ಆರೆಸ್ಸೆಸ್ ಅನ್ನು ಯಾರೂ ಸಮರ್ಥಿಸಿಕೊಳ್ಳಬಾರದು ಎಂದ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್
ಬೆಂಗಳೂರು: ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆ ಹಾಡಿದ್ದಕ್ಕಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕ್ಷಮೆಯಾಚಿಸಿರುವುದನ್ನು ಸ್ವಾಗತಿಸಿದ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ಪಕ್ಷದಲ್ಲಿ ಯಾರೂ ಸಂಘವನ್ನು ಯಾವುದೇ ರೀತಿಯಲ್ಲೂ “ಸಮರ್ಥಿಸಿಕೊಳ್ಳಬಾರದು” ಎಂದು ಮಂಗಳವಾರ ಹೇಳಿದ್ದಾರೆ.
ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ RSS ಗೀತೆ ಹಾಡಿದ್ದಕ್ಕೆ ಕ್ಷಮೆಯಾಚಿಸಬೇಕು ಎಂದು ಬಿಕೆ ಹರಿಪ್ರಸಾದ್ ಅವರು ಒತ್ತಾಯಿಸಿದ್ದರು.
“ಕಾಂಗ್ರೆಸ್ ಪಕ್ಷವನ್ನು ನಾನು ಅಥವಾ ಡಿ.ಕೆ. ಶಿವಕುಮಾರ್ ಕಟ್ಟಿಲ್ಲ. ಭವಿಷ್ಯಕ್ಕಾಗಿ ಅದನ್ನು ಉಳಿಸಲು ಯಾರೋ ನಮಗೆ ನೀಡಿದ್ದಾರೆ, ನಮಗೆ ಶಕ್ತಿ ಇದ್ದರೆ, ನಾವು ಅದನ್ನು ಉಳಿಸಿ ಭವಿಷ್ಯದ ಪೀಳಿಗೆಗೆ ನೀಡಬೇಕಾಗುತ್ತದೆ. ಇಲ್ಲಿ ಯಾರೂ ಶಾಶ್ವತವಲ್ಲ, ಯಾರೂ 500 ವರ್ಷಗಳ ಕಾಲ ಬದುಕುವುದಿಲ್ಲ” ಎಂದು ಹರಿಪ್ರಸಾದ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರೊಂದಿಗೆ ವೈಯಕ್ತಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಬದಲಾಗಿ ಮಹಾತ್ಮ ಗಾಂಧಿಯನ್ನು ಕೊಂದ ಸಂಘಟನೆಯ ಹಾಡು ಹಾಡಿದ್ದಕ್ಕೆ ಮಾತ್ರ ವಿರೋಧ ವ್ಯಕ್ತಪಡಿಸಿದ್ದೆ ಎಂದು ಹೇಳಿದ್ದಾರೆ.
“ಪಕ್ಷದ ಅಧ್ಯಕ್ಷರಾಗಿರುವ ಅವರು(ಶಿವಕುಮಾರ್) ಅಂತಹ ಮಾತುಗಳನ್ನು ಹೇಳಬಾರದಿತ್ತು. ಉಪಮುಖ್ಯಮಂತ್ರಿಯಾಗಿ ಅವರು ಅದನ್ನು ಪಠಿಸಿದರೆ ನನಗೆ ಯಾವುದೇ ಆಕ್ಷೇಪವಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ, ಕಾಂಗ್ರೆಸ್, ಸಂವಿಧಾನ ಮತ್ತು ತ್ರಿವರ್ಣ ಧ್ವಜವನ್ನು ವಿರೋಧಿಸುವ ಆರ್‌ಎಸ್‌ಎಸ್‌ನ ಪ್ರಾರ್ಥನೆ ಹಾಡು ಹಾಡುವ ಅಗತ್ಯವಿಲ್ಲ ಎಂದಿದ್ದಾರೆ.
ಪಕ್ಷದೊಳಗಿನ ಟೀಕೆಗಳಿಂದ ತೀವ್ರ ಬೇಸರಗೊಂಡಿರುವ ಡಿಕೆ ಶಿವಕುಮಾರ್, ರಾಜ್ಯ ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆ “ನಮಸ್ತೆ ಸದಾ ವತ್ಸಲೆ…” ಹಾಡು ಹಾಡಿದ್ದರಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಮಂಗಳವಾರ ಹೇಳಿದ್ದಾರೆ.

ಆರೆಸ್ಸೆಸ್ ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ ಸಂಘಟನೆ
ಆರ್‌ಎಸ್‌ಎಸ್ ಅನ್ನು ಈ ದೇಶದಲ್ಲಿ ಮೂರು ಬಾರಿ ಈಗಾಗಲೇ ನಿಷೇಧ ಮಾಡಿದ್ದಾರೆ. ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಗಳಾಗಿ ಸಂಘದ ಪ್ರಾರ್ಥನೆ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ. ಕಾರಣ ಸರ್ಕಾರ ಎಂಬುದು ಒಂದು ಪಕ್ಷದ್ದಲ್ಲ. ಇಡೀ ಏಳು ಕೋಟಿ ಕರ್ನಾಟಕ ಜನತೆಯ ಸರ್ಕಾರ. ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ ಸಂಘಟನೆ ಅದು. ಆ ಸಂಘಟನೆಯ ಪ್ರಾರ್ಥನೆ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡಿದ್ದರೆ ಅವರು ಕ್ಷಮೆ ಕೇಳಬೇಕಾಗುತ್ತದೆ ಎಂದು ಹರಿಪ್ರಸಾದ್ ಹೇಳಿದ್ದರು.

ಕ್ಷಮೆ ಯಾಚಿಸಿದ ಡಿಸಿಎಂ ಡಿಕೆಶಿ
ರಾಷ್ಟ್ರೀಯ ಸ್ವಯಂ ಸೇವಕ (ಆರ್‌ಎಸ್‌ಎಸ್) ಸಂಘದ ಗೀತೆ ನಮಸ್ತೇ ಸದಾ ವತ್ಸಲೇ ಸಾಲುಗಳನ್ನು ವಿಧಾನಸಭೆ ಕಲಾಪದ ವೇಳೆ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಸ್ತಾಪಿಸಿದ್ದರು.
ಅದು ಸಾಕಷ್ಟು ಸದ್ದು ಮಾಡಿ ಡಿ ಕೆ ಶಿವಕುಮಾರ್ ಅವರ ಮಾತುಗಳಿಗೆ ಸ್ವತಃ ಕಾಂಗ್ರೆಸ್ ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದರು.
ಬಿಕೆ ಹರಿಪ್ರಸಾದ್ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿದ್ದರೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.
ಅದಕ್ಕೆ ಇಂದು ಸುದ್ದಿಗೋಷ್ಠಿ ನಡೆಸಿದ ಡಿ ಕೆ ಶಿವಕುಮಾರ್ ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ್ದಾರೆ.