ಚಡಚಣ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜಗಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಹಕಾರ ತಳಹದಿಯ ಮೇಲೆ, ಶಿಕ್ಷಕರ ಕಲ್ಯಾಣಕ್ಕೋಸ್ಕರ ಕಾರ್ಯ ನಿರ್ವಹಿಸುತ್ತಿರುವ ಈ ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿ ಅತ್ಯಧಿಕ ಬಂಡವಾಳ ಹೊಂದಿ, ರಾಜ್ಯಕ್ಕೆ ಮಾದರಿ ಯಾಗಿದೆ ಎಂದು ಚಡಚಣ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜಗಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಆಯೋಜಿಸಲಾದ ಚಡಚಣ ಭಾಗದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಪತ್ತಿನ 56ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಚಡಚಣ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಪತ್ತಿನ ಶಿಕ್ಷಕರ ಸೊಸೈಟಿ ಅಧ್ಯಕ್ಷ ಎಸ್.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, 1969ರಲ್ಲಿ ದಿ.ಭೋಜಪ್ಪ ಸಿದ್ರಾಮಪ್ಪ ಹೊರ್ತಿ ನೇತೃತ್ವದಲ್ಲಿ ಕೇವಲ 15 ರಿಂದ 20 ಶಿಕ್ಷಕರಿಂದ ಕೇವಲ 15 ರೂ. ಬಂಡವಾಳದೊಂದಿಗೆ ಪ್ರಾರಂಭವಾದ ಈ ಸಹಕಾರ ಸಂಘ ಇಂದು 27 ಕೋಟಿ ರೂ. ಬೃಹತ್ ಬಂಡವಾಳ ಹೊಂದಿದೆ. ಈಗಾಗಲೇ ಸ್ವಂತ ಕಟ್ಟಡ ಹೊಂದಿರುವ ಈ ಸಂಘ, ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಇನ್ನೊಂದು ನೂತನ ಕಟ್ಟಡದ ಕಾಮಗಾರಿ ಅರಂಭಿಸಿದೆ ಎಂದರು.
ಮುಖ್ಯ ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿ ಚಿದಾನಂದ ಕಟ್ಟಿಮನಿ ಮಾತನಾಡಿ, ಚಡಚಣ ತಾಲೂಕಿನ ಶಿಕ್ಷಕರ ಪ್ರಾಮಾಣಿಕ ಸೇವೆಯಿಂದ ಈ ಪತ್ತಿನ ಸಂಘ ಇಷ್ಟು ಹೆಮ್ಮರವಾಗಿ ಬೆಳೆದದ್ದು ಅತ್ಯಂತ ಸಂತೋಷದ ವಿಷಯ ಎಂದರು.
ದಿವ್ಯ ಸಾನಿದ್ಯ ವಹಿಸಿದ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಇಡೀ ಜಗತ್ತಿಗೆ ಜ್ಞಾನವೆಂಬ ಬೆಳಕನ್ನು ನೀಡುವವನು ಶಿಕ್ಷಕ ಶಿಕ್ಷಕರ ಶಕ್ತಿ ಅಪಾರ ಶಿಕ್ಷಕನ ಆಶೀರ್ವಾದದಿಂದ ಶಿಷ್ಯ ಇಡೀ ಜಗತ್ತನ್ನೇ ಗೆಲ್ಲಬಹುದು.ಶಿಕ್ಷಕರು ಮಕ್ಕಳಿಗೆ ವಿದ್ಯೆ ಜೊತೆಗೆ ಸಂಸ್ಕಾರ ನೀಡಬೇಕು. ಇದೇ ಸಂಸ್ಕಾರದಿಂದ ನಮ್ಮ ದೇಶ ಭವ್ಯ ಭಾರತವಾಗುತ್ತದೆ ಎಂದರು.
ಸಾನಿಧ್ಯ ವಹಿಸಿದ ಚಡಚಣ ವಿರಕ್ತಮಠದ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಭವಿಷ್ಯದಲ್ಲಿ ಇನ್ನು ಉತ್ತಂಗಕ್ಕೆ ಬೆಳೆಯಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ತಾಲೂಕಿನ ಅತ್ಯುತ್ತಮ ಶಿಕ್ಷಕರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಖ್ಯಾತ ಹಾಸ್ಯ ಕಲಾವಿದ ಮಾದೇವ ಸತ್ತಿಗೇರ ಹಾಸ್ಯ ಕಾರ್ಯಕ್ರಮ ನೆರವೇರಿಸಿ ಕೊಟ್ಟರು.
ಸಭೆಯಲ್ಲಿ ಚಡಚಣ ತಾಲೂಕಿನ ನೌಕರರ ಸಂಘ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು.