ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ಮಕ್ಕಳೇ ಇಂದಿನ ನಾಯಕರು.
ಮಕ್ಕಳು ಸಹ ದೇಶದ ಪ್ರಜೆಗಳಾಗಿರುವುದರಿಂದ ಶಾಲಾ ಕಲಿಕೆಯ ಜತೆಗೆ ಮಕ್ಕಳ ಸಂಸತ್ತಿನ ಮೂಲಕ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿ, ದೇಶಕ್ಕೆ
ಉತ್ತಮ ನಾಗರಿಕರನ್ನು ಕಾಣಿಕೆಯಾಗಿ ನೀಡಲು ಸಾಧ್ಯ ಎಂದು ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಹೇಳಿದರು.
ಶುಕ್ರವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ‘ಮಕ್ಕಳ ಶಾಲಾ ಸಂಸತ್ತು-ಪ್ರತಿಜ್ಞಾ ವಿಧಿ ಬೋಧನೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸಂಸತ್-ಮಕ್ಕಳ ಪ್ರಾತಿನಿಧಿಕ ರಚನೆಯಾಗಿದ್ದು, ಶಾಲಾ ಸಿಬ್ಬಂದಿ ಜೊತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನು ಪಾಲುದಾರರನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಮಕ್ಕಳಲ್ಲಿ ರಾಷ್ಟ್ರೀಯ ಮೌಲ್ಯ ಬೆಳೆಸಲು ಇಂತಹ ಚಟುವಟಿಕೆಗಳು ಅಗತ್ಯವಾಗಿವೆ ಎಂದು ಹೇಳಿದರು.
ಮುಖ್ಯ ಅತಿಥಿ ಸಂತೋಷ ಬಂಡೆ ಮಾತನಾಡಿ, ಮಕ್ಕಳ ಸಂಸತ್ತಿನಿಂದ ಶಾಲಾ ದಾಖಲಾತಿ ಮತ್ತು ಹಾಜರಾತಿಯಲ್ಲಿ ಸುಧಾರಣೆ ಮಾಡಿ, ಶಾಲೆಯಲ್ಲಿ ಶಿಸ್ತಿನ ಪರಿಸರ ನಿರ್ಮಾಣ ಮಾಡಲು ಸಾಧ್ಯ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಶಾಲಾ ಶಿಕ್ಷಕರೇ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದು ವಿಶೇಷವಾಗಿತ್ತು. ಮಕ್ಕಳು ಸಾಲಾಗಿ ಆಧಾರ ಕಾರ್ಡ್ ತೋರಿಸಿ, ಕೈಗೆ ಇಂಕ್ ಹಚ್ಚಿಕೊಂಡು ವಿದ್ಯುನ್ಮಾನ ಮತಯಂತ್ರದಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸಿ ಸಂಭ್ರಮಿಸಿದರು.
ಶಿಕ್ಷಕರಾದ ರಾಘು ಮೊಗಳ, ಸಚೀನ ಅವಟಿ, ಲಕ್ಷ್ಮೀ ಮಸೂತಿ, ಜಯಶ್ರೀ ಬಿರಾದಾರ, ವೀರೇಶ ಹುಣಶ್ಯಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.