ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಖಂಡನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಸಾಹಿತ್ಯ ಲೋಕದ ಹೆಮ್ಮೆಯ ಲೇಖಕಿ, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೆಲವು ನಾಯಕರಿಂದ ನಡೆಯುತ್ತಿರುವ ಅವಮಾನಕಾರಿ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ತಿಳಿಸಿದರು.
ಪತ್ರಿಕಾ ಪ್ರಕಟಣೆಯಲ್ಲಿ ಅವರು “ಬಾನು ಮುಷ್ತಾಕ್ ಅವರು ತಮ್ಮ ಕೃತಿ “ಹಾರ್ಟ್ ಲ್ಯಾಂಪ್” ಮೂಲಕ ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟವರು. ಆದರೆ, ಬಿಜೆಪಿಯ ಕೆಲವು ನಾಯಕರು ಮತ್ತು ಅವರ ಸಂಘಟನೆಯ ಕಾರ್ಯಕರ್ತರು ಲೇಖಕಿಯ ಸಾಮಾಜಿಕ ಕಾರ್ಯಗಳು ಮತ್ತು ಅವರ ವೈಯಕ್ತಿಕ ನಿಲುವುಗಳನ್ನು ಗುರಿಯಾಗಿಟ್ಟುಕೊಂಡು ಅವಮಾನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಬಾನು ಮುಷ್ತಾಕ್ ಅವರು ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಮತ್ತು ಸೌಹಾರ್ದತೆಗಾಗಿ ದಶಕಗಳಿಂದ ಶ್ರಮಿಸುತ್ತಿರುವ ಕಾರ್ಯಕರ್ತೆಯಾಗಿದ್ದಾರೆ. ಅವರ ಸಾಹಿತ್ಯವು ಶೋಷಿತರ, ತಳ ಸಮುದಾಯಗಳ, ವಿಶೇಷವಾಗಿ ಮಹಿಳೆಯರ ಧ್ವನಿಯನ್ನು ಎತ್ತಿಹಿಡಿಯುತ್ತದೆ. ಆದರೆ, ಬಿಜೆಪಿಯ ಕೆಲವು ಮುಖಂಡರು ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ ಗೌರವಾನ್ವಿತ ವ್ಯಕ್ತಿಯನ್ನು ಟೀಕಿಸುವ ಮೂಲಕ ಕನ್ನಡಿಗರೆಲ್ಲರಿಗೂ ಅವಮಾನ ಮಾಡಿದಂತಿದೆ” ಎಂದು ಭೋಗೇಶ್ ಸೋಲಾಪುರ್ ಆರೋಪಿಸಿದರು.