ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಪ್ರತಿ ವರ್ಷವು ಗಜಾನನ ಉತ್ಸವಕ್ಕಾಗಿ ಗಜಾನನ ಮಹಾಮಂಡಳದಲ್ಲಿ ನೋಂದಾಯಿತ ಎಲ್ಲ ಗಜಾನನ ಮಂಡಳಿಗಳಿಗೆ 5ಸಾವಿರ ರೂ. ಪ್ರೋತ್ಸಾಹ ದೇಣಿಗೆ ನೀಡಲಿದ್ದೇವೆ ಎಂದು ಶಾಸಕ ಜಗದೀಶ್ ಗುಡಗುಂಟಿ ಹೇಳಿದರು.
ನಗರದ ಸಾಕ್ಷಾತ್ಕಾರ ನಿಲಯದ ಶಾಸಕರ ಗೃಹ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಹಾಮಂಡಳದಲ್ಲಿ ನೋಂದಾಯಿಸಿ ಪ್ರತಿಷ್ಠಾಪಿಸಿದ 5, 7, 9 ದಿನಗಳ ಗಜಾನನ ಮಂಡಳಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವದು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ ಎಲ್ಲ ಗಣೇಶ ಮಂಡಳಗಳಿಗೆ 25 ಕೆಜಿ ಸಕ್ಕರೆ ನೀಡಲಿದ್ದೇವೆ ಎಂದರು.
ಎಲ್ಲರೂ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರ ಕಾಳಜಿ ಮೆರೆಯಬೇಕು ಎಂದರು.
ಗಣೇಶನ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ದಿನದಂದು ಮಾನವನ ಶರೀರದ ಮೇಲೆ ದುಷ್ಪರಿಣಾಮ ಉಂಟುಮಾಡುವ ಶಬ್ದ ಮಾಲಿನ್ಯ ಉಂಟಾಗುವ ಡಿಜೆ ಹಚ್ಚಬಾರದು ಎಂದು ವಿನಂತಿಸಿದರು.
ಪ್ರತಿ ಮಂಡಳಿಯವರು ಪ್ರತಿ ದಿನ ವಿವಿಧ ದೇಶೀಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಶೃದ್ಧಾ ಭಕ್ತಿಯಿಂದ ಗಣೇಶ ಹಬ್ಬ ಆಚರಿಸೋನಾ ಎಂದರು.
ಮಹಾಮಂಡಳ ಅಧ್ಯಕ್ಷ ಸಚೀನ ಪಟ್ಟಣಶೆಟ್ಟಿ ಮಾತನಾಡಿ, ನಗರದಲ್ಲಿ ಪ್ರತಿಷ್ಠಾಪಿಸುವ ಎಲ್ಲ ಮಂಡಳಿಯವರು ಶಾಂತರೀತಿಯಿಂದ ಗಣೇಶ ಉತ್ಸವವನ್ನು ಆಚರಿಸಬೇಕು.
ಪರವಾಣಿಗೆಯನ್ನು ಮಂಡಳಿಯಿಂದ ತೆಗೆಸಿ ಕೊಡಲಾಗುವದು.
ಮನೆಯಲ್ಲಿ ಪ್ರತಿಷ್ಠಾಪಿಸಿದ ಅಲಂಕಾರಿಕ ಗಣೇಶನಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲು ನಮ್ಮ ವ್ಯಾಟ್ಸಪ್ ಸಂ: 8431765519, 7019690184 ಫೋಟೋ ತೆಗೆದು ಕಳುಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಶ್ರೀಗಳು, ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಗ್ರಾಮೀಣ ಮಂಡಲ ಅಧ್ಯಕ್ಷ ಮಲ್ಲು ದಾನಗೌಡ, ರಾಕೇಶ ಲಾಡ್, ಗಣೇಶ ಶಿರಗಣ್ಣವರ, ಮಾಧ್ಯಮ ಸಂಚಾಲಕ ಶ್ರೀಧರ ಕಂಬಿ ಇತರರು ಇದ್ದರು.