ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಯೋಗದಿಂದ ನಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಆರೋಗ್ಯ ಸುಧಾರಣೆ ಸಾಧ್ಯ ಜತೆಗೆ ನಮ್ಮ ದೇಹ ಮತ್ತು ಪ್ರಜ್ಞೆಯನ್ನು ಒಗ್ಗೂಡಿಸುತ್ತದೆ ಎಂದು ಗೋಗಿ ಜ್ಞಾನಯೋಗ ಮಂದಿರದ ಯೋಗಿ ಜಯಗುರುದೇವ ಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ಪ.ವಿ.ವ.ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಯೋಗ ಮತ್ತು ಆರೋಗ್ಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಮನಸ್ಸು ಶುದ್ಧವಾಗಿದ್ದರೆ ನಮ್ಮ ಭಾರತವೂ ಪರಿಶುದ್ಧವಾಗುತ್ತದೆ. ನೀವು ಜೀವಂತವಾಗಿರುವವರೆಗೆ ನಿಮ್ಮ ದೇಹವನ್ನು ಕಾಳಜಿ ವಹಿಸಿ ಮತ್ತು ಪ್ರೀತಿಸಿ, ಜೀವನವನ್ನು ಆನಂದಿಸಿ, ಯಾವಾಗಲೂ ಗುಣಮಟ್ಟದ ಜೀವನವನ್ನು ನಡೆಸಲು ಹಾಗೂ ಆರೋಗ್ಯಕರವಾಗಿರಲು ಯೋಗವು ಬಹುಮುಖ್ಯವಾಗಿದೆ. ಎಂದರಲ್ಲದೇ ಯೋಗದಲ್ಲಿನ ನಿಂತು ಮಾಡುವ ಆಸನಗಳು, ಕುಳಿತು ಮಾಡುವ ಆಸನಗಳು, ಧ್ಯಾನಗಳ ಮಹತ್ವ ಮತ್ತು ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿ, ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ನಿವಾರಣೆಗೆ ಯೋಗದ ಮೊರೆ ಹೋಗುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಉಪಪ್ರಾಚಾರ್ಯ ಪಿ.ವ್ಹಿ.ಮಹಲಿನಮಠ, ನಿವೃತ್ತ ಪ್ರಾಚಾರ್ಯ ವ್ಹಿ.ವ್ಹಿ.ಜಿರ್ಲಿ, ಬಿ.ಬಿ.ಜಮಾದಾರ, ಶಿವಶರಣ ಬೂದಿಹಾಳ, ಡಾ.ಶರಣಬಸವ ಜೋಗೂರ, ರೋಹಿತ ಸುಲ್ಪಿ, ರಾಹುಲ ನಾರಾಯಣಕರ, ಪ್ರಸನ್ನಕುಮಾರ ಜೋಗೂರ, ಎನ್.ಬಿ.ಪೂಜಾರಿ, ಗವಿಸಿದ್ದಪ್ಪ ಆನೆಗುಂದಿ, ಎನ್.ಎಂ.ಶೆಳ್ಳಗಿ, ಉದಯ ಶಿವಸಿಂಪಿಗೇರ, ಎಸ್.ಎಸ್.ಹೂಗಾರ್, ಸುನೀಲ ಪಾಟೀಲ, ವ್ಹಿ.ಪಿ.ನಂದಿಕೋಲ, ಎಸ್.ಜಿ.ಮಾರ್ಸನಳ್ಳಿ, ಆರ್.ಎಂ.ಕೊಳ್ಳೂರೆ, ಚಂದ್ರು ಬಬಲೇಶ್ವರ, ನೀಲಕಂಠ ಮೇತ್ರಿ, ರಾಜೇಶ್ವರಿ ಗಾಣಗೇರ, ವ್ಹಿ.ಕೆ.ಹಿರೇಮಠ, ಎಂ.ಐ.ಮುಜಾವರ, ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.