ಉದಯರಶ್ಮಿ ದಿನಪತ್ರಿಕೆ
ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರು
ಮುಖ್ಯಮಂತ್ರಿಗಳು
ಸನ್ಮಾನ್ಯರೇ,
ಬಸವಣ್ಣ ಸಾಂಸ್ಕೃತಿಕ ನಾಯಕನೆಂದು ತಮ್ಮ ಸರಕಾರ ಘೋಷಿಸಿ ಈಗ ಒಂದು ವರ್ಷವಾಗುತ್ತಾ ಬಂತು. ಈ ಸಂದರ್ಭದಲ್ಲಿ ಸಮಾಜವಾದಿ ಮತ್ತು ಬಸವಾಯತರಾದ ತಮಗೆ ಅನಂತ ಭಕ್ತಿ ಪೂರ್ವಕ ಶರಣಾರ್ಥಿಗಳು.
ಹನ್ನೆರಡನೆಯ ಶತಮಾನದ ಸಮಗ್ರ ಪರಿಪೂರ್ಣ ಕ್ರಾಂತಿಯನ್ನು ಇಂದು ಇಡೀ ಜಗತ್ತೇ ಮಾದರಿ ಎಂದು ಕೊಂಡಾಡುತ್ತಿದೆ. ಆ ನಿಟ್ಟಿನಲ್ಲಿ ಬಸವಣ್ಣನವರ ವಚನ ಸಾಹಿತ್ಯ ಪ್ರಸಾರ ಶರಣರ ಸ್ಮಾರಕಗಳ ಸಂರಕ್ಷಣೆ, ಬೇರೆ ಬೇರೆ ವಿಶ್ವ ವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆ, ವಚನಸಾಹಿತ್ಯ ಪರಿಷ್ಕರಣೆ ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಸರಕಾರವು ಗಮನಕೊಟ್ಟು ವೈಚಾರಿಕ ಪುರುಷ ಸಮಾಜವಾದಿ ಬಸವಣ್ಣನವರ ತತ್ವಗಳನ್ನು ಇಂದು ಜಗತ್ತಿನ ಎಲ್ಲ ರಾಷ್ಟಗಳಿಗೆ ತಲುಪಿಸಬೇಕಾದದ್ದು ತಮ್ಮ ಆದ್ಯ ಕರ್ತವ್ಯ ಮತ್ತು ಹೆಮ್ಮೆಯ ವಿಷಯವಾಗಿದೆ.
1 ) ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯಕ್ಕೆ ಇಲ್ಲಿಯವರೆಗೂ ಬಸವೇಶ್ವರ ವಿಶ್ವ ವಿದ್ಯಾಲಯವೆಂದು ನಾಮಕರಣ ಮಾಡಿಲ್ಲ. ಕಾರಣ ಜಮಖಂಡಿಯಲ್ಲಿರುವ ಬಾಗಲಕೋಟೆ ವಿಶ್ವ ವಿದ್ಯಾಲಯಕ್ಕೆ ಜಗಜ್ಯೋತಿ ಶ್ರೀ ಬಸವೇಶ್ವರ ವಿಶ್ವ ವಿದ್ಯಾಲಯವೆಂದು ನಾಮಕರಣ ಮಾಡಲು ಕಳಕಳಿಯ ವಿನಂತಿ.
2 ) ಬಸವಣ್ಣನವರ ಜನ್ಮ ಸ್ಥಳವಾದ ವಿಜಯಪುರ ಜಿಲ್ಲೆಯಲ್ಲಿ ಇರುವ ಏಕಮೇವ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪಿಸಿ ಸಾಕಷ್ಟು ಅನುದಾನ ನೀಡಿ ವಚನ ಸಾಹಿತ್ಯ ಸಂಶೋಧನೆಗೆ ಅನುವು ಮಾಡಿಕೊಡಬೇಕು.
3 ) ಜಗತ್ತಿನ ಬಹು ದೊಡ್ಡ ದಾರ್ಶನಿಕ ಸಮಾಜ ಸುಧಾರಕ ಲಿಂಗಾಯತ ಧರ್ಮದ ಸಂಸ್ಥಾಪಕ ಜಗಜ್ಯೋತಿ ಬಸವಣ್ಣನವರು ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದ್ದರೂ ಸಹಿತ ವಿಜಯಪುರ ಜಿಲ್ಲೆಯ ಬಹುತೇಕ ಶರಣರ ಸ್ಮಾರಕಗಳು ನಿರ್ಲಕ್ಷಕ್ಕೆ ಒಳಪಟ್ಟಿವೆ. ಅವುಗಳ ರಕ್ಷಣೆಗೆ ಸರಕಾರ ಮುಂದಾಗಬೇಕು, ಶರಣರ ಸ್ಮಾರಕಗಳ ಮುಂದೆ ಕರ್ನಾಟಕದ ಪುರಾತತ್ವ ಇಲಾಖೆ ಸಂಸ್ಥೆಯಿಂದ ಶರಣರ ಹೆಸರು ಒಟ್ಟು ವಚನಗಳು ಮತ್ತು ಜೀವನದ ಸಂಕ್ಷಿಪ್ತ ವಿವರವುಳ್ಳ ಫಲಕವನ್ನು ನಿಲ್ಲಿಸಬೇಕು. ಇದಕ್ಕಾಗಿ ಶರಣರ ಸ್ಮಾರಕಗಳ ಪ್ರಾಧಿಕಾರವನ್ನು ನಿರ್ಮಿಸಬೇಕು.
