ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
ಶರಣ ಮಾಸದ ಎಂಟನೆಯ ದಿನದ ಅನುಭಾವ ಮಾಲಿಕೆಯಲ್ಲಿ ಡಾ. ರಾಜಶೇಖರ ಬಿರಾದಾರ ಅವರು “ಅರಿವಿನ ಬೆಳಕು ಅಲ್ಲಮ” ವಿಷಯ ಕುರಿತು ಹೇಳುತ್ತಾ ಕವಿ ಕುವೆಂಪು ಅವರ ಕವಿತೆಯ ಆಶಯದಂತೆ ಮತವೆಂಬ ಮೋಹದ ಜಾಲಕ್ಕೆ ಸಿಲುಕದೆ ಅವುಗಳ ಹೊಟ್ಟನ್ನು ತೂರಿ ಯಾವ ಸಂಕುಚಿತ ತತ್ವಗಳಿಗೂಅಂಟಿಕೊಳ್ಳದೆ,ನಿರ್ದಿಗಂತವಾಗಿ ಬೆಳೆದು ಎಲ್ಲಿಯೂ ನಿಲ್ಲದೆ, ನಿಜ ಜಂಗಮರಾಗಿ ಈ ಅನಂತ ಆಗಸದಲಿ ಬಯಲನೇ ಬಿತ್ತಿ ಬೆಳೆದು ಬಯಲಾದ ಅರಿವಿನ ನಿಜಬೆಳಕು ಅಲ್ಲಮಪ್ರಭುಗಳು
ಎಂದು ಅರಿವಿನ ಬೆಳಕಿನ ಪ್ರಭೆ ಯನ್ನು ಅತ್ಯಂತ ಪ್ರಬುದ್ಧವಾಗಿ ಹಂಚಿಕೊಂಡರು
ಅಲ್ಲಮ ಎಂದರೆ ಜ್ಞಾನ, ಅನುಭಾವ, ಅಲೆಮಾರಿ, ನಿಜ ಜಂಗಮ, ನ್ಯಾಯ ನಿಷ್ಠುರಿ, ಬಯಲು, ಶೂನ್ಯ, ಎಂದು ಹೇಳುತ್ತಾ, ಬಸವಾದಿ ಶರಣರನ್ನು ಬೆಳಗಿದ ಬಗೆ ಮತ್ತು ಆಧುನಿಕ ಜಗದ ಕತ್ತಲೆಯ ಅರಿವಿನ ಬೆಳಕು ಎನ್ನುವ ಬಹುರೂಪಿ ಅಲ್ಲಮಪ್ರಭುಗಳ ಅರಿವಿನ ಬೆಳಕಿನ ಎರಡು ಧಾರೆಗಳನ್ನು ಅವರು ಹಲವಾರು ವಚನಗಳ ಅರ್ಥಗಳ ಜೊತೆಗೆ

ನಮ್ಮ ಮುಂದಿಡುವ ಪ್ರಯತ್ನ ಮಾಡಿದರು.
ಸೊನ್ನಲಿಗೆಗೆ ಹೋಗಿ ಸಿದ್ದರಾಮೇಶ್ವರರಿಗೆ ಸನ್ಮಾರ್ಗ ತೋರಿ ಕಲ್ಯಾಣಕ್ಕೆ ಕರೆತಂದು ಶರಣ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗುವಂತೆ ಮಾಡಿದ್ದು, ಒಕ್ಕಲಿಗ ಗೊಗ್ಗಯ್ಯನವರನ್ನು ಸಂಧಿಸಿದ ಪ್ರಸಂಗದಲ್ಲಿ ಅವರಿಗೆ ಅಂತರ್ಮುಖಿಯಾಗಿ ಅಂತರಂಗದ ತೋಟದ ಕ್ರಮವನ್ನು ಹೇಗೆ ಬಿತ್ತನೆ ಮಾಡಬೇಕು ಎನ್ನುವುದನ್ನು ಕಲಿಸಿದ್ದು, ಅಜಗಣ್ಣನವರು ಲಿಂಗೈಕ್ಯರಾದಾಗ ಮುಕ್ತಾಯಕ್ಕನನ್ನು ಭೇಟಿಯಾಗಿ ಮನಸ್ಸಿನ ತಾಕಲಾಟಗಳನ್ನು ಪರಿಹರಿಸಿದ್ದು, ಸ್ಥಾವರದ ಲಿಂಗಕ್ಕಿಂತ ಜಂಗಮದ ಮಹತ್ವ ಹೆಚ್ಚೆಂದು ಬಸವಣ್ಣನವರಿಗೆ ಅರುಹಿದ್ದು, ಚನ್ನಬಸವಣ್ಣನವರಿಗೆ ಉನ್ನತ ಸಾಧನೆಯ ಮಾರ್ಗದರ್ಶನ ನೀಡಿ ಷಟಸ್ಥಲಜ್ಞಾನಿ ಮಾಡಿದ್ದು
ಕಿನ್ನರಿ ಬೊಮ್ಮಯ್ಯನ ಮೂಲಕ ಅಕ್ಕಮಹಾದೇವಿಗೆ ಕಠಿಣ ಪರೀಕ್ಷೆಗಳೊಂದಿಗೆ ಒರೆಗೆ ಹಚ್ಚಿದ್ದು,
