ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ರಾಮತೀರ್ಥ ಕೆರೆಯ ನೀರು ರಾಸಾಯನಿಕ ಕಾರಣದಿಂದ ಕಪ್ಪು ಹಾಗೂ ಕೆಂಪು ಬಣ್ಣಕ್ಕೆ ತಿರುಗಿದ್ದು ಕೂಡಲೇ ತಾಲ್ಲೂಕು ಆಡಳಿತ ಈ ಕುರಿತು ಕ್ರಮ ಕೈಗೊಳ್ಳಲು ಆಗ್ರಹಿಸಿ ರೈತರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಲಯಕ್ಕೆ ಸೋಮವಾರ ಆಗಮಿಸಿದ ಪಟ್ಟಣ ಹಾಗೂ ಪಡಗಾನೂರ, ಚಿಕ್ಕರೂಗಿ ಗ್ರಾಮಗಳ ರೈತರು ರಾಮತೀರ್ಥ, ಕಡ್ಲೇವಾಡ ಕೆರೆಗಳ ನೀರು ಕಂದು, ಕೆಂಪು ಬಣ್ಣಕ್ಕೆ ತಿರುಗಿದ ಕುರಿತು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀಶೈಲ ಕಬ್ಬಿನ ಮಾತನಾಡಿ, ದೇವರಹಿಪ್ಪರಗಿ ಪಟ್ಟಣದ ಜಹಾಂಗೀರ ಮುಲ್ಲಾ ಎನ್ನುವವರಿಗೆ ಸೇರಿದ ಇಟ್ಟಂಗಿ ಭಟ್ಟಿಯಲ್ಲಿ ಬಳಸಿದ ಯಾವುದೇ ರಾಸಾಯನಿಕ ಕಾರಣದಿಂದ ನೀರು ಹರಿದು ನಮ್ಮೂರ ಧಾಮದ ಭಾವಿ ಸಹಿತ ರಾಮತೀರ್ಥ ಕೆರೆಯ ನೀರು ಸಂಪೂರ್ಣ ಕಂದು ಬಣ್ಣಕ್ಕೆ ತಿರುಗಿ ಬಳಸಲು ಬಾರದಂತಾಗಿವೆ. ಜೊತೆಗೆ ಇದೇ ನೀರು ಕಡ್ಲೇವಾಡ ಕೆರೆಗೆ ಹರಿಯುತ್ತಿರುವುದರಿಂದ ಆ ನೀರು ಸಹ ಕಂದು ಬಣ್ಣಕ್ಕೆ ತಿರುಗಿದೆ. ಈ ನೀರು ಪ್ರಾಣಿ, ಪಕ್ಷಿ, ಜಾನುವಾರಗಳ ಜೀವಕ್ಕೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಯಿದ್ದು, ಕೂಡಲೇ ತಾಲ್ಲೂಕು ಆಡಳಿತ ಈ ಕುರಿತು ಅಗತ್ಯ ಕ್ರಮ ವಹಿಸಲು ಆಗ್ರಹಿಸಿ ನಂತರ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ ಸಿಂದಗಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವಕೀಲ ಬಿ.ಎಮ್.ಪಡಗಾನೂರ, ಶಾಂತಪ್ಪ ದೇವೂರ, ಎ.ಎಮ್.ಇನಾಮದಾರ, ಸಂಜೀವ ಕವಲಗಿ, ಕೆ.ಆರ್.ಪಾತ್ರೋಟ, ವೈ.ಎಸ್.ಜಾಧವ, ಲಿಂಗರಾಜ ಚವ್ಹಾಣ ಸಹಿತ ಹಲವರು ಇದ್ದರು.