ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
ಶರಣ ಮಾಸದ ನಾಲ್ಕನೆಯ ದಿವಸದ ಅನುಭಾವ ಮಾಲಿಕೆಯಲ್ಲಿ ಡಾ. ಪ್ರಿಯದರ್ಶನಿ ಉಗಲವಾಟ, ಸ್ತ್ರೀರೋಗ ತಜ್ಞರು, ಶ್ರೀ ವೆಂಕಟೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಾದಾಮಿ ಇವರು ಜುಲೈ 1 ನೆಯ ತಾರೀಕು ವೈದ್ಯರ ದಿನಾಚರಣೆ ಮತ್ತು ಬಿ.ಸಿ ರಾಯ್ ಅವರ ಜನ್ಮದಿನ ಮತ್ತು ಖ್ಯಾತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರನ್ನೂ ಸಹ ನೆನಪು ಮಾಡಿಕೊಳ್ಳುತ್ತಾ, ವೈದ್ಯರ ಪ್ರಾಮುಖ್ಯತೆಯೊಂದಿಗೆ ವೈದ್ಯ ಸಂಗಣ್ಣನವರ ಅನುಭಾವ ಮಾಲಿಕೆಯನ್ನು ಪ್ರಾರಂಭ ಮಾಡಿದರು.
12 ನೆಯ ಶತಮಾನದ ವೈದ್ಯ ಸಂಗಣ್ಣನವರದು ವೈದ್ಯವೃತ್ತಿ. ಇವರ ಅಂಕಿತನಾಮ ಮರುಳ ಶಂಕರ ಪ್ರಿಯ ಸಿದ್ದರಾಮೇಶ್ವರ. ಇವರ 20 ವಚನಗಳು ಲಭ್ಯವಾಗಿವೆ. ಇವರ ವಚನಗಳಲ್ಲಿ ವೈದ್ಯ ವೃತ್ತಿಯ ಪರಿಭಾಷೆಯ ತತ್ವ, ನಾಡಿಗಳ ವಿವರ, ವ್ಯಾಧಿಗಳ ಬಗೆ, ಔಷಧಿಗಳ ಪ್ರಕಾರ ಎಲ್ಲವೂ ಲಭ್ಯವಾಗುತ್ತವೆ. ಇವೆಲ್ಲವೂ ಇವರ ವೈದ್ಯಶಾಸ್ತ್ರ ಪರಿಣಿತಿಯನ್ನು , ಅವುಗಳಿಗೆ ಇವರು ಜೋಡಿಸುವ ತಾತ್ವಿಕ ಪರಿವೇಶವನ್ನು ಏಕಕಾಲಕ್ಕೆ ಪ್ರಕಟಿಸುತ್ತವೆ. ವೈದ್ಯವೃತ್ತಿ
ಯನ್ನು ತಮ್ಮ ಕಾಯಕವನ್ನಾಗಿ ಸ್ವೀಕರಿಸಿದ ವೈದ್ಯ ಸಂಗಣ್ಣನವರು ಅನುಭವ ಮಂಟಪದ 770 ಅಮರ ಗಣಗಳ ಪೈಕಿ ಶರಣ ವಚನಕಾರರು. ವಚನಗಳೆಲ್ಲವೂ ಹೆಚ್ಚಾಗಿ ವೈದ್ಯವೃತ್ತಿಯ ಪರಿಭಾಷೆಯಲ್ಲಿ ಲಿಂಗ ತತ್ವವನ್ನು ಅತಿ ಹೆಚ್ಚು ಭೋಧಿಸುತ್ತವೆ. ಶಿವಯೋಗ ಮತ್ತು ಷಟ್ ಸ್ಥಲದ ವಿವರಣೆಯೂ ಸಹ ವಚನಗಳಲ್ಲಿ ಸ್ಥಾನ ಗಳಿಸಿವೆ. ಶರೀರದ ಕಾಯಿಲೆಗಳ ಉಪಶಮನಕ್ಕೆ ಬಹಿರಂಗದ ಜೊತೆಗೆ ಅಂತರಂಗದ ಚಿಕಿತ್ಸೆ ನಡೆಸಬೇಕೆಂಬುದು ಅವರ ವಚನಗಳ ಆಶಯ. ಸಿದ್ದಯ್ಯ ಪುರಾಣಿಕ ಅವರು ವೈದ್ಯ ಸಂಗಣ್ಣನವರನ್ನು ಕುರಿತು, “ಮೈ ಮನಕ್ಕೆ ಮದ್ದನಿಟ್ಟ ವೈದ್ಯ ” ಎಂದು ವರ್ಣಿಸಿದ್ದಾರೆ. ಶರೀರವನ್ನೇ ಲಕ್ಷ್ಯವನ್ನಾಗಿ ಇರಿಸಿಕೊಂಡು ವೈದ್ಯಶಾಸ್ತ್ರಕ್ಕೂ ಆತ್ಮಕ್ಕೂ ಸಂಬಂಧ ಹಚ್ಚಿದ ಸಂಗಣ್ಣನವರ ರೀತಿ ಅಚ್ಚರಿಯನ್ನುಂಟು ಮಾಡುತ್ತದೆ
ನನ್ನವರು ಮಿತ ಭಾಷಿ. ತಮ್ಮ ಪಾಲಿನ ಕಾಯಕವನ್ನು ಶುದ್ಧ ಮನಸ್ಸಿನಿoದ ಮಾಡಿ ಆತ್ಮೋ ನ್ನತಿ ಮಾಡಿದ ಶರಣರು ಇವರು. ವೈದ್ಯಶಾಸ್ತ್ರ ಮತ್ತು ಶರೀರ ಶಾಸ್ತ್ರ ಎರಡನ್ನೂ ಇವರು ಅರಿತವರಾಗಿದ್ದರು ಎನ್ನುವದನ್ನು ವಿವರವಾಗಿ ತಿಳಿಸುತ್ತಾ,ಮಧ್ಯದಲ್ಲಿ ವೈದ್ಯ ಸಂಗಣ್ಣನವರ ವಚನಗಳ ಅನುಸಂಧಾನ ಮಾಡುವುದರೊಂದಿಗೆ ಮತ್ತು ಈಗಿನ ವೈದ್ಯರೂ ಸಹ ಈ ನಿಟ್ಟಿನಲ್ಲಿ ಮುತುವರ್ಜಿಯಿಂದ ಅತ್ಯಂತ ಸಮರ್ಪಕವಾಗಿ ದೇಹದ ಜೊತೆಗೆ ಮನಸ್ಸಿಗೂ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅಭಿಮಾನದಿಂದ ತಮ್ಮ ಅನುಭಾವದಲ್ಲಿ ಹಂಚಿಕೊಂಡರು.
