ಕೊಲ್ಹಾರ ತಾಲೂಕು ರಚನೆ ಹೋರಾಟ ಸಮೀತಿ ಅಧ್ಯಕ್ಷ ಈರಣಗೌಡ ಕೋಮಾರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮುದ್ದೇಬಿಹಾಳ ಪಟ್ಟಣದಲ್ಲಿ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಸರಕಾರ ಮಂಜೂರು ಮಾಡಿರುವದು ಸ್ವಾಗತಾರ್ಹ ವಿಷಯವಾದರೂ ಕೊಲ್ಹಾರ ಕಂದಾಯ ತಾಲೂಕನ್ನು ಯಾವುದೇ ಕಾರಣಕ್ಕೂ ಮುದ್ದೇಬಿಹಾಳ ಜಿಲ್ಲಾ ನ್ಯಾಯಾಲಯ ವ್ಯಾಪ್ತಿಗೆ ಸೇರ್ಪಡೆ ಮಾಡಬಾರದು ಎಂದು ಕೊಲ್ಹಾರ ತಾಲೂಕು ರಚನಾ ಹೋರಾಟ ಸಮೀತಿ ಅಧ್ಯಕ್ಷ ಈರಣಗೌಡ ಬ ಕೋಮಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಜಯಪುರದ ಗೌರವಾನ್ವಿತ ಪ್ರಧಾನ ಜಿಲ್ಲಾ ನ್ಯಾಯಲಯದಿಂದ ಅಖಂಡ ಬಸವನ ಬಾಗೇವಾಡಿ ತಾಲೂಕಿನ ನ್ಯಾಯವಾದಿಗಳ ಸಂಘದ ಅಧ್ಯಕ್ಷರಿಗೆ ಕೊಲ್ಹಾರ ಕಂದಾಯ ತಾಲೂಕನ್ನು ಮುದ್ದೇಬಿಹಾಳ ಜಿಲ್ಲಾ ನ್ಯಾಯಾಲಯ ವ್ಯಾಪ್ತಿಗೆ ಸೇರ್ಪಡೆ ಮಾಡಲು ಅಭಿಪ್ರಾಯವನ್ನು ಕೇಳಿದ್ದು ಇದಕ್ಕೆ ಬಸವನ ಬಾಗೇವಾಡಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರು ಕೊಲ್ಹಾರ ಕಂದಾಯ ತಾಲೂಕನ್ನು ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಯಾವುದೇ ಹಳ್ಳಿಯ ಹೆಸರನ್ನು ಕೂಡ ಸೇರಿಸದೇ ಕೊಲ್ಹಾರ ಕಂದಾಯ ತಾಲೂಕನ್ನು ಈಗಿರುವ ವಿಜಯಪೂರ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ವ್ಯಾಪ್ತಿಯಲ್ಲಿಯೇ ಉಳಿಸಲು ಪತ್ರ ಕೊಡಬೇಕು ಎಂದು ಮನವಿ ಮಾಡಿದರು.
ಮುದ್ದೇಬಿಹಾಳ ಜಿಲ್ಲಾ ನ್ಯಾಯಾಲಯ ವ್ಯಾಪ್ತಿಗೆ ಸೇರ್ಪಡೆ ಮಾಡುವದರಿಂದ ಈ ಭಾಗದ ಸಾರ್ವಜನಿಕರಿಗೆ ವ್ಯಾಪಾರಸ್ತರಿಗೆ ಮಹಿಳೆಯರಿಗೆ ರೈತರಿಗೆ ತುಂಬಾ ತೊಂದರೆಯಾಗುತ್ತದೆ ಕಾರಣ ಮುದ್ದೇಬಿಹಾಳ ಪಟ್ಟಣವು ಕೊಲ್ಹಾರ ಪಟ್ಟಣ ಮತ್ತು ತಾಲೂಕು ವ್ಯಾಪ್ತಿಯ ಹಳ್ಳಿಗಳಿಗೆ ೬೦-೭೦ ಕಿ.ಮೀ ದೂರ ಇರುವದು ಸಮಯದ ತೊಂದರೆ ಹಾಗೂ ಸಾರಿಗೆ ಸಂಪರ್ಕದ ಅನಾನುಕೂಲವು ಅಗುವದಲ್ಲದೇ ವ್ಯರ್ಥ ಕಾಲಹರಣವಾಗುತ್ತದೆ. ವಿಜಯಪೂರವು ಕೇವಲ ೩೦-೪೦ ಕಿ.ಮೀ ಅಂತರದಲ್ಲಿ ಸಿಗುವದರಿಂದ ಮೇಲಾಗಿ ಕಳೆದ ಹಲವಾರು ವರ್ಷಗಳಿಂದ ಜಿಲ್ಲಾ ನ್ಯಾಯಾಲಯವು ವಿಜಯಪೂರದಲ್ಲಿಯೇ ಇರುವದು ಸಾರ್ವಜನಿಕರಿಗೆ ರೂಡಿಯಾಗಿದ್ದು ಆದ್ದರಿಂದ ಮಾನ್ಯ ಜಿಲ್ಲಾ ನ್ಯಾಯಾಲಯ ಘಟಕವಾಗಲಿ ಬಸವನ ಬಾಗೇವಾಡಿ ಘಟಕ ನ್ಯಾಯಾಲಯವಾಗಲಿ ಅಧ್ಯಕ್ಷರಲ್ಲಿ ಕೊಲ್ಹಾರ ಕಂದಾಯ ತಾಲೂಕನ್ನು ಮುದ್ದೇಬಿಹಾಳ ಜಿಲ್ಲಾ ಸತ್ರ ನ್ಯಾಯಾಲಯ ವ್ಯಾಪ್ತಿಗೆ ಸೇರ್ಪಡೆ ಮಾಡಬಾರದೆಂದು ವಿರೋಧ ವ್ಯಕ್ತಪಡಿಸಿದರು.

