ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಎಲ್.ಎನ್. ಮುಕುಂದರಾಜ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮನುಷ್ಯ ಜಾತಿ ತಾನೊಂದೇ ವಲಂ ಎಂದು ಹೇಳಿ ಜಾತ್ಯತೀತ ತತ್ವವನ್ನು ಸಾರಿದ ಪಂಪ ಮತ್ತು ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಾರಿದ ಕನಕದಾಸರ ಕೀರ್ತನೆಗಳು ಕನ್ನಡ ಸಾಹಿತ್ಯದ ಉನ್ನತ ಪರಂಪರೆಯ ಕುರುಹುಗಳು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಎಲ್.ಎನ್. ಮುಕುಂದರಾಜ ಅವರು ಹೇಳಿದರು.
ನಗರದ ಮಹಿಳಾ ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗಗಳ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಕನ್ನಡ ಸಾಹಿತ್ಯ ಪರಂಪರೆ – ಅವಲೋಕನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಯಾವುದೇ ಭಾಷೆಗೆ ಬರದಷ್ಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಗೆ ಬಂದಿವೆ. ಇದಕ್ಕೆ ಮುಕುಟಪ್ರಾಯವೆಂಬಂತೆ ಇತ್ತೀಚೆಗೆ ಭಾನು ಮುಸ್ತಾಕ್ ಅವರ ‘ಹೃದಯದ ಹಣತೆ’ ಕೃತಿಗೆ ಅಂತರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಬಂದಿರುವುದು ಕನ್ನಡ ಸಾಹಿತ್ಯ ಪರಂಪರೆಯ ಶ್ರೀಮಂತಿಕೆಯ ದ್ಯೋತಕವಾಗಿದೆ ಎಂದು ವಿಶ್ಲೇಷಿಸಿದರು.
ಪತ್ರಕರ್ತ ಡಾ.ಗಣೇಶ್ ಅಮೀನಗಡ ಮಾತನಾಡಿ, ಹೆಣ್ಣು ಮಕ್ಕಳು ಇನ್‌ಸ್ಟಾಗ್ರಾಂ ಪ್ರೀತಿಗೆ ಮರುಳಾಗದೆ ಎಚ್ಚರಿಕೆಯಿಂದ ಬದುಕಬೇಕು. ಸಾಮಾಜಿಕ ಜಾಲತಾಣದ ದಾಸರಾಗದೆ ಬುದ್ಧಿವಂತಿಕೆಯಿಂದ ಮುಂದುವರಿಯಬೇಕು. ಉನ್ನತ ಹುದ್ದೆಗಳನ್ನು ಪಡೆಯಲು ಶಿಸ್ತುಬದ್ಧ ಅಧ್ಯಯನ ಅತ್ಯಾವಶ್ಯಕವೆಂದು ತಿಳಿಸಿದರು.
ಕುಲಸಚಿವ ಶಂಕರಗೌಡ ಎಸ್ ಸೋಮನಾಳ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸಮಯ ವ್ಯರ್ಥ ಮಾಡದೆ, ಪುಸ್ತಕಗಳನ್ನು ಹಿಡಿದು ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಅಧ್ಯಯನವೇ ಭವಿಷ್ಯ ಕಟ್ಟುವ ನಿಜವಾದ ಬಂಡವಾಳ. ನಿರಂತರ ಅಧ್ಯಯನದಿಂದ ವಿದ್ಯಾರ್ಥಿಗಳ ಯಶಸ್ಸಿಗೆ ದಾರಿ ದೀಪವಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಚರಿತ್ರೆ ಕುರಿತು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟು ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನಗಳನ್ನು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಹೆಣ್ಣು ಮಕ್ಕಳು ಮೊಬೈಲ್ ಪ್ರೇಮಪ್ರಕರಣದಿಂದ ಬಲಿಪಶುವಾಗುತ್ತಿರುವುದು ಚಿಂತಾಜನಕವಾಗಿದೆ. ಆದ್ದರಿಂದ, ಸಾಮಾಜಿಕ ಮಾಧ್ಯಮದ ಅತಿ ಹೆಚ್ಚು ಬಳಕೆಯಿಂದ ದೂರವಿದ್ದು, ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ಮೇಲೆ ಆಗುವ ಅತ್ಯಾಚಾರಗಳ ಬಗ್ಗೆ ಜಾಗರೂಕತೆಯೊಂದಿಗೆ ಹೆಣ್ಣು ಮಕ್ಕಳು ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಸ್ನಾತಕ ಅಧ್ಯಯನ ವಿಭಾಗದ ವಿಶೇಷಾಧಿಕಾರಿಗಳಾದ ಪ್ರೊ.ಸಕ್ಪಾಲ್ ಹೂವಣ್ಣ, ಸಂಯೋಜಕರಾದ ಡಾ.ಸೌಭಾಗ್ಯ, ಉಪಸ್ಥಿತರಿದ್ದರು.
ಸ್ನಾತಕ ವಿದ್ಯಾರ್ಥಿನಿಯರಾದ ಗೌತಮಿ ನಾಟೇಕರ್, ಶೃತಿ ಕುಲಕರ್ಣಿ, ಅನಿತಾ ಪಾಟೀಲ್ ಪ್ರಾರ್ಥಿಸಿದರು. ಪ್ರೊ.ಎಂ.ನಾಗರಾಜು ಸ್ವಾಗತಿಸಿದರು. ಡಾ.ರೂಪಾ ಇಂಗಳೆ ಅತಿಥಿಗಳನ್ನು ಪರಿಚಯಿಸಿದರು. ಡಾ.ಚಲುವರಾಜು ವಂದಿಸಿದರು. ಡಾ.ಚೇತನಾ ಸಂಕೊಂಡ ನಿರೂಪಿಸಿದರು.

