ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಅವರಿಂದ ಸ್ಥಾಪಿತಗೊಂಡ ಭಾರತೀಯ ಲಿಂಗಾಯತ ಡೆವಲೆಪಮೆಂಟ್ ಏಜ್ಯುಕೇಶನಲ್ ಅಸೋಸಿಯೇಶನ್ 115 ವರ್ಷಗಳ ದೀರ್ಘ ಪ್ರಯಾಣದಲ್ಲಿ ಸಾರ್ಥಕ ಸೇವೆಯೊಂದಿಗೆ ಗುಣಾತ್ಮಕ ಶಿಕ್ಷಣ ನೀಡುವತ್ತ ಸಂಸ್ಥೆ ಮುಂಚೂಣಿಯಲ್ಲಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ, ಸಚಿವ ಎಂ.ಬಿ.ಪಾಟೀಲ ಹೇಳಿದರು.
ಜು.18 ರಂದು ಏರ್ಪಡಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ದಾಸೋಹಿ ಪೂಜ್ಯ ಬಂಥನಾಳ ಸಂಗಬಸವ ಮಹಾಶಿವಯೋಗಿಗಳು, ಮುತ್ಸದ್ದಿ ನಾಯಕರಾದ ಬಿ.ಎಂ.ಪಾಟೀಲರ ದೂರದೃಷ್ಟಿಯ ಫಲ ಈ ಭಾಗದಲ್ಲಿ ಎಲ್ಲರಿಗೂ ಶಿಕ್ಷಣ ದೊರೆಯುವ ಮೂಲ ಉದ್ದೇಶ ಸಫಲಗೊಂಡಿದೆ ಎಂದರು.
ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ 4500 ವಿವಿಧ ಸಿಬ್ಬಂದಿ ಸಹಯೋಗದಲ್ಲಿ ವಿವಿಧ ವೈದ್ಯಕೀಯ ಶಿಕ್ಷಣ, ವಿವಿಧ ತಾಂತ್ರಿಕ ಶಿಕ್ಷಣ, ಕಲೆ ವಿಜ್ಞಾನ, ವಾಣಿಜ್ಯ, ವ್ಯವಹಾರ ಸೇರಿದಂತೆ ವಿವಿಧ ಕಾಲೇಜುಗಳ 36000 ವಿದ್ಯಾರ್ಥಿಗಳಿಗೆ ಇಡೀ ಕರ್ನಾಟಕದಲ್ಲಿಯೇ ಅತ್ಯುತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.
ಬಿ.ಎಲ್.ಡಿ.ಇ ಅಲೆನ್ ಕರಿಯರ್ ಅಕಾಡೆಮಿಯಲ್ಲಿ 2025-26 ನೇ ಸಾಲಿನಿಂದ NEET, JEE, K-CET ತರಬೇತಿಗಳನ್ನು ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕಲ್ಪಿಸಲಾಗಿದೆ. ಮೊದಲ ವರ್ಷದಲ್ಲಿಯೇ 372 ವಿದ್ಯಾರ್ಥಿಗಳಿಗೆ ಪ್ರವೇಶ ದೊರೆತಿದೆ.
ಪಿಯುಸಿ ಶಿಕ್ಷಣಕ್ಕಾಗಿ ಮಂಗಳೂರು, ಬೆಂಗಳೂರು ಅಲೆದಾಟ, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಇಲ್ಲದೆ ಇನ್ನು ಬಿ.ಎಲ್.ಡಿ.ಇ ಅಡಿಯಲ್ಲಿಯೇ ಎಲ್ಲ ಸೌಲಭ್ಯ ದೊರೆಯುತ್ತಿವೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಅರುಣ ಚಂ. ಇನಾಮದಾರ, ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಶೆಟ್ಟಿ, ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಪಿ. ಮಂಜುಮಾಥ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ರಾ. ರಾಜೇಶ ಹೊನ್ನುಟಗಿ, ಡಾ. ಮಹಾಂತೇಶ ಬಿರಾದಾರ ಇದ್ದರು.
ಜು.27 ರಂದು ಉದ್ಘಾಟನೆಗೊಳ್ಳಲಿರುವ ಘಟಕಗಳು
ಶ್ರೀ ಮಲ್ಲಿಕಾರ್ಜುನ ಖರ್ಗೆ, ಅಧ್ಯಕ್ಷರು ಎ.ಐ.ಸಿ.ಸಿ ಮತ್ತು ಮಾನ್ಯ ವಿರೋಧ ಪಕ್ಷದ ನಾಯಕರು ರಾಜ್ಯ ಸಭೆ ಇವರ ಅಮೃತ ಹಸ್ತದಿಂದ ದಿ: 27 ರಂದು ಉದ್ಘಾಟನೆಗೊಳ್ಳಲಿರುವ ಘಟಕಗಳ ವಿವರ.