ನಿಗೂಢವಾಗಿಯೇ ಉಳಿದು ದಾಸೋಹ ಸೇವೆ ಮಾಡುತ್ತಿದ್ದ ಮರುಳಶಂಕರ ದೇವರನ್ನು ಗುರುತಿಸಿ ಅವರು ಎಂತಹ ಭಕ್ತರು ಎಂದು ಪ್ರಕಟಿಸಿದ್ದ ವಿಷಯ ಹಂಚಿಕೊಳ್ಳುತ್ತಾ ಶೂನ್ಯ ಸಿಂಹಾಸನದ ಪೀಠಾಧಿಪತಿಯಾಗಿ ಎಲ್ಲ ಸಾಧಕರ ಮನೋಗತವನ್ನು ತಿಳಿದುಕೊಂಡು ಅದಕ್ಕೆ ತಕ್ಕ ಮಾರ್ಗದರ್ಶನ ಮಾಡಿದ ಅಲ್ಲಮಪ್ರಭುಗಳು ಎಂದಿಗೂ ಸಲ್ಲುವ ನಂದಾದೀಪ ಅವರ ಚಿಂತನೆಯ ಅರಿವಿನ ಬೆಳಕಿನ ಹರವು ಕಾಲದೇಶಾತೀತ ವಾದುದು ಎಂದು ಹೇಳುತ್ತಾ ತಮ್ಮ ಮಾತುಗಳಿಗೆ ವಿರಾಮ ಹೇಳಿದರು.
ಅಧ್ಯಕ್ಷರಾದ ಡಾ.ಶಶಿಕಾಂತ ಪಟ್ಟಣ ಅವರು ಅಲ್ಲಮಪ್ರಭುಗಳು ಜ್ಞಾನಿಯಾಗಿ, ಪ್ರಖರರಾಗಿ, ವೈಚಾರಿಕರಾಗಿ, ಕಾರಣಿಕರಾಗಿ, ದಾರ್ಶನಿಕರಾಗಿ,ಶೂನ್ಯ ಸಂಪಾದಕರಾಗಿ, ಇಡೀ ವಚನ ಸಂಕುಲಕ್ಕೆ ಹೊಸ ಮುನ್ನುಡಿ ಬರೆದರು ಎಂದು ಹೇಳುತ್ತಾ ಅವರ ಹಲವಾರು ಬೆಡಗಿನ ವಚನಗಳನ್ನು, ಪ್ರತಿಮೆಗಳನ್ನು ಉಲ್ಲೇಖಿಸುವುದರ ಮೂಲಕ ಇಂದಿನ ಅನುಭಾವಕ್ಕೆ ಕಳಶವಿಟ್ಟಂತೆ ತಮ್ಮ ಮಾತುಗಳನ್ನು ಪ್ರಸ್ತುತ ಪಡಿಸಿದರು.
ದತ್ತಿ ದಾಸೋಹಿಗಳಾದ ಪ್ರೊ ಶಾರದಮ್ಮ ಪಾಟೀಲ ಅವರು ಪ್ರತಿದಿನ ಸಂವಾದದಲ್ಲಿ ಭಾಗವಹಿಸಿ, ಆಯಾ ದಿನದ ವಿಷಯದ ಬಗೆಗೆ ತಮ್ಮ ಅದ್ಭುತವಾದ ಜ್ಞಾನ ಭoಡಾರ ವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾ ಬಂದಿದ್ದಾರೆ.
ಶರಣೆ ಜಯಶ್ರೀ ಆಲೂರ ಅವರ ಪ್ರಾರ್ಥನೆ, ಶರಣ ಗಂಗಾಧರ ಸಾಲಕ್ಕಿ ಅವರ ಸ್ವಾಗತ, ಶರಣೆ ಸ್ಮಿತಾ ಪಾವಟೆ ಅವರ ಶರಣು ಸಮರ್ಪಣೆ, ಡಾ. ಬಸಮ್ಮ ಗಂಗನಳ್ಳಿ ಅವರ ವಚನ ಮಂಗಳ ಮತ್ತು ಶರಣೆ ಪ್ರಭಾ ಹಿರೇಮಠ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಸುಂದರವಾಗಿ ಮೂಡಿಬಂದಿತು.

ಪ್ರೊ.ಶಾರದಾ ಪಾಟೀಲ (ಮೇಟಿ) ದತ್ತಿ ಉಪನ್ಯಾಸ
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಪ್ರೊ. ಶಾರದಾ ಪಾಟೀಲ ಮೇಟಿ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ- ೩೦೮
