ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸನಾತನ ಧರ್ಮ ಉಳಿದರೆ ಮಾತ್ರ ಭಾರತ ದೇಶ ಉಳಿಯಲು ಸಾಧ್ಯ. ಹೀಗಾಗಿ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ, ದೇಶದ ಉಳಿವಿಗಾಗಿ ನಾವೆಲ್ಲರೂ ಒಂದಾಗುವುದು ಅನಿವಾರ್ಯವಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕರೆ ನೀಡಿದರು.
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಮುಂಭಾಗದ ಶತಮಾನ ಕಂಡ ಸಂತ, ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಯವರ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳ ವತಿಯಿಂದ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆಯವರಂತೆ, ದೇಶದ ಅನ್ನ ತಿಂದು, ನೀರು ಕುಡಿದು, ಗಾಳಿ ಸೇವಿಸುವ ಯಾವೊಬ್ಬ ಹಿಂದೂ ದೇಶದ್ರೋಹಿ ಕೆಲಸ ಮಾಡಲ್ಲ, ಅದೇ ಸನಾತನ ಧರ್ಮ. ರಾಮಾಯಣ ವಾಲ್ಮೀಕಿ ಬರೆದರು, ಮಹಾಭಾರತ ವೇದ ವ್ಯಾಸರು ಬರೆದರು, ದೇಶದ ಪವಿತ್ರ ಸಂವಿಧಾನ ನಾನು ಬರೆಯುತ್ತಿರುವೆ ಎಂದು ಸ್ವತಃ ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರೇ ಹೇಳಿಕೊಂಡಿದ್ದಾರೆ. ಎಲ್ಲಿದೆ ಜಾತಿ? ಜಾತಿ ಜಾತಿಯಿಂದ ಹೊರ ಬಂದು ನಾವೆಲ್ಲ ಒಂದಾಗಬೇಕು. ದಲಿತ ಯುವಕರು ಅಂಬೇಡ್ಕರ್ ರವರು ಬರೆದಿರುವ ಪುಸ್ತಕಗಳನ್ನು ಓದಿ, ಹಿಂದೂ ಸಮಾಜದ ಯಾವ ಜಾತಿಯಿಂದಲೂ ದಲಿತ ಸಮುದಾಯದವರಿಗೆ ಅಪಾಯವಿಲ್ಲ. ನೀವು ನಾವು ಕೂಡಿದ್ದರೆ, 2047ಕ್ಕೆ ಹಿಂದೂ ರಾಷ್ಟ್ರವನ್ನು, ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರದಿಂದ ಬಚಾವ್ ಆಗುತ್ತೇವೆ ಎಂದು ಸಲಹೆ ನೀಡಿದರು.
ಮೇಯರ್ ಎಂ.ಎಸ್.ಕರಡಿ, ದಲಿತ ಮುಖಂಡ ಪ್ರತಾಪ್ ಚಿಕ್ಕಲಕಿ, ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ ಗುರು ಗಚ್ಚಿನಮಠ, ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಮುಖಂಡರಾದ ಸಂತೋಷ ತಲಕೇರಿ, ಪ್ರಕಾಶ ಚವ್ಹಾಣ, ವಿಕ್ರಮ ಗಾಯಕವಾಡ ಮಾತನಾಡಿದರು.
ಗೋಪಾಲ ಮಹಾರಾಜರು, ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಕಿರಣ ಪಾಟೀಲ, ವಿಠ್ಠಲ ಹೊಸಪೇಟ, ಮಲ್ಲಿಕಾರ್ಜುನ ಗಡಗಿ, ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ಚಂದ್ರು ಚೌದರಿ, ಸ್ವಾಮಿ ವಿವೇಕಾನಂದ ಸೇನೆಯ ಗಜಾನನ ಮಹಾಮಂಡಳದ ಅಧ್ಯಕ್ಷ ನಂದು ಗಡಗಿ, ಮುಖಂಡರಾದ ರಾಜು ಜಾಧವ, ಪಾಂಡುಸಾಹುಕಾರ ದೊಡಮನಿ, ಶಂಕರ ಹೂಗಾರ, ಪ್ರಕಾಶ ಚವ್ಹಾಣ, ಬಸವರಾಜ ಬಿರಾದಾರ, ಬಾಬು ಶಿರಶ್ಯಾಡ, ರಾಜಶೇಖರ ಬಜಂತ್ರಿ, ಸುನೀಲ ಬೈರವಾಡಗಿ, ಉಮೇಶ ವೀರಕರ ಸೇರಿದಂತೆ ಮತ್ತಿತರರು ಇದ್ದರು.