ಪತ್ರಕರ್ತೆ ಪ್ರೇಮಾ ಕುಲಕರ್ಣಿ ಅವರು ರಚಿಸಿರುವ ‘ಹೂ ಮಾಲೆ’ ಗ್ರಂಥ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿದ ಲೇಖಕಿ ಭಾರತಿ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪಠ್ಯಪುಸ್ತಕ ರಚನೆ ರಾಜಕೀಯ ಪ್ರೇರಿತವಾಗಿರಬಾರದು, ಅದು ರಾಜಕೀಯ ಮುಕ್ತವಾಗಿರಬೇಕು, ಮಾನವೀಯತೆ, ಪ್ರೀತಿ ಬೋಧಿಸುವ ಪಠ್ಯ ಹಿಂದೆಂದಿಗಿಂತಲೂ ಈಗ ಅಗತ್ಯವಾಗಿದೆ ಎಂದು ಖ್ಯಾತ ಲೇಖಕಿ ಭಾರತಿ ಪಾಟೀಲ ಹೇಳಿದರು.
ವಿಜಯಪುರದ ಜಿಲ್ಲಾ ಪಂಚಾಯತ ಬಳಿ ಇರುವ ಗಾಂಧೀ ಭವನದಲ್ಲಿ
ಶ್ರೀ ಹಲಗಣೀಶ ಪ್ರಕಾಶನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ
ಆಯೋಜಿಸಲಾಗಿದ್ದ
ಪತ್ರಕರ್ತೆ ಪ್ರೇಮಾ ಕುಲಕರ್ಣಿ ಅವರು ರಚಿಸಿರುವ ‘ಹೂ ಮಾಲೆ’ ಗ್ರಂಥ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿದ ಅವರು, ಇಂದು ಹೊಡಿ, ಬಡಿ, ಕಡಿ ಸಾಹಿತ್ಯವೇ ಮಕ್ಕಳಲ್ಲಿ ಪ್ರಭಾವ ಬೀರುತ್ತಿದೆ, ಮಕ್ಕಳಿಗೆ ಹಾಡು ಹೇಳಲು ಹೇಳಿದರೆ ಹೊಡಿ ಮಗ ಹಾಡು ಹೇಳುತ್ತಾರೆ, ಹೀಗಾಗಿ ಪಠ್ಯದಲ್ಲಿ ಮಾನವೀಯತೆ, ಪ್ರೀತಿ ಪ್ರತಿಪಾದಿಸುವ ವಿಷಯಗಳು ಪಠ್ಯದಲ್ಲಿರಬೇಕು ಎಂದರು.
ಇಂದು ವಾಕ್ ಸ್ವಾತಂತ್ರ್ಯ ದುರಪಯೋಗವಾಗಿ ಒಂದು ರೀತಿ ವಾಕರಿಕೆ ಸ್ವಾತಂತ್ರ್ಯವಾಗಿ ಬುರುಡೆ ಸ್ವಾತಂತ್ರ್ಯ ರೀತಿಯಲ್ಲಿ ಪ್ರತಿಧ್ವನಿತವಾಗುತ್ತಿರುವುದು ನೋವಿನ ಸಂಗತಿ ಎಂದರು.
ವಿವಾದಿತ ವಿಷಯಗಳೇ ಮಣೆ ಹಾಕುವುದು ನಡೆದಿದೆ, ಇದು ನಿಲ್ಲಬೇಕು, ಮಾನವೀಯತೆ ಸಾಹಿತ್ಯ ಇಂದಿನ ಅವಶ್ಯಕತೆಯಾಗಿದೆ ಎಂದರು.
ಮಹಿಳೆ ಬರೆದದ್ದು ಅಡುಗೆ ಮನೆ ಸಾಹಿತ್ಯ, ಅವಳು ಪ್ರಬುದ್ದ ಸಾಹಿತ್ಯ ಬರೆಯುವುದಿಲ್ಲ ಎಂಬ ವಿಮರ್ಶಕರ ದೃಷ್ಟಿಕೋನ ಇನ್ನೂ ಬದಲಾಗಿಲ್ಲ, ಇದು ಬದಲಾಗಬೇಕು ಎಂದರು.
