ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಸಾಧಿಸಲು ಕ್ರೀಡೆಗಳು ಪೂರಕವಾಗಿವೆ. ದಸರಾ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಸ್ಪೂರ್ತಿಯಿಂದ ಭಾಗವಹಿಸಿ ಉತ್ತಮ ಸಾಧನೆ ಮಾಡುವಂತಾಗಬೇಕೆಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಽಕಾರ ಹಾಗೂ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೨೦೨೫-೨೬ ನೇ ಸಾಲಿನ ಬಸವನಬಾಗೇವಾಡಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ದಸರಾ ಕ್ರೀಡಾಕೂಟಗಳು ಯುವ ಸಮೂಹವನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುತ್ತವೆ.ಗ್ರಾಮೀಣ ಜನರಿಗೆ ದಸರಾ ಕ್ರೀಡಾಕೂಟ ಅವಕಾಶ ನೀಡುತ್ತದೆ. ಆರೋಗ್ಯವಂತ ಮನುಷ್ಯನಿಗೆ ಕ್ರೀಡೆ ಮಹತ್ವದಾಗಿದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿ, ಕ್ರೀಡೆ ಮನುಷ್ಯನ ಬದುಕಿಗೆ ಪ್ರೋತ್ಸಾಹ ಹೆಚ್ಚಿಸುತ್ತದೆ. ಶರೀರ ಸದೃಢವಾಗಿರಲು ಕ್ರೀಡೆ ಮುಖ್ಯವಾಗಿದೆ.ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಆರಂಭಿಸಿದ ದಸರಾ ಕ್ರೀಡಾಕೂಟ ಇಂದಿಗೂ ಪ್ರತಿ ವರ್ಷ ಸರ್ಕಾರ ನಡೆಸುತ್ತಾ ಬರುತ್ತಿದೆ. ಈ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರೂ ಭಾಗವಹಿಸಲು ಅವಕಾಶವಿರುತ್ತದೆ. ಇದು ಪ್ರತಿ ವರ್ಷ ತಾಲೂಕು ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ನಡೆಯುತ್ತಿರುವದು ಶ್ಲಾಘನೀಯ ಎಂದರು.
ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಮಾತನಾಡಿ, ಕ್ರೀಡೆಯು ಮನುಷ್ಯನಿಗೆ ಜೀವನದಲ್ಲಿ ಶಿಸ್ತು ಕಲಿಸುತ್ತದೆ. ನಮ್ಮ ತಾಲೂಕಿನಲ್ಲಿರುವ ಕ್ರೀಡಾಪಟುಗಳು ಇಂತಹ ಕ್ರೀಡಾಕೂಟದ ಸದುಪಯೋಗ ಪಡೆಸಿಕೊಂಡು ತಾಲೂಕಿಗೆ ಕೀರ್ತಿ ತರುವಂತಾಗಬೇಕೆಂದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ಸರ್ಕಾರಿ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ರಮೇಶ ಪೂಜಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಚ್.ಬಿ.ಬಾರಿಕಾಯಿ, ಹಿರಿಯ ಶಿಕ್ಷಕ ಮಹಾಂತೇಶ ಝಳಕಿ ಇತರರು ಇದ್ದರು.
ಬಸವರಾಜ ಚಿಂಚೋಳ್ಳಿ ಸ್ವಾಗತಿಸಿದರು. ಮಹೇಶ ಪೂಜಾರಿ ನಿರೂಪಿಸಿದರು. ತಾಲೂಕು ದೈಹಿಕ ವಿಷಯ ಪರಿವೀಕ್ಷಕ ಎಸ್.ಎಸ್.ಅವಟಿ ವಂದಿಸಿದರು. ನಂತರ ವಿವಿಧ ಕ್ರೀಡೆಗಳು ಜರುಗಿದವು.