ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ೧೧ನೇ ವಾರ್ಡಿನ ಸರ್ವೆ ನಂ ೫೫೯/೧ ನ ಮುಖ್ಯ ರಸ್ತೆಯಲ್ಲಿ ನಿರ್ಮಿಸಿದ ಅನಧಿಕೃತ ಕಟ್ಟೆಯನ್ನು ತೆರವುಗೊಳಿಸಲು ಆಗ್ರಹಿಸಿ ಸಾರ್ವಜನಿಕರು ಶಿರಸ್ತೇದಾರರಾದ ಡಿ.ಬಿ.ಭೋವಿ ಹಾಗೂ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಗುರುವಾರ ಆಗಮಿಸಿದ ೧೧ನೇ ವಾರ್ಡಿನ ರಹವಾಸಿಗಳು ತಮ್ಮ ವಾರ್ಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ನಿರ್ಮಿಸಿದ ಕಟ್ಟೆಯನ್ನು ತೆರವು ಗೊಳಿಸಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಶಿಕ್ಷಕ ಪಾಂಡುರAಗ ಗಂಜ್ಯಾಳ ಮಾತನಾಡಿ, ನಮ್ಮ ಲೇಔಟ್‌ನ ಪ್ರಮುಖ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ಮೃತಪಟ್ಟ ಆಕಳನ್ನು ಹೂಳಲಾಯಿತು. ನಂತರ ಅಗಸ್ಟ್ ೧೫ ರ ರಾತ್ರಿಯಂದು ಏಕಾಏಕಿ ಕೆಲವು ಯುವಕರು ಸೇರಿಕೊಂಡು ಆಕಳು ಹೂಳಿದ ಸ್ಥಳದಲ್ಲಿ ಕಟ್ಟೆ ನಿರ್ಮಿಸಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಇದರ ಮೇಲೆ ಕಟ್ಟಡ ನಿರ್ಮಿಸುವ ಇರಾದೆ ಹೊಂದಿದ್ದಾರೆ.
ನಮ್ಮ ನಿವೇಶನ ಹೊಂದಿದ ಲೇಔಟ್‌ನಲ್ಲಿ ಮುಂದಿನ ದಿನಗಳಲ್ಲಿ ಸಿಸಿ ರಸ್ತೆ, ಚರಂಡಿ, ಸಹಿತ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿವೆ. ಇವುಗಳಿಗೆಲ್ಲಾ ಕಟ್ಟೆ ಅಡ್ಡಿಯಾಗುತ್ತದೆ. ಜೊತೆಗೆ ಇಲ್ಲಿರುವ ವಿವಿಧ ಸಮುದಾಯಗಳ ಮತೀಯ ಭಾವನೆಗಳಿಗೆ ನೋವುಂಟು ಮಾಡುವ ಘಟನೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಇಲ್ಲಿರುವ ಕಟ್ಟೆಯನ್ನು ಕೂಡಲೇ ತೆರವುಗೊಳಿಸಲು ಅಗತ್ಯ ಕ್ರಮ ವಹಿಸಬೇಕು. ಕಟ್ಟೆ ತೆರವಿಗೆ ವಿನಂತಿಸಿ ನಾವು ಈಗಾಗಲೇ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಮುಖ್ಯಾಧಿಕಾರಿಗಳಿಗೂ ಸಹ ಮನವಿ ಮಾಡಿದ್ದೇವೆ ಎಂದು ತಿಳಿಸಿ ಮನವಿ ಸಲ್ಲಿಸಿದರು.
ನಿವೃತ್ತಶಿಕ್ಷಕ ಕಾಶೀರಾಯ ಪಾಟೀಲ, ಮಲ್ಲಿಕ್‌ಸಾಬ್ ಯರಗಲ್ಲ್, ಎಸ್.ಡಿ.ಪಾಸೋಡಿ, ಸುರೇಶ ಅಂಗಡಿ, ಪಿ.ಪಿ. ಭುಯ್ಯಾರ, ವಿನೋದ ಚವ್ಹಾಣ, ರಾಘವೇಂದ್ರ ಗಂಜ್ಯಾಳ, ಎಂ.ಡಿ.ಢವಳಗಿ ಇದ್ದರು.