ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಸಣ್ಣ ಅಗಸಿ ಹತ್ತಿರ ಇರುವ ಮೊಮಿನ ಮೊಹಲ್ಲಾದಲ್ಲಿ ಶನಿವಾರದಂದು ಈದ ಮಿಲಾದ-ಉನ್-ನಬಿ ಕಮೀಟಿ ಚಡಚಣ ಇವರ ಸಂಯುಕ್ತ ಆಶ್ರಯದಲ್ಲಿ ಮೊಹಮ್ಮದ್ ಪೈಗಂಬರರ ಜಯಂತ್ಯೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಇಮಾಮ ಜಾಮಿಯಾ ಮಸೀದಿಯ ಮೌಲಾನಾ ಅಹ್ಮರಾಜಾ ಬರಕಾತಿ ಮುಲ್ಲಾ ಅವರು ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹದಲ್ಲಿ ಕಬ್ಬಿಣ ಮತ್ತು ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿ ಶರೀರದ ಅವಶ್ಯಕತೆಗೆ ತಕ್ಕಂತೆ ಹೊಸ ರಕ್ತ ಉತ್ಪಾದಿಸುತ್ತದೆ ಇದು ಆರೋಗ್ಯಕರ ಹೃದಯಕ್ಕೆ ಕಾರಣವಾಗುವುದರ ಜೊತೆಗೆ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ, ರಕ್ತನಾಳಗಳನ್ನು ಬಲಪಡಿಸಿ ರಕ್ತ ಪರಿಚಲನೆ ಸುಧಾರಿಸುತ್ತದೆ, ವೈದ್ಯರು ಹೇಳಿದಂತೆ 18 ರಿಂದ 65 ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿ, ಕೆಲವು ದೈಹಿಕ ಮತ್ತು ಆರೋಗ್ಯ ಮಾನದಂಡಗಳನ್ನು ಪೂರೈಸಿದರೆ, ಪ್ರತಿ ಮೂರು ತಿಂಗಳಿಗೊಮ್ಮೆ ಅಥವಾ ಕನಿಷ್ಠ ವರ್ಷಕ್ಕೆ ಎರಡು ಬಾರಿ ರಕ್ತದಾನ ಮಾಡಬಹುದು ಒಂದು ದಾನದಲ್ಲಿ ೪೫೦ಮಿಲಿ ರಕ್ತ ಸಂಗ್ರಹಿಸಲಾಗುತ್ತದೆ. 36 ಗಂಟೆಯೊಳಗೆ ನಿಮ್ಮ ದೇಹವು ಕಡಿಮೆಯಾದ ರಕ್ತವನ್ನು ಪುನಃ ಉತ್ಪಾದಿಸುತ್ತದೆ ಎಂದರು.
ರಕ್ತದಾನ ಶಿಬಿರದಲ್ಲಿ 85 ಯುವಕರು ತಮ್ಮ ಸ್ವ ಇಚ್ಛೆಯಿಂದ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ವಿಜಯಪುರದ ಆರ್.ಕೆ.ಎಮ್.ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್ ಮತ್ತು ಶ್ರೀಸಿದ್ದೇಶ್ವರ ರಕ್ತನಿಧಿ ಮತ್ತು ಈದ ಮಿಲಾದ-ಉನ್-ನಬಿ ಕಮೀಟಿ ಚಡಚಣ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ 7 ಜನರ ಕಣ್ಣಿನ ತಪಾಸಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ವಿಜಯಪುರದ ಆರ್.ಕೆ.ಎಮ್. ಆಯುರ್ವೇದ ಮೆಡಿಕಲ್ ಕಾಲೇಜ ಮತ್ತು ಆಸ್ಪತ್ರೆ ಹಾಗೂ ಶ್ರೀಸಿದ್ದೇಶ್ವರ ರಕ್ತನಿಧಿ ಸಿಬ್ಬಂದಿ ವರ್ಗದವರಿಗೆ ಚಡಚಣದ ಈದ ಮಿಲಾದ-ಉನ್-ನಬಿ ಕಮೀಟಿಯವರಿಂದ ಸನ್ಮಾನಿಸಲಾಯಿತು.
ರಕ್ತದಾನ ಶಿಬಿರದಲ್ಲಿ ಪ.ಪಂ.ನಾಮನಿರ್ದೇಶಕ ಸದಸ್ಯ ವಸಿಮ್ ಮುಲ್ಲಾ ಸೇರಿದಂತೆ ಚಡಚಣದ ಈದ ಮಿಲಾದ-ಉನ್-ನಬಿ ಕಮೀಟಿಯ ಎಲ್ಲ ಸದಸ್ಯರು, ಯುವ ಮುಖಂಡರು, ಸಾರ್ವಜನಿಕರು, ವಿಜಯಪುರದ ಶ್ರೀ ಸಿದ್ದೇಶ್ವರ ರಕ್ತನಿಧಿ ಸಿಬ್ಬಂದಿ ವರ್ಗ ಮತ್ತು ಆರ್.ಕೆ.ಎಮ್. ಆಯುರ್ವೇದ ಮೆಡಿಕಲ್ ಕಾಲೇಜ ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.