ಲೇಖನ
– ಜಯಶ್ರೀ ಅಬ್ಬಿಗೇರಿ, ಬೆಳಗಾವಿ
ಸ ಪ ಪೂ ಕಾಲೇಜು
ಹಿರೇಬಾಗೇವಾಡಿ
ಜಿ: ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಅಯ್ಯೋ! ನಾನು ತಪ್ಪು ಮಾಡಿಬಿಟ್ಟೆ ಹೀಗೆ ಮಾಡಬಾರದಾಗಿತ್ತು, ನಾನು ಎಷ್ಟು ಮೂರ್ಖ, ಆಗ ಅದು ನನ್ನ ತಲೆಗೆ ಹೊಳಿಲೇ ಇಲ್ಲ ಎಂದು ನಾವೆಲ್ಲರೂ ಒಂದಿಲ್ಲೊಂದು ಸಂದರ್ಭದಲ್ಲಿ ನಮಗೆ ನಾವೇ ಹಳಿದುಕೊಳ್ಳುತ್ತೇವೆ. ತಪ್ಪು ಮಾಡೋದು ಮಾನವನ ಸಹಜ ಗುಣ. ನಾವೆಲ್ಲ ಸ್ಮರಿಸುವ ಗಾಂಧಿ ಅಬ್ರಾಹಿಂ ಲಿಂಕನ್‌ರಂಥ ಅನೇಕ ಮಹಾನ್ ಸಾಧಕರೂ ಸಹ ತಪ್ಪುಗಳನ್ನು ಮಾಡಿದವರೆ. ಹಾಗಾದರೆ ಅವರಿಗೂ ನಮಗೂ ವ್ಯತ್ಯಾಸವೇನು? ಅವರು ತಪ್ಪಿನಿಂದ ಪಾಠ ಕಲಿತು ಮಾಡಿದ ತಪ್ಪುಗಳನ್ನು ಮಾಡದೇ ಆದರ್ಶ ಮಾರ್ಗದಲ್ಲಿ ನಡೆದು ಇತರರಿಗೆ ಮಾದರಿಯಾದರು.
ನಾವು ನಮಗೆ ಗೊತ್ತಿರುವ ತಪ್ಪುಗಳನ್ನು ಪುನಃ ಪುನಃ ಮಾಡುತ್ತೇವೆ. ತಪ್ಪುಗಳನ್ನು ಒಪ್ಪಿಕೊಳ್ಳುವ ಜಾಯಮಾನವೂ ನಮ್ಮಲ್ಲಿಲ್ಲ. ನಾವು ಮಾಡಿದ್ದೇ ಸರಿ ಎಲ್ಲವೂ ನಮ್ಮ ಮೂಗಿನ ನೇರಕ್ಕೆ ನಡೆಯಬೇಕೆಂದು ಬಯಸುತ್ತೇವೆ. ನಾನು ತಪ್ಪು ಮಾಡೋಕೆ ಸಾಧ್ಯನೇ ಇಲ್ಲ ಎನ್ನುವ ಮನೋಭಾವದವರೇನೂ ಕಡಿಮೆ ಇಲ್ಲ. ತಪ್ಪು ಮಾಡುವದು ತಪ್ಪಲ್ಲ. ತಿಳಿದೂ ತಿಳಿದೂ ಅದೇ ತಪ್ಪನ್ನು ಮುಂದುವರೆಸುವದು ದೊಡ್ಡ ತಪ್ಪು.
ತಪ್ಪು ಎಂದರೇನು?
ನಮ್ಮ ಅಜ್ಞಾನದಿಂದ ಉಂಟಾಗುವ ಕ್ರಿಯೆ. ಅರಿವಿನ ಕೊರತೆಯಿಂದ ಸಂಭವಿಸುವಂತಹದು. ನಮಗೆ ಆ ಕ್ಷಣಕ್ಕೆ ಸರಿ ಎನಿಸಿದ್ದು. ಅರಿವಿನ ಮೂಸೆಯಲ್ಲಿ ಸರಿಯೆನಿಸಲಾರದ್ದು. ಘಟಿಸಿದ ಮೇಲೆ ತಿಳುವಳಿಕೆಗೆ ಬರುವಂತಹದು. ಎಂದು ನಾವು ಸಾಮಾನ್ಯವಾಗಿ ತಪ್ಪನ್ನು ಅರ್ಥೈಸುತ್ತೇವೆ.

ತಪ್ಪಿನ ಮೇಲೆ ನಮಗೆ ಅಧಿಕಾರ ಇದೆಯೆ?