4 ) ಕರ್ನಾಟಕದ ಮೊದಲ ಕವಯಿತ್ರಿ ದಿಟ್ಟ ಶರಣೆ ಅಕ್ಕಮಹಾದೇವಿ ಶರಣ ಸಂಕುಲದ ಶ್ರೇಷ್ಠ ಅನುಭಾವಿಯಾಗಿದ್ದು ಅವಳು ಅರೆಬೆತ್ತಲೆಯಾಗಿ ಬಂದಿಲ್ಲ ಎನ್ನುವುದಕ್ಕೆ ಹಲವು ಉಲ್ಲೇಖ ಹಾಗು ಪುರಾವೆಗಳಿದ್ದು ಅಕ್ಕ ಮಹಾದೇವಿಯನ್ನು ಹೀಗೆ ಅರಬೆತ್ತಲೆಯಾಗಿ ಚಿತ್ರಿಸಿ ಇಡೀ ಮಾನವ ಕುಲಕ್ಕೆ ನಾಗರಿಕ ಸಮಾಜವು ತಲೆ ತಗ್ಗಿಸುವಂತೆ ಆಗಿದೆ. ಇದು ಶರಣರಿಗೆ ಮತ್ತು ವೀರ ವಿರಾಗಿಣಿ ಅಕ್ಕ ಮಹಾದೇವಿಗೆ ಮಾಡಿದ ದ್ರೋಹ ಮತ್ತು ಅಪಮಾನವಾಗಿದ್ದು ಕರ್ನಾಟಕದ ಏಕಮೇವ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಕ್ಕಮಹಾದೇವಿಯವರ ಅರೆಬೆತ್ತಲೆ ಪುತ್ಥಳಿಯನ್ನು ಈ ಕೂಡಲೇ ತೆರುವುಗೊಳಿಸಿ ಆ ಸ್ಥಳದಲ್ಲಿ ಶುಭ್ರ ವಸ್ತ್ರದ ಸೀರೆಯುಟ್ಟ ಅಕ್ಕಮಹಾದೇವಿ ಪುತ್ಥಳಿಯನ್ನು ನಿಲ್ಲಿಸಲು ಒತ್ತಾಯಿಸುತ್ತೇವೆ. ಅಲ್ಲದೆ ಸರಕಾರಿ ಮತ್ತು ಅರೆಸರಕಾರಿ ಸಂಸ್ಥೆ ಖಾಸಗಿ ಸಂಸ್ಥೆ ಮಠಗಳಲ್ಲಿ ಅರೆ ಬೆತ್ತಲೆಯ ಅಕ್ಕ ಮಹಾದೇವಿಯ ಪುತ್ತಳಿ ಮತ್ತು ಚಿತ್ರಣವನ್ನು ಕಡ್ಡಾಯವಾಗಿ ನಿಷೇಧಿಸಿ ಆದೇಶ ಹೊರಡಿಸಬೇಕು.
5 ) ವಿಜಯಪುರದ ಕೇಂದ್ರ ಬಸ್ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ಬಸ್ ನಿಲ್ದಾಣವೆಂದು ನಾಮಕರಣ ಮಾಡಬೇಕು. ನಗರದ ಪ್ರಮುಖ ಬೀದಿಗಳಿಗೆ ಬಡಾವಣೆಗಳಿಗೆ ಮತ್ತು ಸರ್ಕಲ್ ಗಳಿಗೆ ವಿಜಯಪುರ ಜಿಲ್ಲೆಯ ಶರಣರಾದ ಹಡಪದ ಅಪ್ಪಣ್ಣ, ಅಕ್ಕ ನಾಗಮ್ಮ, ನುಲಿಯ ಚಂದಯ್ಯ, ಹಾವಿನಾಳ ಕಲ್ಲಯ್ಯ, ಚೆನ್ನ ಬಸವಣ್ಣ, ಮಡಿವಾಳ ಮಾಚಿದೇವ, ಕುರುಬ ಗೊಲ್ಲಾಳ, ಹಡಪದ ಲಿಂಗಮ್ಮ, ಬಾಹೂರು ಬೊಮ್ಮಯ್ಯ ಮುಂತಾದ ಶರಣರ ಹೆಸರನ್ನು ಇಡಬೇಕು.
