ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ | ಸಂತೆ ಹಾಗೂ ಮಾರಾಟ ಕುರಿತಾದ ಟೆಂಡರ್ ಕರೆಯಲು ಸದಸ್ಯರ ಒತ್ತಾಯ | ಕಾಂಗ್ರೆಸ್ ಸದಸ್ಯರಲ್ಲಿಯೇ ಪರಸ್ಪರ ವಾಗ್ವಾದ | ಕಾಂಗ್ರೆಸ್ ಸದಸ್ಯ ಬಶೀರ್ ಅಹ್ಮದ್ ಬೇಪಾರಿಯಿಂದ ಅನುಚಿತ, ಅಸಭ್ಯ ಪದಗಳ ಬಳಕೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಹಿಳಾ ಸದಸ್ಯರ ಮೌನ, ಕೆಲವೇ ಬೆರಳೆಣಿಕೆಯ ಸದಸ್ಯರು ಚರ್ಚೆಯಲ್ಲಿ ಭಾಗಿ, ಇಂತಹ ಹಲವು ವಿಶೇಷಗಳ ನಡುವೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಸಾಮಾನ್ಯ ಸಭೆ ಜರುಗಿತು.
ಪಟ್ಟಣದ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಆರಂಭಗೊಂಡ ಸಾಮಾನ್ಯ ಸಭೆಯಲ್ಲಿ ಹಿಂದಿನ ಐದು ತಿಂಗಳ ಜಮಾ ಖರ್ಚು, ಸಂತೆ ಲೀಲಾವು ಟೆಂಡರ್, ಇ-ಖಾತಾ ಉತಾರಿ ಕುರಿತು ಚರ್ಚೆ ಆರಂಭಗೊಂಡಿತು.
ಈ ಸಂದರ್ಭದಲ್ಲಿ ಸಭೆಯ ನೋಟಿಸ್ ಕುರಿತಾಗಿ ಕಾಂಗ್ರೆಸ್ ಸದಸ್ಯ ಬಶೀರ್‌ಅಹ್ಮದ್ ಬೇಪಾರಿ ಆರಂಭದಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದರು. ನಾಮ ನಿರ್ದೇಶಿತ ಸದಸ್ಯರಿಗೆ ಹಿಂದಿನ ಸಭೆಯ ಕುರಿತು ಮಾಹಿತಿ ನೀಡದ ಹಾಗೂ ಸಹಿ ಪಡೆಯದ ವಿಷಯಗಳಿಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿ ನಾಮ ನಿರ್ದೇಶಿತ ಸದಸ್ಯ ರಾಜು ಮೆಟಗಾರ ಸಭೆಯಿಂದ ಹೊರನಡೆದರು. ನಂತರ ಸಂತೆ ಹಾಗೂ ಮಾರಾಟದ ಕುರಿತಾಗಿ ಟೆಂಡರ್ ಕರೆಯದೇ ಇರುವ ವಿಷಯವಾಗಿ ಚರ್ಚೆ ಆರಂಭಗೊಂಡು ಸದಸ್ಯರಾದ ಕಾಸುಗೌಡ ಜಲಕತ್ತಿ, ಕಾಸು ಜಮಾದಾರ, ಬಶೀರ್ ಅಹ್ಮದ್ ಬೇಪಾರಿ, ಉಮೇಶ ರೂಗಿ ಮಾತನಾಡಿ, ಕಳೆದ ದಿನಗಳಿಂದ ಸಂಗ್ರಹಿಸಿದ ಸಂತೆ ಹಾಗೂ ಮಾರಾಟದ ಕರಸಂಗ್ರಹದ ಮಾಹಿತಿ ನೀಡಲು ಸದಸ್ಯರು ಆಗ್ರಹಿಸಿದರು.
ವಿವಿಧ ವಾರ್ಡಗಳಲ್ಲಿ ೨ ಲಕ್ಷ ರೂ.ಗಳ ವೆಚ್ಚದಲ್ಲಿ ಕೈಗೊಂಡ ಕಾಮಗಾರಿ ಕುರಿತು ಸದಸ್ಯರು ಮುಖ್ಯಾಧಿಕಾರಿಗಳ ನಡುವೆ ಚರ್ಚೆ ಜರುಗಿತು. ಈ ಸಂದರ್ಭದಲ್ಲಿ ಸಿ.ಸಿ.ಕ್ಯಾಮೆರಾ ಅಗತ್ಯತೆ, ಅಳವಡಿಕೆ ಕುರಿತು ಸದಸ್ಯರು ಸೂಚಿಸಿದರು. ಜೊತೆಗೆ ೭ ಲಕ್ಷ ರೂ.ಗಳ ವೆಚ್ಚದಲ್ಲಿ ಪಟ್ಟಣ ಪಂಚಾಯಿತಿಗೆ ಒದಗಿಸಲಾದ ಪೀಠೋಪಕರಣಗಳ ರಶೀದಿಯನ್ನು ಮುಂದಿನ ಸಭೆಯಲ್ಲಿ ನೀಡಲು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರ ಗಮನಕ್ಕೆ ತಾರದೇ ಮುಖ್ಯಾಧಿಕಾರಿಗಳು ತಾವೇ ನಿರ್ಧಾರ ಕೈಗೊಳ್ಳುವದು ಹಾಗೂ ಉತಾರಿ ನೀಡುವ ಸಂದರ್ಭದಲ್ಲಿ ಅನಗತ್ಯ ಹಣ ಪಡೆಯಲಾಗುತ್ತಿರುವ ವಿಷಯಗಳ ಕುರಿತು ಕಾಂಗ್ರೆಸ್ ಸದಸ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ನಾಮ ನಿರ್ದೇಶಿತ ಸದಸ್ಯರ ಸಹಿತ ೨೦ ಜನ ಸದಸ್ಯ ಬಲದಲ್ಲಿ ಕೇವಲ ೧೬ ಜನ ಸದಸ್ಯರ ಹಾಜರಿದ್ದರು. ಸಭೆಯಲ್ಲಿ ಅಧ್ಯಕ್ಷೆ, ಉಪಾಧ್ಯಕ್ಷ ಸಹಿತ ಮಹಿಳಾ ಸದಸ್ಯರು ಮೌನದ ಮೊರೆಹೋದರು. ಕೆಲವು ವಿಷಯಗಳ ಚರ್ಚೆಯಲ್ಲಿ ಕಾಂಗ್ರೆಸ್ ಸದಸ್ಯರು ಮಹಿಳಾ ಸದಸ್ಯರಿದ್ದಾರೆ ಎಂಬುದನ್ನು ಗಮನಿಸದೇ ಅನುಚಿತ, ಅವಾಚ್ಯ ಶಬ್ಧಗಳ ಬಳಕೆ ಮಾಡಿದ್ದು ಕಂಡು ಬಂದಿತು.
ಸಭೆಯಲ್ಲಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಬಿನಾಳ, ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ, ಸದಸ್ಯರಾದ ಶಾಂತಯ್ಯ ಜಡಿಮಠ, ಕಾಸುಗೌಡ ಬಿರಾದಾರ(ಜಲಕತ್ತಿ), ಸಿಂಧೂರ ಡಾಲೇರ, ನಾಮ ನಿರ್ದೇಶಿತ ಸದಸ್ಯರಾದ ರಾಜು ಮೆಟಗಾರ, ಹುಸೇನ್ ಕೊಕಟನೂರ, ಸುನೀಲ ಕನಮಡಿ ಹಾಗೂ ಮಹಿಳಾ ಸದಸ್ಯರು ಇದ್ದರು.