ನಾವು ಮಾಡುವ ತಪ್ಪಿನ ಮೇಲೆ ಮೊದ ಮೊದಲು ನಮಗೆ ಅಧಿಕಾರವೇನೂ ಇರುವದಿಲ್ಲ. ಅವು ತಾವಾಗಿಯೇ ಘಟಿಸುತ್ತವೆ. ನಾವು ಮಾಡುವದು ತಪ್ಪು ಎಂದು ತಿಳಿದ ಮೇಲೂ ಮುಂದುವರೆಸುತ್ತೆವಲ್ಲ ಆಗ ತಪ್ಪುಗಳ ಮೇಲೆ ನಮ್ಮ ಅಧಿಕಾರ ಸ್ಥಾಪನೆಯಾಗುತ್ತದೆ. ಆ ಬಳಿಕ ತಪ್ಪುಗಳನ್ನು ಮಾಡುವದು ಬಿಡುವದು ನಮ್ಮ ಇಚ್ಛೆಗಳನ್ನು ಅವಲಂಬಿಸಿದೆ. ತಪ್ಪುಗಳ ಮೇಲೆ ಅಧಿಕಾರ ಸ್ಥಾಪಿಸಬೇಕೆಂದರೆ ಮಾಡಿದ ತಪ್ಪುಗಳನ್ನು ಮತ್ತೆಂದೂ ಮರಕಳಸದಂತೆ ಎಚ್ಚರವಹಿಸಬೇಕು. ಸಣ್ಣ ಮಕ್ಕಳಿದ್ದಾಗ ದಿನನಿತ್ಯ ಅನೇಕ ತಪ್ಪುಗಳನ್ನು ಮಾಡುವದನ್ನು ಕಾಣುತ್ತೇವೆ. ಕ್ರಮೇಣ ತಪ್ಪುಗಳ ಸಂಖ್ಯೆ ಕಡಿಮೆಯಾಗುತ್ತದೆ. ಅದಕ್ಕೆ ಕಾರಣ ಕಲಿಕೆ ಮತ್ತು ಅನುಭವ.
ತಪ್ಪು ಮಾಡುವಾಗ ಉಂಟಾಗುವ ಭಾವನೆ ಎಂಥದು?
ತಪ್ಪು ಮಾಡುವಾಗ ಅದರ ಬಗ್ಗೆ ತಿರಸ್ಕಾರ ಭಾವನೆ ಉಂಟಾಗುತ್ತದೆ. ಆ ಕಾರ‍್ಯವನ್ನು ಮಾಡದಂತೆ ತಡೆಯುತ್ತವೆ. ಗಂಟೆಗಟ್ಟಲೆ ಹಾಳು ಹರಟೆ ಹೊಡೆಯುವ ಮಲ್ಲರು ಸಭೆಯನ್ನುದ್ದೇಶಿಸಿ ಮಾತನಾಡೆಂದರೆ ಏನೇನೋ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಾರೆ. ಅವರಿಗೆ ಮಾತನಾಡುವ ವಿಷಯದ ಬಗ್ಗೆ ಜ್ಞಾನವಿಲ್ಲ ಅಂತಲ್ಲ. ಅವರು ಸಭಾ ಕಂಪನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಎಲ್ಲಿ ನಾನು ಮಾತುಗಳನ್ನು ಅರ್ಧಕ್ಕೆ ನಿಲ್ಲಿಸುತ್ತೆನೇನೋ, ಚೆನ್ನಾಗಿ ಮಾತನಾಡಲಾರನೆಂಬ ಭಯ ಅವರನ್ನು ಕಾಡುತ್ತಿರುತ್ತದೆ. ಒಂದು ವೇಳೆ ಸಭೆಯಲ್ಲಿ ಮಾತನಾಡಬೇಕೆಂದು ಹೋದರೂ ಮನದಲ್ಲಿಯ ಭಯ ಅವನ ಕೊರತೆಯ ಬಗ್ಗೆ ಜಾಗ್ರತೆ ವಹಿಸುತ್ತದೆ. ಅವನನ್ನು ಎಚ್ಚರಿಸುತ್ತದೆ. ಹೀಗಾಗಿ ಅವನು ಹೆಚ್ಚು ಸಭಾ ಕಂಪನಕ್ಕೆ ಒಳಗಾಗುತ್ತಾನೆ.

ಅಭ್ಯಾಸ ಬಲದಿಂದ ಉಂಟಾಗುವವೇ?