6 ) ತಮ್ಮ ಸರಕಾರವೇ ನೇಮಿಸಿದ ನ್ಯಾಯಮೂರ್ತಿ ನಾಗಮೋಹನದಾಸ ವರದಿಯಾಧಾರಿತ ತಮ್ಮ ಹಿಂದಿನ ಸರಕಾರದ ಶಿಫಾರಸ್ಸನ್ನು ಸದೃಢಗೊಳಿಸಿ ಲಿಂಗಾಯತ ಧರ್ಮಿಯರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಲು ಮತ್ತೆ ಕೇಂದ್ರ ಸರಕಾರಕ್ಕೆ ಮರು ಮೇಲ್ಮನವಿಯನ್ನು ಸಲ್ಲಿಸಿ ಬಸವಣ್ಣನವರಿಗೆ ಲಿಂಗಾಯತರಿಗೆ ನ್ಯಾಯ ಒದಗಿಸಬೇಕೆಂದು ಈ ಮೂಲಕ ಒತ್ತಾಯದ ಆಗ್ರಹದ ಮನವಿಯನ್ನು ಮಾಡಿಕೊಳ್ಳುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಲಿಂಗಾಯತರನ್ನು 2 ಡಿ ( D ) ಅಲ್ಪ ಸಂಖ್ಯಾತ ಸ್ಥಾನಮಾನದ ಮಾನ್ಯತೆ ನೀಡಲು ಕಾನೂನಿನಲ್ಲಿ ಅವಕಾಶವಿದ್ದು ಈ ಕೂಡಲೇ ಕರ್ನಾಟಕ ರಾಜ್ಯದಲ್ಲಿ ಲಿಂಗಾಯತ ಧರ್ಮಿಯರನ್ನು ಅಲ್ಪ ಸಂಖ್ಯಾತ ಎಂದು ಪರಿಗಣಿಸಿ ಆದೇಶ ಹೊರಡಿಸಲು ಮನವಿಯನ್ನು ಸಲ್ಲಿಸುತ್ತೇವೆ.
7 ) ವಚನ ಸಾಹಿತ್ಯವು ಹದಿನೈದನೆಯ ಶತಮಾನದ ನಂತರ ಪ್ರಕ್ಷಿಪ್ತವಾಗಿ ಹಲವು ವೇದ ಆಗಮ ಶಾಸ್ತ್ರಗಳ ಸಂಸ್ಕೃತ ಉಕ್ತಿಗಳು ಸೇರ್ಪಡೆಗೊಂಡು ಮೂಲ ಶರಣರ ಆಶಯಗಳಿಗೆ ಕೊಡಲಿ ಏಟು ಕೊಡುವ ಒಳತಂತ್ರವು ಕಂಡು ಬಂದಿದೆ. ಹೀಗಾಗಿ ವಚನ ಸಾಹಿತ್ಯ ಪರಿಷ್ಕರಣೆ ಶುದ್ಧೀಕರಣಕ್ಕಾಗಿ ವಚನ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿ ತನ್ಮೂಲಕ ವಚನಗಳ ಪರಿಷ್ಕರಣೆ ವಚನೇತರ ಸಾಹಿತ್ಯ ಪ್ರಕಟಣೆ ಮತ್ತು ಸ್ವರ ವಚನಗಳ ಸಂಶೋಧನೆಗೆ ಬಸವೋತ್ತರ ಕಾಲದ ಶರಣ ಸಾಹಿತ್ಯದ ಅಧ್ಯಯನಕ್ಕಾಗಿ ಅನುವು ಮಾಡಿಕೊಡಲು ಕಳಕಳಿಯ ಪ್ರಾರ್ಥನೆ.
8 ) ವಚನ ಪಿತಾಮಹ ಡಾ ಫ ಗು ಹಳಕಟ್ಟಿಯವರ ಹೆಸರಿನಲ್ಲಿ -ಕನ್ನಡ ವಚನ ಸಾಹಿತ್ಯದಲ್ಲಿ ದುಡಿಯುವ ಅಪ್ರತಿಮ ಸಂಶೋಧಕರಿಗೆ -ಒಂದು ಲಕ್ಷ ಹಣದ ಮೊತ್ತದ ರಾಷ್ಟ್ರೀಯ ಪುರಸ್ಕಾರವನ್ನು ಇಡಬೇಕು.
9 ) ಬಹುತೇಕ ಶರಣರ ಜಿಲ್ಲೆಯಾದ ವಿಜಯಪುರ ಜಿಲ್ಲೆಯನ್ನು ಬಸವೇಶ್ವರ ಜಿಲ್ಲೆಯೆಂದು ಮರು ನಾಮಕರಣ ಮಾಡಬೇಕು.
