ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಭವನದಲ್ಲಿ ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ಮೂರು ತಾಲೂಕಿನ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿತು.ಈ ಸಭೆಯಲ್ಲಿ ಸಚಿವರು ಸಮರ್ಪಕವಾಗಿ ಕಾರ್ಯನಿರ್ವಹಿಸದ ವಿವಿಧ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಟ್ಟುನಿಟ್ಟಾಗಿ ತಮ್ಮ ಕಾರ್ಯವನ್ನು ನಿರ್ವಹಿಸಬೇಕೆಂದು ಸೂಚಿಸಿದರು.
ತಾಲೂಕಿನ ಮನಗೂಳಿ, ಮಸೂತಿ ಗ್ರಾಮದಲ್ಲಿರುವ ಸರ್ಕಾರಿ ಜಮೀನು ಸರ್ವೆ ಮಾಡುವಂತೆ ಸೂಚಿಸಿದರೂ ಎಡಿಎಲ್ಆರ್ ಬಿ.ಬಿ.ವಗ್ಗನವರ ಸರಿಯಾಗಿ ಸ್ಪಂದಿಸದೇ ಇರುವದನ್ನು ಗಮನಿಸಿದ ಸಚಿವರು ಅವರನ್ನು ತರಾಟೆಗೆ ತೆಗೆದುಕೊಂಡು ನಾನು ನಿಮಗೆ ಸರ್ಕಾರಿ ಜಮೀನು ಸರ್ವೆ ಮಾಡಿ ವರದಿ ನೀಡುವಂತೆ ಸೂಚನೆ ನೀಡಿದರೂ ಮೂರು ತಿಂಗಳು ಆಗುತ್ತಾ ಬಂದರೂ ನೀವು ವರದಿ ನೀಡಿಲ್ಲ. ಸರ್ಕಾರಿ ಜಮೀನು ಒತ್ತುವರಿ ಮಾಡುವಂತೆ ಮಾಡಿರುವದು ಗಮನಕ್ಕೆ ಬಂದಿದೆ. ಇದನ್ನು ಬಗೆಹರಿಸುವವರೆಗೂ ನಿನ್ನ ಬಿಡುವುದಿಲ್ಲ. ನೀನು ಪಾತಾಳಕ್ಕೆ ಹೋದರೂ ಬಿಡುವುದಿಲ್ಲ ಎಂದು ಏರುಧ್ವನಿಯಲ್ಲಿ ಎಚ್ಚರಿಕೆ ನೀಡಿದರು.