ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಸರ್ಕಾರ ಮುಳುಗಡೆ ಕೆಲಸ ಪೂರ್ಣಗೊಳಿಸಬೇಕು. ಸರ್ಕಾರ ಅನುದಾನ ನೀಡುತ್ತಿಲ್ಲ, ಕೆಲಸಗಳಾಗುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿದೆ. ಹಣಕ್ಕಾಗಿ ಮತ ಮಾರಿಕೊಂಡವರು ಚುನಾಯಿತ ಸದಸ್ಯರಿಂದ ಯಾವ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ? ದುಡ್ಡಿಗಾಗಿ ವೋಟು ಹಾಕಿದವರು ಅಭಿವೃದ್ಧಿ ಕೇಳಲು ಹೇಗೆ ಸಾಧ್ಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನಿಸಿದರು.
ನಗರದ ಕಡಪಟ್ಟಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು ರಮಾನಿವಾಸ ನಿರೀಕ್ಷಣಾ ಮಂದಿರದಲ್ಲಿ ಸೋಮವಾರ ಸುದ್ದಿಗಾರ ರೊಂದಿಗೆ ಮಾತನಾಡಿದರು.
ಅಭಿವೃದ್ಧಿ ಕೆಲಸಗಳನ್ನು ಕೇಳುವ ನೈತಿಕತೆಯನ್ನು ಹಣ ಪಡೆದ ಮತದಾರರು ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಕೇಂದ್ರಗಳಲ್ಲಿ ಶಾಲೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಸರ್ಕಾರಕ್ಕೆ ಮಾಹಿತಿ ನೀಡಿದ್ದೇನೆ. ಯಾವುದೇ ಕೆಲಸವಾಗುತ್ತಿಲ್ಲ ಎಂದು ಶಾಸಕ ಜಗದೀಶ ಗುಡಗುಂಟಿ ಸಭಾಪತಿಗಳ ಗಮನ ಸೆಳೆದಾಗ ಸಭಾಪತಿಗಳು ಈ ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಹೊರಟ್ಟಿ ಅವರು, ಸಮಸ್ಯೆಯ ಕುರಿತು ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.
ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಉತ್ತರ ಕರ್ನಾಟಕದ ಕೆಲಸಗಳಾಗುತ್ತಿಲ್ಲ. ರಾಜಕಾರಣಿಗಳು ತಮ್ಮ ಕ್ಷೇತ್ರಗಳ ಅಭಿವೃದ್ಧಿಯ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆ ಗಳಲ್ಲಿ ವೈದ್ಯರ ಕೊರತೆ ಉಂಟಾಗಿದೆ. ಈ ಕುರಿತು ತಾವು ಹೋದ ಕಡೆಗೆಲ್ಲ ದೂರುಗಳು ಕೇಳಿ ಬಂದಿವೆ. ಸರ್ಕಾರಕ್ಕೆ ಈ ಕುರಿತು ಶೀಘ್ರವಾಗಿ ಮಾತನಾಡುತ್ತೇನೆ. ಕೂಡಲೇ ಕ್ರಮ ಜರುಗಿಸುವಂತೆ ತಿಳಿಸುತ್ತೇ ನೆ. ಶಿಕ್ಷಕರ ಕೊರತೆ ಶಾಲಾ ಕಟ್ಟಡಗಳ ದುರಸ್ತಿ ಇನ್ನಿತರೆ ಕೆಲಸಗಳಾಗಬೇಕಿದೆ. ಅದಕ್ಕಾಗಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಭರವಸೆ ನೀಡಿದರು.
ರಸ್ತೆಗಳ ದುಃಸ್ಥಿತಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಗಮನಕ್ಕೆ ತರುತ್ತೇನೆ. ತಾವು ಶಿಕ್ಷಣ ಮಂತ್ರಿಗಳಿದ್ದಾಗ ಶಿಕ್ಷಕರ ನೇಮಕಾತಿ, ವರ್ಗಾವಣೆ ನೀತಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಸದ್ಯ ಮಂತ್ರಿಗಳಿಗೆ ಮಾಹಿತಿ ನೀಡುವ ಕೆಲಸ ಮಾಡಲು ಮಾತ್ರ ನಮ್ಮಿಂದ ಸಾಧ್ಯ ವಾಗುತ್ತದೆ ಎಂದು ಹೇಳಿದರು.
ಕಡಪಟ್ಟಿ ಬಸವಣ್ಣದೇವರು ಕುಲದೇವತೆ ಆಗಿರುವುದರಿಂದ ದೇವರದರ್ಶನಕ್ಕೆ ಬಂದಿದ್ದಾಗಿ ತಿಳಿಸಿರು. ಶಾಸಕ ಜಗದೀಶ ಗುಡಗುಂಟಿ, ಎಸಿ ಶ್ವೇತಾ ಬೀಡಿಕರ, ತಹಸೀಲ್ದಾರ ಅನೀಲ ಬಡಿಗೇರ, ಪಿಎಸ್‌ಐ ಅನೀಲ ಕುಂಬಾರ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಉತ್ತರ ಕರ್ನಾಟಕಕ್ಕೆ ಅನ್ಯಾಯ, ಕಿಡಿ
96 ಜನ ಶಾಸಕರಿರುವ ಉತ್ತರ ಕರ್ನಾಟಕಕ್ಕೆ ನಿಗದಿತ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂಬ ದೂರು ಗಳು ಕೇಳಿ ಬರುತ್ತಿವೆ. ರಾಜಕೀಯ ಇಚ್ಛಾಶಕ್ತಿ ಬೇಕು. ದಕ್ಷಿಣ ಕರ್ನಾಟಕದ ಶಾಸಕರಂತೆ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಸಮಯ ನೀಡಬೇಕು. ಸರ್ಕಾರದ ಕಡೆಯಿಂದ ಕೆಲಸ ಮಾಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ಉಡುಪಿ, ಬೆಂಗಳೂರು, ಮೈಸೂರು ಮುಂತಾದ ಕ್ಷೇತ್ರಗಳಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೂ ಅಭಿವೃದ್ಧಿ ಆಗಬೇಕು. ಹಣ ಪಡೆದ ಮತದಾರರು ಕೆಲಸ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ. ನಾನು ಸಮಸ್ಯೆಗಳ ಬಗ್ಗೆ ಬಗ್ಗೆ ಸರ್ಕಾರ ಸರ್ಕಾರದ ಗಮನ ಸೆಳೆಯಬಹುದು. ಕೆಲಸ ಮಾಡುವಂತೆ ಒತ್ತಾಯಿಸಬಹುದು ಅಷ್ಟೇ ಅಲ್ಲವೇ ಎಂದು ಮಾರ್ಮಿಕವಾಗಿ ನುಡಿದರು.

