ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕಳ್ಳರು ನ್ಯಾಯಾಧೀಶರ ಮನೆಯನ್ನೇ ದೋಚಿ ಪರಾರಿಯಾದ ಘಟನೆ ಇಲ್ಲಿನ ಹುಡಕೋ ಬಡಾವಣೆಯಲ್ಲಿ ನಡೆದಿದೆ.
ಬಡಾವಣೆಯ ೧೪ನೇ ಕ್ರಾಸ್ ನಲ್ಲಿರುವ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಅವರ ಮನಗೆ ಕಳ್ಳರು ನುಗ್ಗಿ ತಮ್ಮ ಕೈಚಳಕವನ್ನು ತೋರಿಸಿದ್ದು ನಗ ನಾಣ್ಯ ದೋಚಿದ್ದಾರೆ. ನ್ಯಾಯಾಲಯಕ್ಕೆ ಸಾಲು ಸಾಲು ರಜೆ ಇರುವ ಹಿನ್ನೆಲೆ ನ್ಯಾಯಾಧೀಶರು ಪರಿವಾರದ ಸಮೇತ ರವಿವಾರ ಬೆಳಿಗ್ಗೆ ತಮ್ಮೂರಿಗೆ ತೆರಳಿದ್ದು, ಮನೆಯಲ್ಲಿ ಯಾರೂ ಇರದನ್ನ ಖಚಿತಪಡಿಸಿಕೊಂಡ ಕಳ್ಳರು ಈ ಕೃತ್ಯ ಎಸಗಿದ್ದಾರೆ.
ಸಾಧನಗಳನ್ನು ಬಳಸಿ ಮನೆಯ ಬೀಗವನ್ನು ಸಲೀಸಾಗಿ ತೆಗೆದು ಒಳ ನುಗ್ಗಿದ ಖತರ್ನಾಕ್ ಕಳ್ಳರು ದೇವರ ಕೋಣೆ, ಇನ್ನೀತರ ವಸ್ತುಗಳಿಗೆ ಕೈ ಹಾಕದೇ, ಅಲಮೇರಾ, ಕಬೋರ್ಡ ಗಳನ್ನು ಕಿತ್ತಾಡಿ ನಗನಾಣ್ಯಗಳನ್ನು ದೋಚಿದ್ದಾರೆ ಎನ್ನಲಾಗಿದೆ.
ಘಟನೆಯ ಮನೆಯ ಪಕ್ಕದ ಮನೆಯಲ್ಲಿರುವ ನಿವಾಸಿ ನ್ಯಾಯವಾದಿ ಬಿ.ಎ.ಪಾಟೀಲ ಅವರು ಉದಯರಶ್ಮಿಯೊಂದಿಗೆ ಮಾತನಾಡಿ ನಾನು ಸೋಮುವಾರ ನಸುಕಿನ ಜಾವ ೩:೪೫ ಕ್ಕೆ ಎದ್ದು ಮನೆಯ ಎದುರುಗಡೆಯೇ ೪೫ ನಿಮಿಷಗಳ ಕಾಲ ವಾಕಿಂಗ್ ಮಾಡಿದ್ದೇನೆ. ಯಾವುದೇ ಸಂಶಯ ಬಂದಿಲ್ಲ. ಆದರೆ ಬೆಳಿಗ್ಗೆ ೧೦:೩೦ ರ ಸುಮಾರು ನೋಡಿದರೆ ಹೊರಗಡೆಯ ಗೇಟ್ ಬೀಗ ಹಾಕಿತ್ತು. ಬಾಗಿಲು ಸಂಶಯಾಸ್ಪದವಾಗಿತ್ತು. ಸಾಹೇಬರು ಅಥವಾ ಅವರ ಮನೆಗೆ ಯಾರಾದರೂ ಬಂದಿರಬಹುದು ಎಂದು ವಿಚಾರಿಸಲಾಗಿ ಯಾರೂ ಬಂದಿಲ್ಲವೆಂದು ತಿಳಿಸಿದಾಗ ಒಳಗೆ ನೋಡಲಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆನು ಎಂದು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ದೌಡಾಯಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ, ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ತಾಲೂಕು ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ ಮತ್ತು ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಅವರು ಆದಷ್ಟು ಬೇಗ ಕಳ್ಳರ ಕೈಗೆ ಕೋಳಾ ತೊಡಿಸುವಂತೆ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಭೇಟಿ :ಕಳ್ಳರ ಪತ್ತೆಗೆ ಬಲೆ
ಮಾಹಿತಿ ದೊರೆಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಎಸ್.ಪಿ.ರಾಮನಗೌಡ ಹಟ್ಟಿ, ಡಿವಾಯ್‌ಎಸ್‌ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮೊಹಮ್ಮದ ಫಸಿಯುದ್ಧಿನ್, ಪಿಎಸ್‌ಐ ಸಂಜೀವ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್.ಎಲ್.ಮನ್ನಾಬಾಯಿ ತನಿಖೆ ಕೈಗೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಬೆರಳಚ್ಚು ತಜ್ಞರ ತಂಡ ಮತ್ತು ಶ್ವಾನ ದಳದವರನ್ನು ಕರೆಯಿಸಿ ಕಾರ್ಯಾಚರಣೆ ನಡೆಸಿದ್ದು ಆದಷ್ಟು ಬೇಗ ಕಳ್ಳರನ್ನು ಹೆಡೆಮುರಿ ಕಟ್ಟುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.