ಇಂಥ ಕಾಯಕವನ್ನು 12ನೇ ಶತಮಾನದಲ್ಲಿ ವೈದ್ಯ ಸಂಗಣ್ಣನವರು ವೈದ್ಯಕೀಯ ಕಾಯಕ ದೀಕ್ಷೆ ಕೈಗೊಂಡು ಸಿದ್ದಿ ಸಾಧನೆಗಳನ್ನು ಮಾಡಿದ್ದು, ಇಂದಿನ ಮಾನವ ಜನಾಂಗಕ್ಕೆ ಆದರ್ಶನೀಯ ಮತ್ತು ಅನುಕರಣೀಯ ಎಂದರೆ ಉತ್ಪ್ರೇಕ್ಷೆಯಾಗಲಾರದು ಎಂದು
ಹೆಮ್ಮೆಯಿಂದ ಹೇಳಿದರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ವೈದ್ಯ ಸಂಗಣ್ಣನವರು ಒಬ್ಬ ವೈದ್ಯನಾಗಿ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಚಿಂತನೆಯಲ್ಲಿ ಜಂಗಮನಾಡಿಯ ಮೇಲೆ ಒತ್ತು ಕೊಟ್ಟು ವಚನ ರಚನೆ ಮಾಡಿದ ಶರಣರು ಎಂದು ಹೇಳುತ್ತಾ, ಲಿಂಗ ಪೂಜೆ ಜೊತೆಗೆ ನಗೆಯ ಥೆರಪಿ,ಯೋಗ, ಧ್ಯಾನ, ಬೆಳಗಿನ ವಾಯು ವಿಹಾರ, ವ್ಯಾಯಾಮ, ಎಲ್ಲವೂ ಈಗಿನ ಕಾಲದಲ್ಲಿ ಅವಶ್ಯಕ ಎನ್ನುವುದನ್ನು ಹೇಳಿ ಡಾ. ಪ್ರಿಯದರ್ಶಿನಿ ಅವರು ಅತ್ಯುತ್ತಮವಾಗಿ ವಿಷಯ ಮಂಡನೆ ಮಾಡಿದ್ದಾರೆ ಎಂದು ತಿಳಿಸಿದರು.
ದತ್ತಿ ದಾಸೋಹಿಗಳಾದ ಪ್ರೊ. ಶಾರದಮ್ಮ ಪಾಟೀಲ ಅವರು ತಾವು ಓದಿದ ಇಂಗ್ಲಿಷ್ ಪುಸ್ತಕದ ವೈದ್ಯರ ಸ್ವಗತವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾ ವೈದ್ಯರೂ ಸಹ ಯೋಧರ ಸಮಾನರು.ಅವರು ನಿಜವಾದ ರೀತಿಯಲ್ಲಿ ರಾಕ್ ಸ್ಟಾರ್ಸ್, ಅವರಿಗೆ ಸೂಪರ್ ಪವರ್ ಇರುತ್ತದೆ ಎನ್ನುವುದನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ಬಿಂಬಿಸಿದರು.
ಡಾ. ಮೃತ್ಯುಂಜಯ ಶೆಟ್ಟರ್ ಅವರ ಪ್ರಾರ್ಥನೆ, ಶರಣೆ ಪ್ರೇಮಕ್ಕ ಹೊರಟ್ಟಿ ಅವರ ವಚನ ಮಂಗಳ ಮತ್ತು ಡಾ. ಶಶಿಕಾಂತ್ ಪಟ್ಟಣ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು.

ಪ್ರೊ.ಶಾರದಾ ಪಾಟೀಲ್ (ಮೇಟಿ) ದತ್ತಿ ಉಪನ್ಯಾಸ
ವಚನ ಅಧ್ಯಯನ ವೇದಿಕೆಯ ಗೂಗಲ್ ಮೀಟ್ ಶರಣ ಚಿಂತನ ಮಾಲಿಕೆ- 290 ಶರಣೆ ಪ್ರೊ. ಶಾರದಾ ಪಾಟೀಲ್ ಮೇಟಿ ಬಾದಾಮಿ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