ರಾಜ್ಯ ಮಟ್ಟದ ಮಾಳಿ/ ಮಾಲಗಾರ ಸಮಾಜ ನೌಕರರ / ವೃತ್ತಿ ಪರರ ಸಮಾವೇಶದಲ್ಲಿ ಶಾಸಕ ಜಗದೀಶ ಗುಡಗುಂಟಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಾವು ಬೆಳೆಯುವುದಲ್ಲದೆ, ನಮ್ಮ ಸುತ್ತ ಮುತ್ತಲಿನವರನ್ನು ಬೆಳೆಸಬೇಕು, ಮನೆಯೇ ಮೊದಲ ಪಾಠಶಾಲೆ ಆಗಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಬಸವ ಭವನದಲ್ಲಿ ಜಮಖಂಡಿ ತಾಲೂಕಾ ಮಾಳಿ ಸಮಾಜ ನೌಕರರ ಸಂಘ ಹಾಗೂ ಜಮಖಂಡಿ ಮಾಳಿ ಸಮಾಜದಿಂದ ಏರ್ಪಡಿಸಿದ
ಕರ್ನಾಟಕ ರಾಜ್ಯ ಮಟ್ಟದ ಮಾಳಿ/ ಮಾಲಗಾರ ಸಮಾಜ ನೌಕರರ / ವೃತ್ತಿ ಪರರ ಸಮಾವೇಶ ಹಾಗೂ 2024/25 ನೇ ಸಾಲಿನ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಹಾಗೂ ರಾಜ್ಯ / ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ, ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಮಾಳಿ ಸಮಾಜ ಸಣ್ಣ ಸಮಾಜ ಇವರು ಕಾಯಿಪಲ್ಲೆ, ಹೂ ವ್ಯಾಪಾರ ಮಾಡುತ್ತಾ, ಎಲ್ಲ ಸಮಾಜದ ಬಾಂಧವರೊಂದಿಗೆ ಅನೋನ್ಯತೆಯಿಂದ ತಮ್ಮ ಜೀವನ ಸಾಗಿಸುತ್ತಿದ್ದಾರೆ. ತಂದೆ – ತಾಯಿಗಳು ಮಕ್ಕಳಿಗೆ ಒಳ್ಳೆಯ ಆಚಾರ ,ವಿಚಾರ, ಸಂಸ್ಕಾರ ನೀಡಬೇಕು ಎಂದು ಹೇಳಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಮಾಳಿ ಸಮಾಜಕ್ಕೆ ಬಜೆಟಿನಲ್ಲಿ ನಿಗಮ ಮಂಡಳಿ ಘೋಷಣೆಯಾಗಿದೆ, ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ ಅದನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದರು.
ರಾಜ್ಯ ಮಾಳಿ ಸಮಾಜದ ನಿಯೋಗದ ಅಧ್ಯಕ್ಷ ಡಾ|| ಸಿ.ಬಿ.ಕುಲಗೋಡ ಮಾತನಾಡಿ, ಮಾಳಿ ಸಮಾಜಕ್ಕೆ ನಿಗಮ ಮಂಡಳಿ ರಚನೆಯಾದರೆ ನಮ್ಮ ಯುವಕರಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತದೆ, ಇದರಿಂದ ಸಮಾಜದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಮಹಾರಾಷ್ಟ್ರದ ಮಾಜಿ ಗೃಹ ಸಚಿವರಾದ ಸಿದ್ದರಾಮ ಮೇತ್ರೆ ಹಾಗೂ ಚೇರಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಫ್ ಪುಣೆ ಮಹಾನಗರ ಪರಿವಾಹನ ಮಹಾಮಂಡಲದ ದೀಪಾ ಎಸ್ ಮುಧೋಳ ಅವರು ವಿಡಿಯೋ ಕಾಲ ಮುಖಾಂತರ ಮಾತನಾಡಿದರು.
