ವಿಜಯಪುರದ ಬಸವೇಶ್ವರ ಭವನದ 4 ನೇ ವಾಷಿ೯ಕೋತ್ಸವ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಸವಣ್ಣನವರ ತತ್ವ, ಸಿದ್ಧಾಂತಗಳು ಸಾರ್ವಕಾಲಿಕ ಪ್ರಸ್ತುತದಲ್ಲಿವೆ. ಜಗಕ್ಕೆ ನೀಡಿದ ಕಾಯಕ ತತ್ವದ ಮಹತ್ವ ಅತ್ಯಂತ ಶ್ರೇಷ್ಠತೆಯ ಶ್ರೇಣಿಯಲ್ಲಿ ಮಿನುಗಿವೆ ಎಂದು ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ವಿಜಯಪುರ ನಗರದ ಶುಭಮಸ್ತು ಕಾಲೋನಿಯಲ್ಲಿ ಬಸವ ಶ್ರೀ ವಿವಿಧೋದ್ದೇಶ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಬಸವೇಶ್ವರ ಭವನದ ನಾಲ್ಕನೇ ವಾಷಿ೯ಕೋತ್ಸವ ಸಮಾರಂಭ ಹಾಗೂ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕ ಪವಿತ್ರತೆಯ ದಾರಿಮಾರ್ಗವನ್ನು ಸಮಾಜಕ್ಕೆ ಬಸವಣ್ಣನವರು ತೋರಿಸಿದ್ದಾರೆ ಎಂದರು.
ಕಾಯಕ ಜೀವ ಬಸವಣ್ಣನವರು ಸಕಲರಿಗೂ ಮಾದರಿಯಾಗಿದ್ದಾರೆ. ಅವರು ಏನು ಹೇಳುತ್ತಿದ್ದರೋ ಅದನ್ನೇ ಮಾಡಿದ್ದಾರೆ. ನುಡಿದಂತೆ ನಡೆದಿರುವ ಬಸವಣ್ಣನ ಚಿಂತನೆಗಳು ಅನುಪಮವಾಗಿವೆ. ಸಮಾಜಕ್ಕೆ ಅತ್ಯಂತ ಸರಳ ರೀತಿಯಲ್ಲಿ ಕಾಯಕವೇ ಕೈಲಾಸ ಎಂಬುದನ್ನು ಮನವರಿಕೆ ಮಾಡಿಕೊಟ್ಟ ಅದ್ಭುತ ಮಹಾನ ಚೇತನರಾಗಿದ್ದಾರೆ ಎಂದರು.
ಬಸವಣ್ಣನವರ ಭಾವಾಧಾರದ ಮೇಲೆ ಇಲ್ಲಿ ಬಸವೇಶ್ವರ ಭವನ ನಿಮಿ೯ಸಿದ್ದು, ಭವನದ ನಾಲ್ಕನೇ ವಾಷಿ೯ಕೋತ್ಸವ ಅಂಗವಾಗಿ ರಕ್ತದಾನ, ಆರೋಗ್ಯ ತಪಾಸಣೆ ಶಿಬಿರವನ್ನು ಬಸವ ಶ್ರೀ ವಿವಿಧೋದ್ದೇಶ ಸಂಸ್ಥೆಯವರು ಕೈಗೊಂಡಿದ್ದು ಶ್ಲಾಘನೀಯವಾಗಿದೆ. ಸಂಸ್ಥೆಯ ಸಮಾಜಮುಖಿ ಸೇವಾ ಕಾರ್ಯ ಮಾದರಿಯಾಗಿದೆ. ಬಸವ ಶ್ರೀ ವಿವಿಧೋದ್ದೇಶ ಸಂಸ್ಥೆಯವರು ಕೇವಲ ಹಣಕಾಸಿನ ವ್ಯವಹಾರಗಳಿಗೆ ಸೀಮಿತವಾಗದೇ ಸಾಮಾಜಿಕ ಹೊಣೆಗಾರಿಕೆಯಿಂದ ಜನೋಪಯೋಗಿ ಇಂಥ ಆದರ್ಶಪ್ರಾಯ ಕೆಲಸವನ್ನು ಮಾಡುತ್ತಿರುವುದು ಅದರಣೀಯವಾಗಿದೆ. ಈ ಸುಂದರ ಸುಸಜ್ಜಿತ ರೂಪದ ಬಸವೇಶ್ವರ ಭವನ ತಮ್ಮ ಮತಕ್ಷೇತ್ರ ವ್ಯಾಪ್ತಿಯಲ್ಲಿರುವುದು ಮತ್ತಷ್ಟು ತಮಗೆ ಸಂತಸ ತಂದಿದೆ ಎಂದು ಶಾಸಕರು ನುಡಿದರು.
ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಸಾಹಿತಿ, ಡಿ.ವೈ.ಎಸ್.ಪಿ. ಬಸವರಾಜ ಯಲಗಾರ ಮಾತನಾಡಿ, ಬಸವ ಶ್ರೀ ವಿವಿಧೋದ್ದೇಶ ಸಂಸ್ಥೆಯ ಕಾರ್ಯ ವಿಭಿನ್ನತೆವಾಗಿದೆ. ಸರಕಾರದಿಂದ ಯಾವುದೇ ರೀತಿಯ ಅನುದಾನ ಪಡೆಯದೆ ಇಲ್ಲಿ ಭವ್ಯ ಭವನ ಬಸವೇಶ್ವರ ಹೆಸರಿನಲ್ಲಿ ನಿಮಿ೯ಸಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಸಂಸ್ಥೆಯ ಸಮಾಜಪರ ಕಾಯಕ ತತ್ಪರತೆ ಅನುಕರಣೀಯವಾಗಿದೆ. ಸಮಾಜಕ್ಕೆ ಇಂಥ ಸದುದ್ಧೇಶ ತಿಳಿಯಬೇಕು. ಸಹಕಾರಿ ಸಂಘದ ಬಸವ ಶ್ರೀ ವಿವಿಧೋದ್ದೇಶ ಸಂಸ್ಥೆಯವರು ಮಂಗಲ ಭವನ ವಾಷಿ೯ಕೋತ್ಸವ ಕೈಂಕರ್ಯದ ಜೊತೆಗೆ ಆರೋಗ್ಯಕಾಳಜಿಯು ಹೊಂದಿದ್ದಾರೆ. ಸಾಮಾಜಿಕ ಕಾರ್ಯಗಳಿಗೆ ಸ್ಪಂದಿಸಿ ಕೈಗೊಂಡ ಸಮಾಜಪರ ಈ ಕಾರ್ಯ ನಿಜಕ್ಕೂ ಮಾದರಿಯಾಗಿದೆ ಎಂದರು.
ಬಸವಶ್ರೀ ವಿವಿಧೋದ್ದೇಶ ಸಂಸ್ಥೆ ಅಧ್ಯಕ್ಷ ಡಿ.ಆಯ್.ಬೆನಕನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರಾಜಕೀಯ ಧುರೀಣ ಎಂ.ಆರ್.ಪಾಟೀಲ, ಸಹಾಯಕ ಅಭಿಯಂತರ ರಾಮನಗೌಡ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಪತಕುಮಾರ ಗುಣಾರಿ, ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಇತರರಿದ್ದರು.
ಬಸವಶ್ರೀ ವಿವಿಧೋದ್ದೇಶ ಸಂಸ್ಥೆಯ ಉಪಾಧ್ಯಕ್ಷ ನಂದಕುಮಾರ ಗೊಬ್ಬೂರ, ಕಾರ್ಯದರ್ಶಿ ರಾಮನಗೌಡ ಪಾಟೀಲ, ನಿದೆ೯ಶಕ ಮಂಡಳಿ ಸದಸ್ಯರಾದ ಕಲ್ಲನಗೌಡ ಬಿರಾದಾರ, ಕಾತಿ೯ಕ ಚಿಂಚಲಿ, ಗುರುರಾಜ ಕುಲಕರ್ಣಿ, ಸಿದ್ದನಗೌಡ ಬಿರಾದಾರ, ಭೀಮನಗೌಡ ಪಾಟೀಲ, ಶ್ರೀಧರ ಚಿಂಚಲಿ, ಸಿದ್ದೇಶ್ವರ ಸಂಸ್ಥೆಯ ನಿದೇ೯ಶಕ, ಧಾಮಿ೯ಕ ಸಮಿತಿ ಅಧ್ಯಕ್ಷ ಸುಧೀರ ಚಿಂಚಲಿ ಇತರರು ವೇದಿಕೆಯಲ್ಲಿದ್ದರು.
ರಕ್ತದಾನ ಶಿಬಿರದಲ್ಲಿ 21 ಜನರು ರಕ್ತದಾನ ಮಾಡಿದರೆ ನೂರಾರು ಸಂಖ್ಯೆಯಲ್ಲಿ ಜನತೆ ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡಿಸಿಕೊಂಡರು.
ಪ್ರಾರ್ಥನೆ ಗೀತೆಯನ್ನು ಕುಮಾರಿ ಭೂಮಿಕಾ ಚಿಂಚಲಿ, ಈಶ್ವರಿ ಚಿಂಚಲಿ, ಸೌಂದರ್ಯ ಪಾಟೀಲ, ಸಾನ್ವಿ ಬಿರಾದಾರ ಸುಶ್ರಾವ್ಯವಾಗಿ ಹೇಳಿದರು.
ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಸ್ವಾಗತದೊಂದಿಗೆ ನಿರೂಪಿಸಿ ವಂದಿಸಿದರು.