ಚಿಕ್ಕ ಮಕ್ಕಳಿದ್ದಾಗ ಬೆರಳು ಚೀಪುವದನ್ನು ಕಲಿತವರು ದೊಡ್ಡವರಾದರೂ ಅದನ್ನು ಬಿಡುವದಿಲ್ಲ. ಇದು ಅಭ್ಯಾಸ ಬಲವಲ್ಲವೆ? ಉಗುರು ಕಚ್ಚುವದು, ಮೂಗಿನಲ್ಲಿ ಬೆರಳು ಹಾಕುವದು, ಕಿವಿಯಲ್ಲಿ ಕಡ್ಡಿ ಹಾಕುವದು, ಮುಖಕ್ಕೆ ಮುಖ ಕೊಟ್ಟು ಮಾತನಾಡದಿರುವದು. ಇವೆಲ್ಲ ಸಣ್ಣ ವಿಷಯಗಳೆನಿಸಿದರೂ ಅವು ಬರ ಬರುತ್ತ ಕೆಟ್ಟ ಚಟಗಳಾಗಿ ಬಿಡುವವು.
ಇಂಥ ತಪ್ಪುಗಳನ್ನು ಬಿಡಬೇಕೆಂದರೆ ಕನ್ನಡಿಯ ಮುಂದೆ ಈ ಕ್ರಿಯೆಗಳನ್ನು ಜರುಗಿಸಿ. ಆಗ ನಿಮಗೆ ನಿಮ್ಮ ಮೇಲೆ ಅಸಹ್ಯವೆನಿಸುತ್ತದೆ. ಇದು ಆ ತಪ್ಪನ್ನು ಬಿಡಲು ಮನೋನಿರ್ಧಾರ ಮಾಡುವಂತೆ ಪ್ರೇರೆಪಿಸುತ್ತದೆ. ಕ್ರಮೇಣ ಇಂಥ ತಪ್ಪುಗಳನ್ನು ಬಿಡಲು ಸಾಧ್ಯವಾಗುವದು.
ಅವಸರ ತಪ್ಪು ಮಾಡಿಸುತ್ತದೆಯೆ?
ಅವಸರವೇ ಅಪಘಾತಕ್ಕೆ ಕಾರಣವೆಂಬ ಮಾತೊಂದಿದೆ. ಮಾಡುವ ಕೆಲಸದಲ್ಲಿ ಅತಿಯಾದ ಆತುರತೆಯನ್ನು ತೋರಿಸಿದಷ್ಟು ತಪ್ಪುಗಳಾಗುವ ಸಂಭವ ಹೆಚ್ಚು. ಹೀಗಾಗಿ ತಪ್ಪಿನಿಂದ ತಪ್ಪಿಸಿಕೊಳ್ಳಬೇಕೆಂದರೆ ಮೊದಲು ಆತುರತೆಯಿಂದ ತಪ್ಪಿಸಿಸಿಕೊಳ್ಳಬೇಕು.
ನಾವು ಆತುರತೆಯಿಂದ ಕೆಲಸದಲ್ಲಿ ತೊಡಗಿದಾಗ ನಮ್ಮ ಒಳ ಮನಸ್ಸು ತನ್ನ ಕೆಲಸ ಮಾಡಲು ಆರಂಭಿಸುತ್ತದೆ. ಅವಸರದ ಸ್ಥಿತಿಯಲ್ಲಿ ವೇಗವಾಗಿ ಕೆಲಸವನ್ನು ನಮ್ಮ ಮೆದುಳು ಕೆಲಸದ ಮೇಲೆ ಹೊರಿಸುತ್ತದೆ. ಆಗ ನಾವು ಮಾಡುತ್ತಿರುವ ಕೆಲಸ ಕರ‍್ಯಗಳು ಬೇಗನೆ ನಡೆಯುವ ಬದಲು ತಡವಾಗುತ್ತವೆ ಎಂಬುದನ್ನು ಮನೋವಿಜ್ಞಾನಿಗಳು ತಮ್ಮ ನಿರಂತರ ಸಂಶೋಧನೆಯಿಂದ ನಿಖರವಾಗಿ ಪತ್ಪೆ ಹಚ್ಚಿದ್ದಾರೆ. ಕೆಲಸದ ಮೇಲೆ ಅವಸರದ ಭಾರ ತಪ್ಪಿಸಿದರೆ ಮೆದುಳಿಗಾಗುವ ಅಧಿಕ ಕಾರ್ಯ ಭಾರವನ್ನು ತಪ್ಪಿಸಿ ನಿರ್ಧಿಷ್ಟ ತಪ್ಪಿನಿಂಧ ಮುಕ್ತರಾಗಬಹುದು.
ನಿರಾಸಕ್ತಿ ತಪ್ಪಿಗೆ ದಾರಿ ಮಾಡಿಕೊಡುತ್ತದೆಯೇ?
