ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲ್ಲೂಕಿನ ಮುತ್ತೂರು ಗ್ರಾಮದ ನಡುಗಡ್ಡೆ ಪ್ರದೇಶ ಹಾಗೂ ತುಬಚಿ ಗ್ರಾಮದ ಮುಳುಗಡೆ ಪ್ರದೇಶಗಳಿಗೆ ತಹಸೀಲ್ದಾರ ಅನೀಲ ಬಡಿಗೇರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನದಿ ತೀರದ ಗ್ರಾಮಗಳು ಹಾಗೂ ನಡುಗಡ್ಡೆ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಡುಗಡ್ಡೆ ಪ್ರದೇಶದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ತುಬಚಿ ಗ್ರಾಮದಲ್ಲೂ ಸಹ ಕೆಲ ಕುಟುಂಬಗಳು ಹಾಗೂ ಜಾನುವಾರುಗಳನ್ನು ಸ್ಥಳಾಂತರಿಸಲಾಯಿತು.
ತಾಲೂಕಿನ ನದಿ ತೀರದ 23 ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದ್ದು, ಪ್ರವಾಹ ಸ್ಥಿತಿ ಎದುರಾದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ, ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳ ಮೂಲಕ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.