ಜನ್ಮದಿಂದ ಮರಣದವರೆಗೂ ಹೂವು ಮಾನವ ಜೀವನದೊಂದಿಗೆ ಬೆಸೆದುಕೊಂಡಿದೆ, ಈ ಪುಷ್ಪಗಳ ಸಮಗ್ರ ಇತಿಹಾಸ, ವಿಶೇಷತೆಯನ್ನು ಪತ್ರಕರ್ತೆ ಪ್ರೇಮಾ ಕುಲಕರ್ಣಿ ಅವರು ಗ್ರಂಥ ರೂಪದಲ್ಲಿ ಹೊರ ತಂದಿರುವುದು ಸಾಹಿತ್ಯ ಲೋಕಕ್ಕೆ ಒಂದು ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಕೃತಿ ಲೋಕಾರ್ಪಣೆ ಮಾಡಿದ ಕೂಡಗಿ ಎನ್.ಟಿ.ಪಿ.ಸಿ. ಸಾರ್ವಜನಿಕ ಸಂಪರ್ಕಾಧಿಕಾರಿ ಪೂಜಾ ಪಾಂಡೆ ಮಾತನಾಡಿ, ಪುಷ್ಪಗಳು ಕೇವಲ ಕಣ್ಣಿಗೆ ಸೌಂದರ್ಯ ಕರುಣಿಸುವುದಕ್ಕೆ ಸೀಮಿತವಲ್ಲ, ನಿಸರ್ಗದ ಅಮೂಲ್ಯ ರತ್ನಗಳಿದ್ದಂತೆ, ಪುಷ್ಪಗಳಲ್ಲಿ ಔಷಧೀಯ ಗುಣಗಳಿವೆ, ಅನೇಕ ಪ್ರಯೋಜನಗಳ ಹೂರಣ ಪುಷ್ಪದಲ್ಲಿವೆ, ಈ ಪುಷ್ಪಗಳ ಮಹತ್ವವನ್ನು ಪರಿಚಯಿಸುವ ದೃಷ್ಟಿಯಿಂದ ಈ ಗ್ರಂಥ ಹೊರ ಬಂದಿರುವುದುದು ಸಂತೋಷ ತಂದಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ
ಗೋವಾ ಕನ್ನಡತಿ ಅಖಿಲಾ ವಿಜಯ ಕುರಂದವಾಡ ಮಾತನಾಡಿದರು.
ಪುಸ್ತಕ ಪರಿಚಯಿಸಿದ ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ ಮಾತನಾಡಿ, ಪುಷ್ಪ ತನ್ನ ಸೀಮಿತ ಜೀವಿತ ಅವಧಿಯಲ್ಲಿ ಸುಗಂಧ ಬೀರಿ ಮರೆಯಾಗುತ್ತದೆ, ಆದರೆ ಅನೇಕ ದಶಕಗಳ ಕಾಲ ಬದುಕುವ ಮಾನವ ಸಮಾಜಕ್ಕೆ ಒಳ್ಳೆಯದು ನೀಡಿ ಹೋಗುವುದು ಅಪರೂಪ, ಇದೇ ಮಾನವ ಹಾಗೂ ಪುಷ್ಪಕ್ಕೆ ಇರುವ ವ್ಯತ್ಯಾಸ ಎಂದರು.
೪೦ ಕ್ಕೂ ಹೆಚ್ಚಿನ ಹೂವಿನ ವೈಜ್ಞಾನಿಕ ಹೆಸರು, ಪೌರಾಣಿಕ ಹಿನ್ನೆಲೆ, ವೈಜ್ಞಾನಿಕ ಹಿನ್ನೆಲೆ ಹಾಗೂ ಬಹುಮುಖ್ಯವಾಗಿ ಹೂವಿನಲ್ಲಿರುವ ಔಷಧೀಯ ಗುಣಗಳ ಸಮಗ್ರ ಪರಿಚಯ ಗ್ರಂಥ, ಈ ಗ್ರಂಥ ಆರೋಗ್ಯ ಸುಧಾರಣೆಯ ಕೈಪಿಡಿ ಸಹ ಹೌದು ಎಂದರು.
