ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಮಣೂರ ಗ್ರಾಮ ಪಂಚಾಯಿತಿಯಲ್ಲಿ ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆ ಅಡಿಯ ಮನೆಗಳನ್ನು ಒಂದೇ ಸಮುದಾಯಕ್ಕೆ ಮಂಜೂರ ಮಾಡಿ ಅವರಿಂದ ಹಣ ಪಡೆಯಲಾಗಿದೆ ಎಂದು ಆರೋಪಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ತಹಶೀಲ್ದಾರ ಪ್ರಕಾಶ ಸಿಂದಗಿ ಹಾಗೂ ಇಓ ಭಾರತಿ ಚೆಲುವಯ್ಯ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಸಭೆ ಸೇರಿದ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಬಸ್ ನಿಲ್ದಾಣ ರಸ್ತೆ, ಮೊಹರೆ ಹಣಮಂತ್ರಾಯ ವೃತ್ತದ ಮೂಲಕ ತಾಲ್ಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ತೆರಳಿ ಧರಣಿ ಕುಳಿತು ಪ್ರತಿಭಟನೆ ಕೈಗೊಂಡರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಶರಣು ಜಮಖಂಡಿ ಮಾತನಾಡಿ, ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ೨೦೨೨-೨೩ ಹಾಗೂ ೨೦೨೪-೨೫ನೇ ಸಾಲಿನಲ್ಲಿ ಮಂಜೂರಾಗಿದ್ದ ಮನೆಗಳನ್ನು ಪಿಡಿಓ ಹಾಗೂ ನೋಡಲ್ ಅಧಿಕಾರಿಗಳು ಫಲಾನುಭವಿಗಳಿಂದ ಹಣ ಪಡೆದು ನೀಡಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ಸುಖದೇವ ಕಟ್ಟಿಮನಿ ಮಾತನಾಡಿ, ಗ್ರಾಮಸಭೆಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡದೇ ಬೇಕಾಬಿಟ್ಟಿ ಮನೆಗಳನ್ನು ಹಂಚಿಕೆ ಮಾಡಿ, ೧೫ನೇ ಹಣಕಾಸಿನಲ್ಲಿ ಸುಮಾರು ೪೦ ಲಕ್ಷ ಬೋಗಸ್ ಕ್ರಿಯಾಯೋಜನೆ ಮಾಡಿ ಕಾಮಗಾರಿ ಮಾಡದೇ ಪಿಡಿಓ ಹಾಗೂ ಇಂಜನೀಯರ್ ಬಿಲ್ ತೆಗೆದಿದ್ದಾರೆ. ಕ್ರಿಯಾಯೋಜನೆ ನಮಗೆ ತೋರಿಸಲು ಕೇಳಿದಾಗ ಸರ್ಕಾರದ ನಿಯಮದ ಪ್ರಕಾರ ತೋರಿಸಲು ಬರುವುದಿಲ್ಲ. ಮಾಹಿತಿ ಹಕ್ಕಿನ ಮೂಲಕ ಕೇಳಿ ಪಡೆದುಕೊಳ್ಳಿ ಎಂದು ಹೇಳಿದರು. ನಂತರ ಮಾಹಿತಿ ಹಕ್ಕು ಮೂಲಕ ಕಳೆದ ಜೂನ್ ೩ ರಂದು ಮಾಹಿತಿ ಕೇಳಿದ್ದರು, ಈವರೆಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ಆದ್ದರಿಂದ ಕೂಡಲೇ ೧೫ನೇ ಹಣಕಾಸಿನ ಕುರಿತು ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ತಾಲ್ಲೂಕು ಅಧ್ಯಕ್ಷ ತಿಪ್ಪಣ್ಣ ಮೇಲಿನಮನಿ, ಉಪಾಧ್ಯಕ್ಷ ಕಮಲಸಾಬ ಕಾಟಮನಳ್ಳಿ, ಪ್ರಕಾಶ ತಳಕೇರಿ, ಅಶೋಕ ಕೊಂಡಗೂಳಿ, ಶಿವಶರಣ ಕಾಂಬಳೆ, ಮೋಹನ ಆಲಗೂರ, ಬಸವರಾಜ ಗುಂಡಕನಾಳ, ರಮೇಶ ಮಲ್ಲಾರಿ ಇದ್ದರು.