ಪ್ರಗತಿಪರ ಸಂಘಟನೆಗಳ ಚಡಚಣ ತಾಲೂಕು ಸಮೀತಿಯ ಉಮರಜ ಗ್ರಾಮದ ಸದಸ್ಯರಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಉಮರಜ ಗ್ರಾಮ ಪಂಚಾಯತಿಯಲ್ಲಿ ಸುಮಾರು ೬೦ ಲಕ್ಷ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಚಡಚಣ ತಾಲೂಕು ಸಮೀತಿಯ ಉಮರಜ ಗ್ರಾಮದ ಸದಸ್ಯರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಉಮರಜ ಪಂಚಾಯತಿ ಅಧಿಕಾರಿ ಪಿಡಿಓ ಎಲ್ ಎಫ್ ನದಾಫ ಮತ್ತು ಗ್ರಾ.ಪಂ.ಅಧ್ಯಕ್ಷ ಕಂವುಸನ ಇಬ್ರಾಹಿಮ್ ಸಾವಳೆ ಇವರಿಬ್ಬರೂ ಕೂಡಿ ೨೦೨೪-೨೫ ನೇ ಸಾಲೀನ ೧೫ ನೇ ಹಣಕಾಸು ಯೋಜನೆಯ ವಿವಿಧ ಕಾಮಗಾರಿಗಳ ಸುಮಾರು ೬೦ ಲಕ್ಷ ರೂಪಾಯಿ ಹಣವನ್ನು ಅಭಿವೃದ್ಧಿ ಕೆಲಸ ಮಾಡಿಸದೆ ಹಣ ಗುಳುಂ ಮಾಡಿದ್ದಾರೆ ಎಂದು ಉಮರಜ ಗ್ರಾಮದ ಗ್ರಾಮಸ್ಥರು ಮತ್ತು ಪ್ರಗತಿಪರ ಸಂಘಟನೆಯ ಜನರು ಆರೋಪಿಸಿ ಅಹೋರಾತ್ರಿ ಅನಿರ್ಧಿಷ್ಠ ಧರಣಿ ಸತ್ಯಾಗ್ರಹವನ್ನು ಇವರ ವಿರುದ್ಧ ಉಮರಜ ಪಂಚಾಯತಿ ಮುಂದೆ ದಿ.೧೪ರ ಸಾಯಂಕಾಲ ದಿಂದ ಆರಂಭಿಸಿದ್ದಾರೆ.
ಅಹೋರಾತ್ರಿ ಪ್ರಾರಂಭಗೊಂಡ ಧರಣಿ ಸತ್ಯಾಗ್ರಹದ ಬಗ್ಗೆ ತಿಳಿಯುತ್ತಿದ್ದಂತೆ ಪಿಡಿಓ ಎಲ್ ಎಫ್ ನದಾಫ ಮತ್ತು ಗ್ರಾ.ಪಂ.ಅಧ್ಯಕ್ಷ ಕಂವುಸನ ಇಬ್ರಾಹೀಮ್ ಸಾವಳೆ ಪರಾರಿ ಯಾಗಿದ್ದಾರೆ. ಸರಕಾರಿ ಫೋನ್ ಕೂಡಾ ಸ್ವಿಚ್‌ಆಫ್ ಮಾಡಿ ಉದ್ಧಟತನವನ್ನು ತೋರಿದ್ದಾರೆ. ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿರುವುದನ್ನು ಗಮನಿಸಿದರೆ ಆರೋಪದಲ್ಲಿ ಹುರುಳಿದೆ ಎಂದು ಗ್ರಾಮಸ್ಥರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತು ಅವರನ್ನು ಹುಡುಕಿಕೊಡಿ ಎಂದು ಚಡಚಣ ತಾಲೂಕ ಪಂಚಾಯತಿ ಅಧಿಕಾರಿ ಇಓ ಸಂಜಯ ಖಡಗೆಕರ್ ಅವರಿಗೆ ಪತ್ರಿಕೆಯ ಮುಖಾಂತರ ಮನವಿ ಮಾಡಿದ್ದಾರೆ.
ಇವರ ಮೇಲೆ ಆದಷ್ಟು ಬೇಗನೇ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಇನ್ನೂ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಇಲ್ಲಿಯ ರೈತರು ಎಚ್ಚರಿಸಿದ್ದಾರೆ.