ಲೇಖಕಿ ಪ್ರೇಮಾ ಕುಲಕರ್ಣಿ ಮಾತನಾಡಿ, ಪುಷ್ಪ ಪುನರ್ಜನ್ಮದ ಸಂಕೇತ, ಪಾರಿಜಾತ ಸೇರಿದಂತೆ ಅನೇಕ ಪುಷ್ಪಗಳ ಹಿನ್ನೆಲೆಯನ್ನು ವಿವರಿಸಿದರು.
ಸಾನಿಧ್ಯ ವಹಿಸಿದ್ದ ಹುಲ್ಯಾಳ ಗುರುದೇವಾಶ್ರಮದ ಶ್ರೀ ಹರ್ಷಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿದರು. ಚಾಣಕ್ಯ ಕೆರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ. ಬಿರಾದಾರ, ಉದ್ಯಮಿ ಅಣ್ಣಾಸಾಹೇಬ ಪಾಟೀಲ, ಹಿರಿಯ ಪತ್ರಕರ್ತ ಗೋಪಾಲ ನಾಯಕ, ವೇದ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಕೆಲೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಾಂದ ಮಾಸ್ತಿಹೊಳಿ, ಡಾ.ಬಾಬು ರಾಜೇಂದ್ರ ನಾಯಕ, ಸಹಕಾರಿ ಧುರೀಣ ರಮೇಶ ಬಿದನೂರ, ಹಿರಿಯ ಪತ್ರಕರ್ತರಾದ ಅನೀಲ ಹೊಸಮನಿ, ರಫೀ ಭಂಡಾರಿ, ರಾಘವ ಅಣ್ಣಿಗೇರಿ, ಹಿರಿಯ ಲೇಖಕಿ ಇಂದುಮತಿ ಲಮಾಣಿ, ಸುಶೀಲೇಂದ್ರ ನಾಯಕ, ರಾಜು ಗಚ್ಚಿನಮಠ, ಶ್ರೀದೇವಿ ಉತ್ಲಾಸರ, ಸುಶೀಲೇಂದ್ರ ನಾಯಕ, ಆನಂದ ಜೋಶಿ, ಜಗದೀಶ ಬೋಳಸೂರ, ಪ್ರಭು ಮಲ್ಲಿಕಾರ್ಜುನಮಠ, ಶರಣು ಹೀರಾಪೂರ, ರಮೇಶ ಕೋಟ್ಯಾಳ, ಅಭಿಷೇಕ ಚಕ್ರವರ್ತಿ, ಹಿರಿಯ ಪತ್ರಕರ್ತ ಮಧು ಆಶ್ರೀತ್, ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ ಮಾತನಾಡಿದರು.
ಪಾಂಡುರಂಗ ಕುಲಕರ್ಣಿ ಪ್ರಾರ್ಥಿಸಿದರು. ಪ್ರೊ.ಯು.ಎನ್. ಕುಂಟೋಜಿ ಸ್ವಾಗತಿಸಿದರು. ಪ್ರೊ.ಮಲ್ಲಿಕಾರ್ಜುನ ಕನ್ನೂರ ಕಾರ್ಯಕ್ರಮ ನಿರೂಪಿಸಿದರು.
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಹಿರಿಯ ಪತ್ರಕರ್ತ ದಿ.ಅಚ್ಯುತ್ ಕುಲಕರ್ಣಿ ಸ್ಮರಣೆಯಲ್ಲಿ ದತ್ತಿನಿಧಿ ಸ್ಥಾಪನೆಯ ಚೆಕ್ ನ್ನು ಲೇಖಕಿ ಪ್ರೇಮಾ ಕುಲಕರ್ಣಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅವರಿಗೆ ಸಲ್ಲಿಸಿದರು.