ಸಾನಿಧ್ಯ- ಡಾ. ಶಿವಾನುಭ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳವರು ಬೇಲಿಮಠ, ಬೆಂಗಳೂರು.
- ಹೈಟೆಕ್ ಆಯುರ್ವೇದ ಆಸ್ಪತ್ರೆ – ಸುಸಜ್ಜಿತ ಪಂಚಕರ್ಮ, ನೇತೃ ಕ್ರಿಯಾಕಲ್ಪ ಒಳಗೊಂಡ ವಿವಿಧ ಆಯುರ್ವೇದ ಪದ್ದತಿಯ ಚಿಕಿತ್ಸೆಗಳು ಆಯುರ್ವೇದ ಮಹಾವಿದ್ಯಾಲಯದಲ್ಲಿ ಆರಂಭಗೊಳ್ಳಲಿವೆ.
- ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ವಿಸ್ತರಣಾ ಘಟಕ – ಆಯುರ್ವೇದ ಮಹಾವಿದ್ಯಾಲಯದಲ್ಲಿ ಆಯುರ್ವೇದ ಪದ್ಧತಿಯ ಜೊತೆಗೆ ಆಧುನಿಕ ವೈದ್ಯಕೀಯ ಸೌಲಭ್ಯವು ವಿಜಯಪುರದ ದಕ್ಷಿಣ ಭಾಗದ ಜನತೆಗೆ ದೊರೆಯಲು ಮೆಡಿಸಿನ್, ಸರ್ಜರಿ, ಪೆಡಿಯಾಟ್ರಿಕ್, ಗೈನಕಾಲಜಿ, ಅರ್ಥೋಪೆಡಿಕ್ಸ್, ಸುಸಜ್ಜಿತ ಪ್ರಯೋಗಾಲಯ, ಸ್ಕ್ಯಾನಿಂಗ್ ಸೆಂಟರ್ ಇಲ್ಲಿ ಕಾರ್ಯನಿರ್ವಹಿಸಲಿವೆ.
- B. M. Patil Foundation Innovation and Incubation Center: ಬಿ. ಎಂ. ಪಾಟೀಲ ಫೌಂಡೇಶನ್ ವತಿಯಿಂದ ವಿಜಯಪುರ ಜಿಲ್ಲೆಯಲ್ಲಿನ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ಇಲ್ಲಿ ಹೊಸ ಆಲೋಚನೆಗಳು, ಕೌಶಲ್ಯ ಅಭಿವೃದ್ಧಿ ಮತ್ತು ಕೈಗಾರಿಕೆಗಳ ಸಹಭಾಗಿತ್ವ ಕಲ್ಪಿಸುವ ವೇದಿಕೆಯಾಗಿದೆ.
- ಇಲ್ಲಿ ನಿರಂತರ ಕಲಿಕೆ, ಕಾರ್ಯಾಗಾರಗಳು ಕೈಗಾರಿಕೆಗಳ ಸಹಯೋಗದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.
- ಉದ್ಘಾಟನೆಗೊಳ್ಳುವ ಮುಂಚೆ ಈಗಾಗಲೇ 1200 ವಿದ್ಯಾರ್ಥಿಗಳನ್ನು ಪೈಲೆಟ್ ಪ್ರೊಗ್ರಾಮ್ ನಲ್ಲಿ ತೊಡಗಿಸಿದ್ದು, ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ, 450 ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾನ್ಯತೆ ದೊರೆತಿದೆ.
ಎಂದು ಸಚಿವರು ವಿವರಿಸಿದರು.
ಮುಂದಿನ ಯೋಜನೆಗಳು
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ದೇವರಹಿಪ್ಪರಗಿ ಮತ್ತು ವಿಜಯಪುರ ನಗರದ ಅಲ್ ಅಮೀನ್ ಮುಂಭಾಗದ ಲಿಂಗರಾಜ ಸಂಸ್ಥೆ ಜಾಗೆಯಲ್ಲಿ ಒಟ್ಟು ೩ ಹೊಸದಾಗಿ ಸಿ.ಬಿ.ಎಸ್.ಇ ಶಾಲೆಗಳನ್ನು ಆರಂಭಿಸಲಾಗುವುದು.
ಬಸವನ ಬಾಗೇವಾಡಿಯಲ್ಲಿ ಬಿಸಿಎ ಮತ್ತು ಬಿ-ಫಾರ್ಮಾ ಕಾಲೇಜುಗಳನ್ನು ಆರಂಭಿಸಲಾಗುವುದು. ಈಗಾಗಲೇ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವ ಎಂ.ಬಿ.ಪಾಟೀಲ ಮಾಹಿತಿ ನೀಡಿದರು.