ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರಿಂದ ಬಸ್ ಸೇವೆ ಪ್ರಾರಂಭಿಸುವಂತೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಬಲೇಶ್ವರ- ವಿಜಯಪುರ ಮತ್ತು ವಿಜಯಪುರ- ಬಬಲೇಶ್ವರ ಮಧ್ಯೆ ಸಾಮಾನ್ಯ ಸಾರಿಗೆ ಎರಡು ಬಸ್ಸುಗಳ ಸೇವೆ ಇಂದು ಮಂಗಳವಾರದಿಂದ ಪ್ರಾರಂಭವಾಗಿದೆ.
ಸಾರವಾಡ ಗ್ರಾಮಸ್ಥರ ಬೇಡಿಕೆ ಹಿನ್ನೆಲೆಯಲ್ಲಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಈ ಬಸ್ ಸೇವೆ ಪ್ರಾರಂಭಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಈ ಬಸ್ ಸೇವೆ ಪ್ರಾರಂಭಿಸಿದೆ.
ಮಂಗಳವಾರ ಬಬಲೇಶ್ವರ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಳೆ ಗಿಡ, ಕಬ್ಬು, ಮಾವಿನ ಎಲೆಗಳು, ರಿಬ್ಬನ್ ಕಟ್ಟಿ ಶೃಂಗರಿಸಿದ ಎರಡು ಬಸ್ಸುಗಳ ಸಂಚಾರಕ್ಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲು ದಳವಾಯಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಈ ಭಾಗದ ಗ್ರಾಮಸ್ಥರಿಗೆ ಅನುಕೂಲಕ್ಕಾಗಿ ಈ ಹೊಸ ಬಸ್ ಸೇವೆ ಪ್ರಾರಂಭಿಸಲು ಕ್ರಮ ಕೈಗೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು, ಕಾರ್ಮಿಕರು, ರೈತರು ಸೇರಿದಂತೆ ಎಲ್ಲರಿಗೂ ಈಗ ಬಸ್ಸಿಗಾಗಿ ಕಾಯುವುದು ತಪ್ಪಲಿದೆ. ಸಚಿವ ಎಂ. ಬಿ. ಪಾಟೀಲ ಅವರಿಗೆ ಎಲ್ಲರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಬಲೇಶ್ವರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುಖಂಡರಾದ ವಿ. ಎಸ್. ಪಾಟೀಲ, ಬಿ. ಜಿ. ಬಿರಾದಾರ, ಆನಂದ ಬೂದಿಹಾಳ, ಮಾದುರಾಯಗೌಡ ಬಿರಾದಾರ, ಜಯಗೌಡ ಪಾಟೀಲ, ಸುನೀಲ ಪಾಟೀಲ, ಮಲ್ಲಿಕಾರ್ಜುನ ಬಟಗಿ,ಪರಸು ಪಡಗಾರ, ವಿಶ್ವಾಸ ಕಾಂಬಳೆ, ಶಶಿ ಕೋಟ್ಯಾಳ, ಜಾಫರ ಇನಾಮದಾರ, ಸಚಿವರ ಆಪ್ತ ಸಹಾಯಕ ಸಂತೋಷ ಲೋಕುರಿ, ಕೆ.ಕೆ.ಆರ್.ಟಿ.ಸಿ ಡಿಪೋ 3ರ ಮ್ಯಾನೇಜರ್ ಎಸ್. ಎಂ. ವಾಲಿಕಾರ ಸೇರಿದಂತೆ ಬಬಲೇಶ್ವರ ,ಸಾರವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.
ಪ್ರತಿದಿನ ಎರಡು ಸಾಮಾನ್ಯ ಸಾತಿಗೆ ಬಸ್ಸುಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಒಂದು ಬಸ್ಸು ವಿಜಯಪುರ- ಖತಿಜಾಪುರ- ಸಾರವಾಡ ಮಾರ್ಗವಾಗಿ ಬಬಲೇಶ್ವರಕ್ಕೆ ಸಂಚರಿಸಿದರೆ ಮತ್ತೋಂದು ಬಸ್ಸು ಬಬಲೇಶ್ವರ- ಸಾರವಾಡ- ಖತಿಜಾಪುರ ಮಾರ್ಗವಾಗಿ ವಿಜಯಪುರಕ್ಕೆ ಸಂಚರಿಸಲಿದೆ. ಪ್ರತಿದಿನ ಎರಡೂ ಬಸ್ಸುಗಳು ತಲಾ ಎಂಟು ಬಾರಿ ಈ ಮಾರ್ಗದಲ್ಲಿ ಸಂಚಾರ ನಡೆಸಲಿವೆ.