ಮಾಡುವ ಕೆಲಸದಲ್ಲಿ ಆಸಕ್ತಿಯಿಲ್ಲದಿದ್ದರೂ ಅದು ತಪ್ಪಿಗೆ ಎಡೆ ಮಾಡಿಕೊಡುತ್ತದೆ. ಕೆಲಸದ ಬಗ್ಗೆ ಸದಭಿರುಚಿಯನ್ನು ಬೆಳೆಸಿಕೊಂಡರೆ ಸರಿಯಾದ ಗಮನ ಹರಿಸಿದರೆ ನಿರಾಸಕ್ತಿಯಿಂದಾಗುವ ತಪ್ಪುಗಳಿಂದ ತಪ್ಪಿಸಿಕೊಳ್ಳಬಹುದು.
ಮೇಲಿಂದ ಮೇಲೆ ತಪ್ಪು ಮಾಡುತ್ತೇನೆ
ನಾನು ಮೇಲಿಂದ ಮೇಲೆ ಹೊಸ ತಪ್ಪು ಮಾಡುತ್ತೇನೆ ಎಂದು ಕೆಲವರು ಕೊರಗುತ್ತಾರೆ. ತಪ್ಪುಗಳನ್ನು ಮಾಡುತ್ತೇವೆ ಎಂದರೆ ಕೊರಗುವ ಅವಶ್ಯತೆಯಿಲ್ಲ. ಏಕೆಂದರೆ ಪ್ರಯತ್ನ ಮಡುವವರು ಮಾತ್ರ ತಪ್ಪುಗಳನ್ನು ಮಾಡುತ್ತಾರೆ. ನೀವು ಕ್ರೀಯಾಶೀಲರಾಗಿದ್ದೀರಿ ಎಂದರ್ಥ ಅದೇ ತಪ್ಪುಗಳು ಮರುಕಳಿಸದಂತೆ ನೋಡಿಕೊಂಡರೆ ಸಾಕು.
ನಾನು ಒಂದ್ ತಪ್ಪು ಮಾಡಿಲ್ಲ
ನಾನು ಒಂದ್ ತಪ್ಪು ಮಾಡಿಲ್ಲ ಎನ್ನುವವರು ತಮ್ಮ ಬಗ್ಗೆ ಯೋಚಿಸಲೇಬೇಕು. ಏಕೆಂದರೆ ಅವರು ಯಾವ ಹೊಸ ಕೆಲಸಗಳನ್ನು ಮಾಡಲು ಪ್ರಯತ್ನಿಸಿಲ್ಲ ಎಂದರ್ಥ. ನಡೆಯುವವನೇ ಎಡುವುತ್ತಾನೆ, ಕುಳಿತವನು ಎಡುವಲಾರ ಅಂತ ಹೇಳೋದೇ ಇದಕ್ಕೆ.
ಜೀವನದಲ್ಲಿ ಮುನ್ನುಗ್ಗಿ ಸಾಗುವ ಭರದಲ್ಲಿ ಹಿಂದೆ ನಡೆದು ಬಂದ ದಾರಿಯನ್ನು ಸಿಂಹದಂತೆ ತಿರುಗಿ ತಿರುಗಿ ನೋಡಿದವರೆ ಹೆಚ್ಚು ಸಾಧಕರಾಗಿ ಹೊರಹೊಮ್ಮಿದ್ದಾರೆ. ಹಿಂದೆ ಮಾಡಿದ ತಪ್ಪುಗಳು ಯಾವವು? ಅವುಗಳಿಗೆ ಕಾರಣವೇನು? ಎಂಬುದನ್ನು ಪರಾಮರ್ಶಿಸಿ, ಮುಂದೆ ಅಂಥ ತಪ್ಪುಗಳನ್ನು ಮಾಡದಂತೆ ಎಚ್ಚರವಹಿಸಿ, ದೂರದೃಷ್ಟಿಯಿಂದ ನಮ್ಮ ಜೀವನದಲ್ಲಿ ಬರುವಂತಹ ಸಮಸ್ಯೆಗಳನ್ನು ಮೊದಲೇ ಊಹಿಸಿ, ಅವುಗಳಿಗೆ ಪರಿಹಾರ ಕಂಡುಕೊಂಡೇ ಮುಂದೆ ಸಾಗುವ ಜಾಣ್ಮೆ ನಮ್ಮಲ್ಲಿ ಬೆಳೆಯುತ್ತದೆ.
ತಪ್ಪು ಮಾಡೋದು ಸಹಜ ತಿದ್ದಿ ನಡೆಯೋನೇ ಮನುಜ ಅಂತ ಹಿರಿಯರು ಸರಿಯಾಗಿಯೇ ಹೇಳಿದಾರೆ ಅಲ್ಲವೆ..?
