ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಾನವನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದದ್ದು. ಕಣ್ಣು ದಾನ ಮಾಡುವ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಬಾಳು ಬೆಳಗಬೇಕು ಎಂದು ವಾರದ ಕಣ್ಣಿನ ಆಸ್ಪತ್ರೆಯ ಡಾ.ಸುಷ್ಮಾ ವಾರದ ಹೇಳಿದರು.
ಸಿಂದಗಿ ಪಟ್ಟಣದ ಜಿ.ಪಿಪೋರವಾಲ ಕಲಾ ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ಎನ್.ಎಸ್.ಎಸ್, ಎನ್.ಸಿಸಿ. ಹಾಗೂ ಯೂತ್ ರೆಡ್ ಕ್ರಾಸ್ ಘಟಕಗಳ ಅಡಿಯಲ್ಲಿ ವಾರದ್ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಅಂತರಾಷ್ಟ್ರೀಯ ನೇತ್ರದಾನ ಸಪ್ತಾಹ ಅಂಗವಾಗಿ ಹಮ್ಮಿಕೊಂಡ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೇತ್ರದಾನ ಮಹಾದಾನ. ಮಾನವನ ದೇಹದ ಜೊತೆಗೆ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡಬೇಕು. ಮಾನವನ ದೇಹಕ್ಕೆ ಸಾವು ಬರುತ್ತದೆ. ಆದರೆ ಕಣ್ಣಿಗೆ ಸಾವಿಲ್ಲ. ಕಣ್ಣುಗಳು ಅಮೂಲ್ಯ ಅಂಗಗಳು. ಕಣ್ಣುಗಳ ಆರೈಕೆಯಷ್ಟೇ ರಕ್ಷಣೆಯೂ ಮುಖ್ಯ.ಇತ್ತೀಚಿನ ದಿನಮಾನಗಳಲ್ಲಿ ಮೊಬೈಲ್‌ನ ಅತಿಯಾದ ಬಳಕೆಯಿಂದ ಮಕ್ಕಳು ಮತ್ತು ವಯೋವೃದ್ಧರಲ್ಲಿ ದೃಷ್ಟಿ ದೋಷ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ ಎಂದು ಕಳವಳ ವ್ಯಕ್ತಪಡಿಸಿದರು.
ಈ ವೇಳೆ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ತಪಾಸಣೆ ಮಾಡಿಸಲಾಯಿತು. ಎನ್.ಸಿ.ಸಿ ವಿಭಾಗದ ಮುಖ್ಯಸ್ಥ ಡಾ.ರವಿ ಲಮಾಣಿ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಿ.ಎಂ.ಪಾಟೀಲ ವಹಿಸಿದ್ದರು. ಐಕ್ಯೂಎಸಿ ಘಟಕದ ಸಹ ಸಂಯೋಜಕ ಭೀಮಾಶಂಕರ ಅರಳಗುಂಡಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಘಟಕದ ಅಧಿಕಾರಿ ವಿ.ಎ.ಪಾಂಡೆ ಎಸ್.ಎಲ್.ಪಾಟೀಲ ಸೇರಿದಂತೆ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.