ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಸಂಘ ಸಂಸ್ಥೆಗಳು ಬೆಳೆಯಬೇಕಾದರೆ ಒಗ್ಗಟ್ಟು ಮುಖ್ಯ. ಆಟದ ಜೊತೆಗೆ ಸಮಾಜಮುಖಿ ಕಾರ್ಯದ ಜೊತೆಗೆ ಉತ್ತಮ ಕೊಡುಗೆ ನೀಡುತ್ತ ಬಂದ ಸಂಸ್ಥೆ ಇದಾಗಿದೆ ಎಂದು ಎಸಿ ಶ್ವೇತಾ ಬೀಡಿಕರ ಹೇಳಿದರು.
ನಗರದ ತಾಲೂಕಾ ಕ್ರೀಡಾಂಗಣದ ತಾಲೂಕಾ ಬ್ಯಾಡ್ಮಿಂಟನ್ ಇನ್ ಡೋರ್ ಸ್ಟೇಡಿಯಂನಲ್ಲಿ ಜಮಖಂಡಿ ಶಟಲ್ ಬ್ಯಾಡ್ಮಿಂಟನ್ ಸ್ಪೋರ್ಟ್ಸ್ ಇನ್‌ಸ್ಟಿಟ್ಯುಟ್ ಆಶ್ರಯದಲ್ಲಿ ನಡೆದ ಉತ್ತರ ಕರ್ನಾಟಕ ಬ್ಯಾಡ್ಮಿಂಟನ್ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂಸ್ಥೆಯು ನಿಂತ ನೀರಾಗದೇ ಮುಂದುವರೆಯಬೇಕು. ಗಟ್ಟಿ ನೆಲಗಟ್ಟಿನ ಸಂಘವಾಗಿ ಆಟೋಟದಲ್ಲಿ ಸಾರ್ವಜನಿಕರಿಗೆ ನೆರವಾಗಬೇಕು ಎಂದು ಹೇಳಿದರು.
ಡಿವೈಎಸ್ಪಿ ಎಸ್.ರೋಷನ್ ಜಮೀರ್ ಮಾತನಾಡಿ, ಕ್ರೀಡಾ ಪಟುಗಳು ಬೆಳೆಯಬೇಕಾದರೆ ಕ್ರೀಡಾ ಪ್ರೇಮಿಗಳು ಬೇಕು. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರುವ ಕ್ರೀಡೆಗೆ ಹೆಚ್ಚಿನ ಪ್ರಾಶಸ್ಕೃ ನೀಡಬೇಕು. ಈ ನಗರ ಕ್ರೀಡೆಗೆ ಹೆಚ್ಚು ಮಹತ್ವ ನೀಡುತ್ತಿದೆ, ಇಲ್ಲಿ ದೇಸೀಯ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ತಹಸೀಲ್ದಾರ್ ಅನಿಲ ಬಡಿಗೇರ ಮಾತನಾಡಿ, ನಾವಿರುವದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಆರೊಗ್ಯದತ್ತ ಗಮನ ಹರಿಸುತ್ತಿಲ್ಲ ಅದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಅದನ್ನು ತಪ್ಪಿಸಲು ದಿನದ ಒಂದು ಗಂಟೆಯಾದರೂ ಸಹ ದೈಹಿಕ ಚಟುವಟಿಕೆಗೆ ನಿಗದಿ ಮಾಡಬೇಕು. ಸರಕಾರಿ ಸ್ವಾಮಿತ್ಯದ ಈ ಒಳಾಂಗಣ ಕ್ರೀಡಾಂಗಣ ಸುಸಜ್ಜಿತ ವಾಗಿದೆ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ವಾಜಂತ್ರಿ ಮಾತನಾಡಿದರು.
ವೇದಿಕೆಯಲ್ಲಿ ನಗರ ಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ರಾಜು ಗಸ್ತಿ, ಹುನ್ನೂರ ಪಿಕೆಪಿಎಸ್ ಅಧ್ಯಕ್ಷ ದಯಾನಂದ ಗುರವ, ಚಂದ್ರಗೌಡ ಪಾಟೀಲ, ಅರ್ಜುನ ದಳವಾಯಿ ಇತರರು ಇದ್ದರು.
ಫಾತಿಮಾ ಡಾಂಗೆ ಪ್ರಾರ್ಥಿಸಿದರು. ಡಾ ಎನ್.ವಿ ಅಸ್ಕಿ ನಿರೂಪಿಸಿ ಸ್ವಾಗತಿಸಿದರು.