ಉಮರಜ ಪಂಚಾಯತಿ ಅಧಿಕಾರಿ ಪಿಡಿಓ ಎಲ್ ಎಫ್ ನದಾಫ ಅವರು ಫೋನ ಸ್ವಿಚ್‌ಆಫ್ ಮಾಡಿದ ಬಗ್ಗೆ ಚಡಚಣ ತಾಲೂಕ ಪಂಚಾಯತಿ ಅಧಿಕಾರಿ ಸಿಇಓ ಸಂಜಯ ಖಡಗೆಕರ್ ಅವರನ್ನು ವಿಚಾರಿಸಲಾಗಿ ಪಿಡಿಓ ಫೋನ್ ಸ್ವಿಚ್‌ಆಫ್ ಮಾಡಿದ್ದು ದೊಡ್ಡ ತಪ್ಪು. ಸರಕಾರ ಇದನ್ನು ೨೪ ಗಂಟೆ ನಿರಂತರವಾಗಿ ಬಳಸಬೇಕೆಂದು, ಜನರ ಕಷ್ಟಕ್ಕೆ ನೆರವಾಗಲೆಂದು ಕೊಟ್ಟಿದ್ದಾರೆ. ಪಿಡಿಓ ಎಲ್ ಎಫ್ ನದಾಫ ವಿರುದ್ಧ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪ್ರಗತಿಪರ ಸಂಘದ ಸದಸ್ಯರುಗಳಾದ ಸಂಗಪ್ಪ ಇರ್ಸೂರ, ಯಶವಂತ ಯಲ್ಲಪ್ಪ ಅಂಬಿಗೆರ ಇನ್ನೂ ಅನೇಕ ಸದಸ್ಯರು ಮತ್ತು ಊರಿನ ಪ್ರಮುಖ ಮುಖಂಡರು, ರೈತರು ಉಪಸ್ಥಿತರಿದ್ದರು.
” ನಾನು ಬುಧವಾರ ಉಮರಜ ಗ್ರಾಮದ ಧರಣಿನಿರತ ಗ್ರಾಮಸ್ಥರನ್ನು ಭೇಟಿಯಾಗಿದ್ದೇನೆ. ಅವರು ಮನವಿ ಕೊಟ್ಟಿದ್ದಾರೆ. ನಾನು ಶೀಘ್ರವೆ ತನಿಖೆ ಮಾಡುತ್ತೇನೆ. ಮತ್ತು ಈಗಾಗಲೆ ಜಿಲ್ಲಾ ಪಂಚಾಯತಿಗೆ ಪತ್ರದ ಮುಖಾಂತರ ತಿಳಿಸಿದ್ದು ಜಿಲ್ಲಾ ಪಂಚಾಯತಿಯವರು ತನಿಖೆ ಮಾಡಿ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ. ಆರೋಪಗಳ ಸತ್ಯಾಸತ್ಯತೆಯ ಬಗ್ಗೆ ಮೂವರ ಜಂಟಿ ತನಿಖಾ ತಂಡವನ್ನು ರಚಿಸಿದ್ದೇನೆ. ತನಿಖೆಯ ವರದಿ ಬಂದ ನಂತರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಧರಣಿ ನಿರತ ಜನರ ಅಭಿಪ್ರಾಯದಂತೆ ತನಿಖೆ ಸಾಬೀತಾದರೆ ಪಿಡಿಓ ಅವರಿಗೆ ನಮ್ಮ ತಾಲೂಕಿನಲ್ಲಿ ಕೆಲಸಕ್ಕೆ ಅವಕಾಶ ಕೊಡುವುದಿಲ್ಲ. ಈ ವ್ಯವಸ್ಥೆಯಲ್ಲಿ ಅಧಿಕಾರಿಗಳು ಫೋನ್ ಬಂದ್ ಮಾಡಿ ಇಡುವುದು ಅಪರಾಧವಾಗಿದೆ. ಅದರ ಬಗ್ಗೆಯು ಕೂಡಾ ತನಿಖೆ ಮಾಡುತ್ತೇವೆ.”
– ಸಂಜಯ ಖಡಗೆಕರ್
ಇಓ ತಾಪಂ ಚಡಚಣ