ಕಳಪೆ ಈರುಳ್ಳಿ ಬೀಜದಿಂದ ನಷ್ಟಗೊಂಡ ಅಂಕಲಗಿ ಗ್ರಾಮದ ರೈತನ ಹೊಲಕ್ಕೆ ವಿಜ್ಞಾನಿಗಳ ತಂಡ ಬೇಟಿ | ವಿಜ್ಞಾನಿಗಳಿಂದ ಈರುಳ್ಳಿ ಶ್ಯಾಂಪಲ್ ಸಂಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಈರುಳ್ಳಿ ನಷ್ಟ ಕುರಿತು ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಡನೆ ಬೇಟಿ ನೀಡಿದ್ದೇವೆ. ವರದಿ ಬಂದ ತಕ್ಷಣ ಈರುಳ್ಳಿ ಬೀಜದ ಕಂಪನಿ ಬೀಜಗಳು ಕಳಪೆ ಅಂತಾ ಸಾಬೀತಾದರೆ ನಾವೇ ಸ್ವತಃ ದೂರನ್ನು ದಾಖಲಿಸಿ ಪರಿಹಾರ ಕೊಡಿಸುತ್ತೆವೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಬಸನಗೌಡ ಪಾಟೀಲ ಅವರು ಭರವಸೆ ನೀಡಿದರು.
ತಾಲೂಕಿನ ಅಂಕಲಗಿ ಗ್ರಾಮದ ಶಾರವ್ವ ಗುರಪ್ಪ ತಳವಾರ ಸರ್ವೇ ನಂ ೭೫/೫ ರ ಒಟ್ಟು ೪ ಎಕರೆ ಈರುಳ್ಳಿಯೂ ಸಂಪೂರ್ಣ ಹಾಳಾಗಿರುವ ಕುರಿತು ಜಿಲ್ಲಾಧಿಕಾರಿಗಳು, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳೊಡನೆ ಬಾಗಲಕೋಟ ಮತ್ತು ತಿಡಗುಂದಿ ವಿಜ್ಞಾನಿಗಳ ತಂಡ ಗುರುವಾರ ಬೆಳಿಗ್ಗೆ ಬೇಟಿ ನೀಡಿ ಶ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ವರದಿ ಸಲ್ಲಿಸುವುದಾಗಿ ವಿಜ್ಞಾನಿಗಳು ಹೇಳಿದರು.
ಕೃಷಿ ಇಲಾಖೆಯ ಜಾರಿದಳ ಸಹಾಯಕ ನಿರ್ದೇಶಕ ಎ.ಪಿ ಬಿರಾದಾರ ಅವರು ಮಾತನಾಡಿ, ವಿಜ್ಞಾನಿಗಳೊಂದಿಗೆ ಪ್ಲಾಟ್ ವಿಕ್ಷಣೆ ಮಾಡಿದ್ದೇವೆ. ವರದಿ ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೆವೆ ಅಂದರು.
ಈ ವೇಳೆ ತಿಡಗುಂದಿ ಸಸ್ಯ ಶರೀರ ಕ್ರಿಯಾ ಶಾಸ್ತ್ರ ತಜ್ಞ ಡಾ. ಮಲ್ಲಿಕಾರ್ಜುನ್ ಅವಟಿ, ಸಸ್ಯ ರೋಗಶಾಸ್ತ್ರ ತಜ್ಞ ರಮೇಶ್ ರಾಥೋಡ್, ಬಾಗಲಕೋಟೆಯ ಕೀಟಶಾಸ್ತ್ರಜ್ಞ ಡಾ.ಎಂ.ಎ ವಾಸಿಮ್, ಕೃಷಿ ಇಲಾಖೆಯ ಜಾರಿದಳದ ಸಹಾಯಕ ಕೃಷಿ ನಿರ್ದೇಶಕ ಡಾ.ಎ.ಪಿ ಬಿರಾದಾರ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಸನಗೌಡ ಪಾಟೀಲ, ತೋಟಗಾರಿಕಾ ಸಹಾಯಕ ಅಧಿಕಾರಿ ರಮೇಶ ಮಿರ್ಜಿ ಹಾಗೂ ಸಹಾಯಕರು ಇದ್ದರು.