇಳು! ಎಲ್ಲಾ ಸುಳ್ಳು. ಕೃಷ್ಣನೆಂಬ ದೇವರೇ ಇಲ್ಲ ಎಂದು ಬೇಸರದಿಂದ ಹೇಳುತ್ತಾನೆ.
ಅಜ್ಜ ಇಷ್ಟೊಂದು ಕೋಪ ಯಾಕೆ ಮಾಡಿಕೊಳ್ಳುತ್ತಿ? ಬೆಳಿಗ್ಗೆಯಿಂದ ನಾನು ಕೂಡ ಏನನ್ನೂ ತಿಂದಿಲ್ಲ. ನನಗೆ ಯಾಕೆ ನೀನು ತಿಂಡಿಯನ್ನು ತಿನ್ನಿಸಬಾರದು ಎನ್ನುತ್ತಾನೆ. ಆಯ್ತು ತಿನ್ನು ಎಂದು ಕೃಷ್ಣದಾಸ ಬಾಲಕನಿಗೆ ಹೇಳುತ್ತಾನೆ. ಅಜ್ಜ ನಿನಗೆ ಕಾಣುತ್ತಿಲ್ಲವೇ ನನ್ನ ಕೈ ಗೊಬ್ಬರದಿಂದ ಕೊಳೆಯಾಗಿವೆ. ನೀನೇ ತಿನಿಸು ಎನ್ನುತ್ತಾನೆ. ಆಗ ಕೃಷ್ಣದಾಸ ಆಯ್ತು ನಾನೇ ತಿನ್ನಿಸುತ್ತೇನೆ ಎಂದು ಆ ಬಾಲಕನಿಗೆ ತುತ್ತು ಮಾಡಿ ತಿನ್ನಿಸಲು ಪ್ರಾರಂಭಿಸುತ್ತಾನೆ. ಬಾಲಕನಿಗೆ ಒಂದೆರಡು ತುತ್ತು ತಿನಿಸಿದ ತಕ್ಷಣ ಆ ಬಾಲಕನ ಕಣ್ಣುಗಳು ಕೆಂಪಾಗಿ, ಕಣ್ಣಲ್ಲಿ ನೀರು ತಾನಾಗಿಯೇ ಸುರಿಯಲು ಪ್ರಾರಂಭವಾಗುತ್ತದೆ. ಬಾಲಕನ ಕಣ್ಣಲ್ಲಿ ನೀರನ್ನು ನೋಡಿ ಕೃಷ್ಣದಾಸ ಹೀಗೆ ಕೇಳುತ್ತಾನೆ “ಅಲ್ಲ ಮಗೂ, ಹಸಿವಾಗಿದೆ ಎಂದೆ. ಊಟವನ್ನು ತಿನಿಸುತ್ತಿದ್ದೇನೆ ಅಲ್ವಾ. ತಿನ್ನು. ನೀನ್ಯಾಕೆ ಅಳುತ್ತಿರುವೆ?!” ಎಂದು.
ಆಗ ಬಾಲಕ ಹೇಳುತ್ತಾನೆ “ಅಜ್ಜಾ ಇವತ್ತು ನನಗೆ ಹೂ ಮಾಲೆ ಹಾಕುವುದಿಲ್ಲವೇ” ಎಂದು.
ಆಗ ಕೃಷ್ಣದಾಸ ಬಾಲಕನಿಗೆ ಕೇಳುತ್ತಾನೆ ಯಾರು ನೀನು ಎಂದು. ಆಗ ಬಾಲಕ ಹೇಳುತ್ತಾನೆ ನಾನೇ ಕೃಷ್ಣ ಎಂದು. ಬಾಲಕ ಮಾತು ಮುಂದುವರೆಸುತ್ತಾ “ಅಜ್ಜ ಪ್ರತಿದಿನ 12 ವರ್ಷಗಳ ಕಾಲ ನೀನು ಹೂ ಮಾಲೆಯನ್ನು ತೊಡಿಸಲು ನನ್ನ ಕೊರಳಿನ ಸುತ್ತ ನಿನ್ನ ಎರಡು ಕೈಗಳನ್ನು ಬಳಸಿದಾಗ ನನ್ನನ್ನು ಅಪ್ಪಿಕೊಂಡಂತೆ ಭಾಸವಾಗುತ್ತಿತ್ತು. ಆದರೆ 13ನೇ ವರ್ಷದ ಮೊದಲ ದಿನ ಬೆಳಗಿನ ಜಾವ ಆ ಅಪ್ಪುಗೆ ಆ ಲಿಂಗನ ನನಗೆ ಕಾಣುತ್ತಿಲ್ಲ. ಆ ನಿನ್ನ ಭಕ್ತಿಯ ಪರಾಕಾಷ್ಠೆಯ ಅಪ್ಪುಗೆ ಇಲ್ಲದೆ ಬೆಳಿಗ್ಗೆಯಿಂದ ವಿಚಲಿತನಾಗಿದ್ದೇನೆ. ಅದೆಷ್ಟೇ ಭಕ್ತರು ಬೆಳಿಗ್ಗೆಯಿಂದ ಅನೇಕ ಭೋಜನಗಳನ್ನು ನನಗೆ ಅರ್ಪಿಸಿದರು ಕೂಡ ಯಾವುದೊಂದನ್ನು ತಿನ್ನದೇ ನಿನ್ನ ಆಲಿಂಗನದ ಭಕ್ತಿಯ ಅಪ್ಪುಗೆ ಸಲುವಾಗಿ ನಾನು ಏನನ್ನು ತಿನ್ನದೇ ನಿನ್ನ ಹತ್ತಿರ ಬಂದಿದ್ದೇನೆ. ನನಗೆ ಹೊಟ್ಟೆ ತುಂಬಿತು. ಈಗ ಹೂ ಮಾಲೆಯನ್ನು ಹಾಕು ಎನ್ನುತ್ತಾನೆ.
ಕೃಷ್ಣ ದಾಸನ ಆನಂದಕ್ಕೆ ಪಾರವೇ ಇಲ್ಲದಂತಾಯ್ತು. ಆನಂದ ಭಾಷ್ಪ ಉದುರಿದವು. ಅವನ 12 ವರ್ಷದ ಸತತ ಭಕ್ತಿಗೆ, ಆ ತಾಳ್ಮೆಗೆ ಕೊನೆಗೂ ಫಲ ಸಿಕ್ಕಾಯ್ತು. ಶ್ರೀ ಕೃಷ್ಣ ಅವನಿದ್ದಲ್ಲಿಗೆ ಬಂದು ಅವನ ಜೀವನದ ಭಕ್ತಿಯ ಸಾಕ್ಷಾತ್ಕಾರಕ್ಕೆ ಕಾರಣನಾದ.
ಸ್ನೇಹಿತರೆ ಈ ಜೀವನವು ಹಾಗೆಯೇ. ತಾಳ್ಮೆ ಇದ್ದವನಿಗೆ ಮಾತ್ರ ಈ ಬದುಕು ತೆರೆದುಕೊಳ್ಳುತ್ತದೆ. ತಾಳ್ಮೆಯೇ ಈ ಬದುಕಿನ ಅಮೂಲ್ಯ ಸಂಪತ್ತು. ತಾಳ್ಮೆ ಇರಲಿ.