10 ) ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಏ ಐ ಸಿ ಟಿ ಈ ಸಂಸ್ಥೆಯು ದೇಶದ ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿ ಮಹಾತ್ಮ ಬಸವೇಶ್ವರ ಇವರ ಜೀವನ ಚರಿತ್ರೆ ಬಗ್ಗೆ ಸಂಶೋಧನೆ ಮಾಡಲು ಆದೇಶ ಹೊರಡಿಸಿದೆ. ಆದರೆ ಕರ್ನಾಟಕದ ಬಹುತೇಕ ವಿಶ್ವ ವಿದ್ಯಾಲಯಗಳಲ್ಲಿ ಬಸವ ಅಧ್ಯಯನ ಪೀಠಗಳಿಲ್ಲ, ಇದ್ದ ಪೀಠಗಳಿಗೆ ಸಾಕಷ್ಟು ಅನುದಾನವಿಲ್ಲ, ಕೇಂದ್ರ ಸರಕಾರದ ಮಾದರಿಯಂತೆ ತಮ್ಮ ಸರಕಾರವು ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಶರಣರ ಜೀವನ ಚರಿತ್ರೆ ವಚನ ಸಾಹಿತ್ಯದ ಸಂಶೋಧನೆಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ನಾಡಿನ ಎಲ್ಲ ಸರಕಾರಿ ವಿಶ್ವ ವಿದ್ಯಾಲಯಗಳಲ್ಲಿ ಬಸವ ಅಧ್ಯಯನ ಪೀಠ ಸ್ಥಾಪಿಸ ಬೇಕು.
10 ) ನೆರೆಯ ಮಹಾರಾಷ್ಟ್ರ ಸರಕಾರದ ಶ್ರೀ ಜಗಜ್ಯೋತಿ ಬಸವೇಶ್ವರ ಆರ್ಥಿಕ ಮಹಾಮಂಡಳವು ಪ್ರತಿ ವರ್ಷ ಒಂದೊಂದು ವಿಶ್ವ ವಿದ್ಯಾಲಯಕ್ಕೆ ಬಸವ ಅಧ್ಯಯನ ಪೀಠಕ್ಕೆ ರೂಪಾಯಿ ಮೂರು ಕೋಟಿ ಹಣವನ್ನು ಕೊಟ್ಟು ಶರಣ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುತ್ತಿದೆ. ಅದೇ ರೀತಿಯಲ್ಲಿ ಕರ್ನಾಟಕ ಸರಕಾರವು ವಚನ ಸಾಹಿತ್ಯಕ್ಕೆ ಸಂಶೋಧನೆಗೆ ಪ್ರೋತ್ಸಾಹ ನೀಡಬೇಕು.
11) ಜಾತಿಗಣತಿಯಲ್ಲಿ ಮುಸ್ಲಿಂ ಕ್ರೈಸ್ತ ಜೈನ ಬುದ್ಧ ಧರ್ಮಿಯರಂತೆ ಲಿಂಗಾಯತರಿಗೂ ಧಾರ್ಮಿಕ ಮಾನ್ಯತೆ ನೀಡಿ ಉಳಿದ ಒಳ ಪಂಗಡಗಳಿಗೆ ಅವಕಾಶ ಮಾಡಿಕೊಡಬೇಕು.
ತಮ್ಮ ಶರಣ ತತ್ವದ ನಂಬಿಕೆ ಮತ್ತು ಬಸವ ಪ್ರೀತಿಗೆ ನಾವೆಲ್ಲಾ ಚಿರಋಣಿಗಳು. ನಮ್ಮ ಮೇಲಿನ ಎಲ್ಲಾ ಬೇಡಿಕೆಗಳು ನ್ಯಾಯ ಸಮ್ಮತ ಮತ್ತು ಕಾನೂನು ಸಮ್ಮತವಾಗಿವೆ. ಒಂದು ವೇಳೆ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮೀನಮೇಷ ಮಾಡಿದರೆ ಉಗ್ರವಾದ ಹೋರಾಟ ಅನಿವಾರ್ಯವೆಂದು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇವೆ.
ಶರಣಾರ್ಥಿ
ತಮ್ಮ ವಿಶ್ವಾಸಿಕರು
ಡಾ.ಶಶಿಕಾಂತ ಪಟ್ಟಣ
ಅಧ್ಯಕ್ಷರು, ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ
ಪದಾಧಿಕಾರಿಗಳು, ಆಜೀವ ಸದಸ್ಯರು
ಡಾ.ಜಯಶ್ರೀ ಪಟ್ಟಣ
ಸಮಸ್ತ ಲಿಂಗಾಯತ ವೆಲ್ ಫೇರ್ ಟ್ರಸ್ಟ್ ಪದಾಧಿಕಾರಿಗಳು ಪುಣೆ