ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಸೈಬರ್ ಕ್ರೈಂ, ಮಾದಕ ವ್ಯಸನ ಮತ್ತು ರಸ್ತೆ ಸಂಚಾರಿ ನಿಯಮ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಜನರು ತಮಗೆ ಅರಿವಿಲ್ಲದೆಯೇ ಎಪಿಕೆ ಫೈಲ್ ಬಳಕೆಯಿಂದ ಹಣ ಕಳೆದುಕೊಳ್ಳುತ್ತಿದ್ದಾರೆ. ನಿತ್ಯ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಜಾಗೃತರಾಗಬೇಕು ಎಂದು ಡಿವೈಎಸ್‌ಪಿ ಜಮೀರ್ ರೋಷನ್ ಹೇಳಿದರು.
ನಗರದ ಕಡಪಟ್ಟಿ ಕ್ರಾಸ್ ಬಳಿಯ ಶ್ರೀ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ವಿನೂತನ ಉಪಕ್ರಮದೊಂದಿಗೆ ಸದಾ ನಿಮ್ಮ ಸೇವೆಯಲ್ಲಿ ಪೊಲೀಸ್ ಇಲಾಖೆ ಮತ್ತು ಮನೆ-ಮನೆಗೆ ಭೇಟಿ; ಅಹವಾಲು ಸ್ವೀಕಾರ ಕಾಠ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯೊಂದಿಗೆ ಜನರಲ್ಲಿರುವ ಭಯದ ವಾತಾವರಣ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರ ಮನೆ-ಮನೆಗೆ ಭೇಟಿ ನೀಡುತ್ತಿದೆ. ಜನರೊಂದಿಗೆ ಮುಕ್ತವಾಗಿ ಚರ್ಚಿಸಿ ತೊಂದರೆಗಳ ಅಹವಾಲು ಸ್ವೀಕಾರ ಮಾಡಲಾಗುತ್ತಿದೆ. ಅಹವಾಲು ಸ್ವೀಕರಿಸಿದ ಕುಟುಂಬದವರಿಗೆ ನ್ಯಾಯ ನೀಡುವ ಕೆಲಸ ಮಾಡಲಾಗುವುದು. ಸಮನ್ವಯ ಸಾಧನೆಗಾಗಿ ಪೊಲೀಸ್ ಇಲಾಖೆ ಈ ವ್ಯವಸ್ಥೆ ಕೈಗೊಂಡಿದೆ ಎಂದರು.
ಪಾಸ್ ಪೋರ್ಟ್ಗಾಗಿ, ವೆರಿಫಿಕೇಶನ್, ಕಳ್ಳತನ, ಅನುಮಾನಾಸ್ಪದ ವ್ಯಕ್ತಿಗಳ ಮಾಹಿತಿ, ಆಯುಧ ನವೀಕರಣ, ಅನೈತಿಕ ಚಟುವಟಿಕೆಗಳ ಮಾಹಿತಿಗಳ ಮುಕ್ತ ಮಾಹಿತಿ ಹಂಚಿಕೆಗೆ ಮನೆ-ಮನೆಗೆ ಭೇಟಿ ಅನುಕೂಲವಾಗಲಿದೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲೈಟ್ ಧರಿಸಬೇಕು. ಸವಾರರು ರಸ್ತೆ ಸುರಕ್ಷಾ ನಿಯಮ ಪಾಲಿಸುವ ಮೂಲಕ ವಾಹನದ ದಾಖಲಾತಿ ಹೊಂದಿರಬೇಕು ಎಂದರು.
ಈ ವೇಳೆ ಶಹರ ಠಾಣೆ ಪಿಎಸೈ ಅನೀಲ ಕುಂಬಾರ, ಅಪರಾಧ ವಿಭಾಗದ ಪಿಎಸೈ ನಾಗರಾಜ ಕಾಜಗಾರ, ಕನ್ನಡ ಅಭಿಮಾನಿ ರವಿತೇಲಿ, ನ್ಯಾಯವಾದಿ ವರ್ಧಮಾನ ಯಲಗುದ್ರಿ, ಎನ್.ಎಸ್. ಗಾವಿ ಸೇರಿದಂತೆ ಇತರರಿದ್ದರು.
ಆರಕ್ಷಕ ಶೇಖರ ನಾಯಕ ಶಂಕರ ಆಸಂಗಿ ಸ್ವಾಗತಿಸಿದರು. ನಿರೂಪಿಸಿದರು. ಮಲ್ಲು ತಂಬಾಕದ ವಂದಿಸಿದರು.