ಒಳಮೀಸಲಾತಿ ಹಂಚಿಕೆ ವಿಚಾರದಲ್ಲಾದ ತಾರತಮ್ಯಕ್ಕೆ ತೀವ್ರ ಖಂಡನೆ | ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ ಹಾಗೂ ತಾಲೂಕು ಬಂಜಾರ ಸಂಘದಿಂದ ಒಳಮೀಸಲಾತಿ ಹಂಚಿಕೆ ವಿಚಾರದಲ್ಲಿ ಸರ್ಕಾರದ ತಾರತಮ್ಯವನ್ನು ಖಂಡಿಸಿ ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಬುಧವಾರ ಬೃಹತ್ ಪ್ರತಿಭಟನೆ ಬಂಜಾರ ಸಮಾಜ ಬಾಂಧವರು ಮಾಡಿದರು.
ಪಟ್ಟಣದ ಸಂತ ಸೇವಾಲಾಲ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ಆರಂಭಿಸಿದ ಸಮಾಜ ಬಾಂಧವರು ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಮಾರ್ಗವಾಗಿ ಗಣಪತಿ ವೃತ್ತದ ಮೂಲಕ ಬಸವೇಶ್ವರ ವೃತ್ತದವರೆಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಗಮಿಸಿ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದರು.
ಬಸವೇಶ್ವರ ವೃತ್ತದಲ್ಲಿ ಜರುಗಿದ ಪ್ರತಿಭಟನೆ ಸಭೆ ಉದ್ದೇಶಿಸಿ ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ಜಿಲ್ಲಾಧ್ಯಕ್ಷ ಡಾ.ಬಸವರಾಜ ಚವ್ಹಾಣ, ತಾಲೂಕಾಧ್ಯಕ್ಷ ಬಾಳು ರಾಠೋಡ ಮಾತನಾಡಿ, ಒಳಮೀಸಲಾತಿ ಕುರಿತು ನೀಡಿದ ವರದಿ ಅವೈಜ್ಞಾನಿಕ, ದೋಷಪೂರಿತವಾಗಿರುವ ವರದಿಯನ್ನು ಸರ್ಕಾರ ಜಾರಿಗೆ ತರಲು ಹೊರಟಿರುವದು ಬಂಜಾರ ಸಮಾಜ ಸೇರಿದಂತೆ ೬೩ ಸಮಾಜ ಬಾಂಧವರಿಗೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಬಸವ ತತ್ವದ ಕಾಯಕದ ತತ್ವ ಅಳವಡಿಸಿಕೊಂಡಿರುವ ಬಂಜಾರ ಸಮಾಜ ಬಾಂಧವರಿಗೆ ಈಚೆಗೆ ಸರ್ಕಾರ ಒಳಮೀಸಲಾತಿ ಕುರಿತು ತೆಗೆದುಕೊಂಡ ನಿರ್ಣಯ ಅನ್ಯಾಯವಾಗಿದೆ. ರಾಜ್ಯದಲ್ಲಿ ನಮ್ಮ ಸಮಾಜಕ್ಕೆ ಒಂದು ಲೋಕಸಭೆಗೆ ಟಿಕೆಟ್ ನೀಡಲಿಲ್ಲ. ನಮ್ಮ ಸಮಾಜದಿಂದ ಹೆಚ್ಚು ಜನರು ಶಾಸಕರು ಆಯ್ಕೆಯಾದರೂ ಒಂದು ಸಚಿವ ಸ್ಥಾನ ನೀಡಿಲ್ಲ. ಇದೀಗ ಒಳಮೀಸಲಾತಿಯಲ್ಲಿಯೂ ನಮ್ಮ ಸಮಾಜಕ್ಕೆ ಸರ್ಕಾರ ಅನ್ಯಾಯ ಮಾಡಲು ಹೊರಟಿದೆ. ಸೆ.೬ ರಂದು ಜಿಲ್ಲಾ ಮಟ್ಟದಲ್ಲಿ, ಸೆ.೧೦ ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಮ್ಮ ಬಾಂಧವರು ಸರ್ಕಾರದ ವಿರುದ್ಧ ಹೋರಾಟ ಮಾಡಲಿದ್ದಾರೆ. ಸರ್ಕಾರಕ್ಕೆ ಇದಕ್ಕೆ ಸ್ಪಂದಿಸಿ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸದೇ ಹೋದರೆ ಮುಂಬರುವ ದಿನಗಳಲ್ಲಿ ಎಲ್ಲ ಶಾಸಕರ ಮನೆಗ ಮುಂದೆ ಹೋರಾಟ ಹಮ್ಮಿಕೊಳ್ಳುವ ಮೂಲಕ ಸಮಾಜದ ಹಕ್ಕನ್ನು ಕೇಳುತ್ತೇವೆ ಎಂದರು.
ಜಿಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯಕ ಮಾತನಾಡಿ, ಒಳಮೀಸಲಾತಿಯಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ೨೦೧೧ ರ ಜನಗಣತಿ ಪ್ರಕಾರ ರಾಜ್ಯದಲ್ಲಿ ೨೫ಲಕ್ಷ ಬಂಜಾರ ಸಮಾಜ ಬಾಂಧವರು ಇದ್ದಾರೆ. ಸರ್ಕಾರ ಇದೀಗ ತಮ್ಮ ಸಮೀಕ್ಷೆಯಲ್ಲಿ ೧೧ ಲಕ್ಷ ತೋರಿಸಿದೆ. ಸರ್ಕಾರ ಸರಿಯಾಗಿ ಸಮೀಕ್ಷೆ ಮಾಡದೇ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದೆ. ನಮ್ಮ ವಿಜಯಪುರ ಜಿಲ್ಲೆಯಲ್ಲಿಯೇ ೩.೧೪ ಲಕ್ಷ ಸಮಾಜ ಬಾಂಧವರು ಇದ್ದಾರೆ. ಸರ್ಕಾರ ಇದನ್ನು ಅರಿತುಕೊಂಡು ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಪುರಸಭೆ ಸದಸ್ಯ ನೀಲು ನಾಯಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಜನಾಂಗದಲ್ಲಿ ಒಳಮೀಸಲಾತಿ ತರುವ ಮೂಲಕ ಜಗಳ ಹಚ್ಚುವ ಕಾರ್ಯ ಮಾಡುತ್ತಿದೆ. ಸರ್ಕಾರ ಒಳಮೀಸಲಾತಿ ಕೈಬಿಟ್ಟು ಮೊದಲಿನಂತೆ ಇರುವ ಮೀಸಲಾತಿಯನ್ನು ಮುಂದುವರಿಸಬೇಕು. ನಮ್ಮ ಸಮಾಜ ಬಾಂಧವರು ಶ್ರಮಜೀವಿಗಳಾಗಿದ್ದಾರೆ. ತಾಂಡಾದಲ್ಲಿ ರಸ್ತೆ, ಕುಡಿಯುವ ನೀರು, ವಾಸಕ್ಕೆ ಯೋಗ್ಯವಾದ ಮನೆಗಳು ನಮ್ಮ ಬಾಂಧವರಿಗೆ ಇಲ್ಲ. ಇದನ್ನು ಸರ್ಕಾರ ಅರಿತುಕೊಂಡು ಸಮಾಜಕ್ಕೆ ನ್ಯಾಯ ಒದಗಿಸಬೇಕು. ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷವಾಗುತ್ತಿದೆ. ನಮ್ಮ ಸಮಾಜಕ್ಕೆ ನ್ಯಾಯ ಒದಗಿಸದೇ ಹೋದರೆ ಸರ್ಕಾರಕ್ಕೆ ಮೂರಾಬಟ್ಟೆ ಆರಂಭವಾಗುವದರಲ್ಲಿ ಸಂದೇಹವಿಲ್ಲ ಎಂದರು.
ಕೇಸರಟ್ಟಿಯ ಸೋಮಲಿಂಗ ಸ್ವಾಮೀಜಿ ಮಾತನಾಡಿ, ಸರ್ಕಾರ ನಮ್ಮ ಜನರ ಸ್ಥಿತಿಗತಿ ಅರಿತುಕೊಳ್ಳದೇ ಸರಿಯಾಗಿ ಸಮೀಕ್ಷೆ ಮಾಡದೇ ಒಳಮೀಸಲಾತಿ ಜಾರಿಗೆ ತರಲು ಹೊರಟಿದೆ. ಇದರಿಂದಾಗಿ ನಮ್ಮ ಜನಾಂಗ ಸೇರಿದಂತೆ ೬೩ ಜನಾಂಗಗಳಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ಎರಡು ಜಾತಿಗಳಿಗೆ ಮಾತ್ರ ಒಲೈಕೆ ಮಾಡಲು ಹೊರಟಂತೆ ಇದೆ.ಡಾ.ಅಂಬೇಡ್ಕರ ಆಶಯದಂತೆ ಎಲ್ಲ ಜನಾಂಗಕ್ಕೂ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ನ್ಯಾಯ ಸಿಗುವಂತೆ ಸಿಎಂ ಸಿದ್ದರಾಮಯ್ಯನವರು ಗಮನ ಹರಿಸಬೇಕು. ಹಿಂದೆ ಬೊಮ್ಮಾಯಿ ಸರ್ಕಾರ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದಾಗ ಬಿಜೆಪಿ ಸರ್ಕಾರ ಹಟಾವೋ ಬಂಜಾರಾ ಬಚಾವೋ ಹೋರಾಟ ಮಾಡಲಾಗಿತ್ತು. ಈಗಿನ ಕಾಂಗ್ರೆಸ್ ಸರ್ಕಾರವು ನಮ್ಮ ಸಮಾಜಕ್ಕೆ ನ್ಯಾಯ ಒದಗಿಸದೇ ಹೋದರೆ ಕಾಂಗ್ರೆಸ ಹಟಾವೋ ಬಂಜಾರಾ ಬಚಾವೋ ಹೋರಾಟ ಆರಂಭಿಸಬೇಕಾಗುತ್ತದೆ. ನಾವು ಮೀಸಲಾತಿ ಬಿಕ್ಷೆ ಬೇಡುತ್ತಿಲ್ಲ. ಸಮಾಜದ ಹಕ್ಕು ಬೇಡುತ್ತಿದ್ದೇವೆ ಎಂದರು.
ಮುಖಂಡ ರವಿ ರಾಠೋಡ ಮಾತನಾಡಿದರು.
ಮನವಿ ಪತ್ರವನ್ನು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಮಹೇಂದ್ರ ನಾಯಕ, ಸಂತೋಷ ನಾಯಕ, ಸುರೇಶ ನಾಯಕ, ರಾಜು ನಾಯಕ, ಶಿವಾಜಿ ಲಮಾಣಿ, ಅರವಿಂದ ನಾಯಕ, ಮೋಹನ ರಜಪೂತ, ರುಕ್ಮಿಣಿ ರಾಠೋಡ, ಭಾಗ್ಯ ರಾಠೋಡ, ಶ್ರೀದೇವಿ ಲಮಾಣಿ, ರವಿ ಲಮಾಣಿ, ಅಪ್ಪು ನಾಯಕ, ನೇಮು ಲಮಾಣಿ, ಹೇಮು ಚವ್ಹಾಣ, ಈಶ್ವರ ಜಾಧವ, ಪುನೀತ ಲಮಾಣಿ, ಹರಿಲಾಲ ನಾಯಕ, ಶ್ರೀಕಾಂತ ರಾಠೋಡ, ಬಾಬು ನಾಯಕ, ಶಿವು ಪವಾರ, ಪ್ರಕಾಶ ರಾಠೋಡ, ನಾನು ರಾಠೋಡ, ಶಿವಾಜಿ ರಾಠೋಡ, ಕಿರಣ ಚವ್ಹಾಣ, ವಿನೋದ ಚವ್ಹಾಣ, ಗಣೇಶ ಚವ್ಹಾಣ, ಆನಂದ ಚವ್ಹಾಣ, ರಾಮು ರಾಠೋಡ, ಮಲ್ಲು ರಾಠೋಡ, ವಿನೋದ ರಾಠೋಡ, ಅಶೋಕ ಕಾರಬಾರಿ, ಅನಿಲ ಚವ್ಹಾಣ, ಮನೋಜ ಚವ್ಹಾಣ, ರಾಮು ಜಾಧವ ಸೇರಿದಂತೆ ಅನೇಕರು ಭಾಗವಹಿಸಿದ್ದರು.