ರಾಜ್ಯಾಧ್ಯಕ್ಷ ಕಾಡು ಮಾಳಿ ಪ್ರಸ್ತಾವಿಕವಾಗಿ ಮಾತನಾಡಿದರು.
ಹಾಲಿ ಶಾಸಕ ಹಾಗೂ ಮಾಜಿ ಶಾಸಕರಿಗೆ ಮನವಿ ಪತ್ರ :
ಮಾಳಿ ಸಮಾಜದ ಅನುಕೂಲತೆಗಾಗಿ ಜಮಖಂಡಿ ತಾಲೂಕಾ ಕೇಂದ್ರದಲ್ಲಿ ಮಾಳಿ/ ಮಾಲಗಾರ ಸಮಾಜದ ಸಭಾ ಭವನಕ್ಕೆ ನಿವೇಶನ ಮತ್ತು ಕಟ್ಟಡ ಮಂಜೂರಾತಿ ಮಾಡಿಕೊಡಬೇಕೆಂದು ಒಂದೇ ವೇದಿಕೆಯಲ್ಲಿ ಮನವಿ ಸಲ್ಲಿಸಿದರು.
ವೇದಿಕೆಯ ಮೇಲೆ ಜಿ.ಎಲ್ ಮೇತ್ರೆ, ನಾಗೇಂದ್ರ ಕೊಳಶೆಟ್ಟಿ, ಎಸ್.ವೈ.ಕುಂದರಗಿ, ಕಾಶಿನಾಥ್ ಕಂಕಾಳೆ, ಕಾಶಿನಾಥ ಮಾಳಿ, ಶಿವಶರಣ ಅವಜಿ, ಬಸವರಾಜ್ ಬಾಲಕಿಲೆ, ಶ್ರೀಮಂತ ಚಿಂಚೋಳಿ, ಮಹಾಂತೇಶ್ ಹಾಳಮಳ್ಳಿ, ಗುರುಪಾದ ಮೆಂಡಿಗೇರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ, ಕೆ.ಎಲ್.ಮಾಳಿ, ಪರಶುರಾಮ ಮಾಳಿ,ಆನಂದ ಮಾಳಿ , ಜಕ್ಕಪ್ಪ ಮೆಂಡಿಗೇರಿ, ಬಾಲಚಂದ್ರ ರಾವಳೋಜಿ ,ಹನುಮಂತ ಕುಂಚನೂರ, ಈರಪ್ಪ ಬೆಳಗಲಿ, ಶ್ರೀಕಾಂತ ಜಾಲಿಬೇರಿ, ನಾಗರಾಜ್ ಕಲ್ಯಾಣಿ, ರವಿ ಕವಟೇಕರ್, ಬಸವರಾಜ್ ಮಾಳಿ ಮುಂತಾದ ತಾಲೂಕಿನ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಶಿವಾನಂದ್ ಕಲ್ಯಾಣಿ ನಿರೂಪಿಸಿ, ವಂದಿಸಿದರು.
“ಅತಿ ಕಡಿಮೆ ಜನಸಂಖ್ಯೆ ಹಾಗೂ ಅತೀ ಹಿಂದುಳಿದ ಸಮಾಜಕ್ಕೆ ನಿಗಮ ಮಂಡಳಿ ಕೊಡಬೇಕು. ಸಣ್ಣ ಸಮಾಜದ ಕಲ್ಯಾಣ ನಿಗಮ ಮಂಡಳಿ ಸ್ಥಾಪನೆ ಮಾಡುವುದರ ಮುಖಾಂತರ ಮಾತ್ರ ಸಾಧ್ಯ.”
– ವಿ.ಎಸ್.ಮಾಳಿ
ನಿವೃತ್ತ ಪ್ರಾಚಾರ್ಯರು
ಪ್ರತಿಭಾ ಪುರಸ್ಕಾರ
ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪ್ರತಿಶತ 85 % ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು.