ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಶ್ರಾವಣ ಮಾಸದಲ್ಲಿ ಗದ್ದುಗೆಯಲ್ಲಿ ಇಟ್ಟು ಪೂಜಿಸುವ ಟೆಂಗಿನಕಾಯಿ 5,71,001 ರೂ. ಗೆ ಹರಾಜಾಗಿದೆ.
ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ಮಾಳಿಂಗರಾಯ ಗದ್ದುಗೆಯಲ್ಲಿ ಪೂಜೆ ಮಾಡಿದ ತೆಂಗಿನಕಾಯಿಯನ್ನು ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಮಹಾವೀರ ಹರಕೆ ಅತಿ ಹೆಚ್ಚು ಮೊತ್ತಕ್ಕೆ ಬೇಡಿಕೆ ಇಟ್ಟು ತಮ್ಮದಾಗಿಸಿಕೊಂಡಿದ್ದಾರೆ. ಹಿಂದೊಮ್ಮೆ ಮಾಳಿಂಗರಾಯನ ಜಾತ್ರೆಯಲ್ಲಿ ಗದ್ದುಗೆ ಕಾಯಿಯನ್ನು ಮಹಾವೀರ ಅವರು 6,50,001 ರೂ. ಪಡೆದುಕೊಂಡಿದ್ದರು.
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಒಂದು ತಿಂಗಳು ಗದ್ದುಗೆ ಮೇಲೆ ತೆಂಗಿನಕಾಯಿ ಇಟ್ಟು ಪೂಜೆ ಮಾಡಲಾಗುತ್ತದೆ. ಶ್ರಾವಣ ಮಾಸ ಮುಕ್ತಾಯದ ಬಳಿಕ ಮಾಳಿಂಗರಾಯರ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ. ಪ್ರಸಕ್ತ ವರ್ಷ ಜಾತ್ರೆ ವೇಳೆ ಭಾನುವಾರ ನಡೆದ ಹರಾಜಿನಲ್ಲಿ ಆಶೀರ್ವಾದ ಕಾಯಿ ಪಡೆಯುವಲ್ಲಿ ಮಹಾವೀರ ಯಶಸ್ವಿಯಾದರು.
ಗದ್ದುಗೆಯ ತೆಂಗಿನಕಾಯಿ ಪಡೆಯಲು ಹರಾಜಿನಲ್ಲಿ ಮೂವರ ನಡುವೆ ಪೈಪೋಟಿ ಶುರುವಾಗಿತ್ತು. ಮಹಾವೀರ ಅವರ ಜೊತೆಗೆ ಚಿಕ್ಕಲಕಿ ಗ್ರಾಮದ ಮುದುಕಪ್ಪ ಪಟೇದಾರ, ಗೋಠೆ ಗ್ರಾಮದ ಸದಾಶಿವ ಮೈಗೂರ ಸ್ಪರ್ಧೆಗೆ ಇಳಿದಿದ್ದರು. ತ್ರಿಕೋನ ಸ್ಪರ್ಧೆಯಲ್ಲಿ ಒಬ್ಬರ ಬಳಿಕ ಮತ್ತೊಬ್ಬರು ತೆಂಗಿನಕಾಯಿ ಮೊತ್ತ ಹೆಚ್ಚಿಸುತ್ತ ಹೋದರು. ಅಂತಿಮವಾಗಿ ಮಹಾವೀರ ಅವರು ಅಧಿಕ ಮೊತ್ತ ಕೂಗಿದಾಗ ಅದಕ್ಕಿಂತ ಹೆಚ್ಚು ಮೊತ್ತ ಘೋಷಿಸಲು ಉಳಿದವರು ಮುಂದಾಗಲಿಲ್ಲ.
ಮಾಳಿಂಗರಾಯ ಪಟ್ಟದ ದೇವರು ಗುರು ಮುತ್ಯಾ ಬಬಲಾದಿ, ಮಾಳಿಂಗರಾಯ ದೇವರ ಅರ್ಚಕರಾದ ಸಿದ್ದಣ್ಣ ಪೂಜಾರಿ, ಹಿರಿಯರಾದ ದುಂಡಪ್ಪ ಬಬಲಾದಿ, ಕಲ್ಲಪ್ಪ ಗಿಡಗಿಂಚಿ, ಗ್ರಾಪಂ ಸದಸ್ಯರಾದ ಬಸವರಾಜ ಆಲಗೂರ, ಸಂತೋಷ ಮಮದಾಪೂರ ಇದ್ದರು.