ಚಡಚಣ ತಾಲೂಕಿನ ಭೀಮಾನದಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಚಡಚಣ ತಾಲೂಕಿನ ಭೀಮಾನದಿಯ ನದಿಯ ದಡದಲ್ಲಿ ಬರುವ ಪ್ರವಾಹ ಪೀಡಿತ ಪ್ರದೇಶಗಳಾದ ದಸೂರ, ಉಮರಜ, ಗೋವಿಂದಪೂರ, ನಿವರಗಿ, ಹೊಳಿಸಂಖ ಹಾಗೂ ಉಮರಾಣಿ ಗ್ರಾಮಗಳಿಗೆ ಬೇಟಿ ನೀಡಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.
ಮಹಾರಾಷ್ಟ್ರದ ಉಜನಿ ಮತ್ತು ನೀರಾ ಜಲಾಶಯ ಮತ್ತು ಭೀಮಾ ಕಣಿವೆ ಪ್ರದೇಶದಲ್ಲಿ ಕೆಲವು ದಿನಗಳಿಂದ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಜಲಾಶಯಕ್ಕೆ ಅಪಾರ ನೀರು ಹರಿದು ಬಂದು ಉಜನಿ ಮತ್ತು ನೀರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ಹೆಚ್ಚಿನ ನೀರು ಭೀಮಾನದಿಗೆ ಹರಿ ಬಿಡಲಾಗುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ.
ಶುಕ್ರವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿನೀಡಿ ಮಾತನಾಡಿದ ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಭೀಮಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ನದಿ ತೀರದಲ್ಲಿ ವಾಸವಾಗಿರುವ ಜನರಿಗೆ ಸುರಕ್ಷಿತ ತಾಣಗಳತ್ತ ತೆರಳಲು ಈಗಾಗಲೇ ಸೂಚಿಸಲಾಗಿದೆ. ನದಿ ತೀರದ ಗ್ರಾಮಗಳಲ್ಲಿ ಡಂಗುರವನ್ನೂ ಸಾರಲಾಗಿದೆ. ಜನತೆ ತಮ್ಮ ಸಾಮಾನು ಸರಂಜಾಮುಗಳು ಹಾಗೂ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿಗಳು ಜಿಲ್ಲಾ ಪಂಚಾಯತ ವಿಜಯಪುರ ಹಾಗೂ ಪ್ರವಾಹ ಪರಿಸ್ಥಿತಿ ನಿಯಂತ್ರಣ ನೋಡಲ್ ಅಧಿಕಾರಿಗಳು, ತಾಲೂಕು ಮುಖ್ಯ ಯೋಜನಾಧಿಕಾರಿ ಹಾಗೂ ವಿಪತ್ತು ನಿರ್ವಹಣಾಧಿಕಾರಿ ವಿ.ಬಿ. ಕುಂಬಾರ, ತಾಪಂ ಇಒ ಸಂಜಯ ಖಡಗೇಕರ,ಚಡಚಣ ಆರಕ್ಷಕ ವೃತ್ತ ನಿರೀಕ್ಷಕರು, ಸಹಾಯಕ ನಿರ್ದೇಶಕ ಎಸ್.ಆರ್. ಕೊಟ್ಟಲಗಿ, ಪಿಡಿಓ ಗಳು ಭೇಟಿ ನೀಡಿ ಪರಿಶೀಲಿಸಿದರು.