ನಾಡಿನ ಹೆಮ್ಮೆಯ ಕಲಾವಿದ ದಿ.ಸೋಮಶೇಖರ ಸಾಲಿಯವರ ಜನ್ಮಶತಮಾನೋತ್ಸವ ನಿಮಿತ್ತ ವಿಶೇಷ ಲೇಖನ
- ರಮೇಶ ಚವ್ಹಾಣ
ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯರು, ವಿಜಯಪುರ -
ಕನ್ನಡ ನಾಡಿನ ಹೆಸರಾಂತ ಮೂವರು ಕಲಾವಿದರಾದ. ಶ್ರೀ ಸೋಮಶೇಖರ ಸಾಲಿ, ಶ್ರೀ ಪಿ.ಆರ್ ತಿಪ್ಪೇಸ್ವಾಮಿ ಮತ್ತು ಶ್ರೀ ಬಿ. ಕೆ. ಹುಬಳಿಯವರ ಜನ್ಮಶತಮಾನೋತ್ಸವ ೨೦೨೩ರಲ್ಲಿರುವುದು ರಾಜ್ಯ ಕಲಾವಿದರಿಗೆ ಹೆಮ್ಮೆಯ ವಿಷಯ.
ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರು, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷರಾಗಿ, ಉತ್ತರ ಕರ್ನಾಟಕದ ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ ಜೊತೆಯಲ್ಲಿ ಶ್ರೇಷ್ಠ ಕಲಾವಿದರಾಗಿ ಗುರುತಿಸಿಕೊಂಡಿದ್ದ ಶ್ರೀ ಸೋಮಶೇಖರ ಸಾಲಿಯವರ ಜನ್ಮ ಶತಮಾನೋತ್ಸವದ ತನ್ಮಿತ್ಯ ಅವರ ಕಲಾಕೃತಿಗಳ ಪ್ರರ್ದಶನದೊಂದಿಗೆ ಕಲಾಪಯಣವನ್ನು ರಾಜ್ಯದ ವಿವಿಧ ಭಾಗಗಳಾದ ವಿಜಯಪುರ, ಕಲಬುರಗಿ, ಧಾರವಾಡ, ಬಾಗಲಕೋಟೆ, ದಾವಣಗೇರೆ ಮತ್ತು ಅಂತಿಮವಾಗಿ ಶತಮಾನೋತ್ಸವದ ಸಮಾರೋಪ ಸಮಾರಂಭ ಮತ್ತು ಕಲಾ ಪ್ರರ್ದಶನವನ್ನು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿದೆ.
ಪ್ರಪಂಚದಲ್ಲಿರುವ ಪ್ರತಿಯೊಬ್ಬ ಕಲಾವಿದನ ಕಲಾಕೃತಿಗಳು ಅವನ ಸಿಗ್ನೇಚರ್ (ಹೆಬ್ಬೆರಳ ಸಹಿ) ಇದ್ದಂತೆ. ಆತನ ಕಲಾಕೃತಿಗಳು ವೈಯಕ್ತಿಕ ಅನಿಸಿಕೆಗಳ ಅಭಿವ್ಯಕ್ತಿ. ವಿಮರ್ಶಕರಾದ ನಾವು ಅವುಗಳನ್ನು ನಮ್ಮ ಚಿತ್ತದ ಇಚ್ಛೆಯಂತೆ, ‘ಇದು ಹೀಗೆ ಆಗಬೇಕಾಗಿತ್ತು, ಅದು ಹಾಗೆ ಇರಬೇಕಾಗಿತ್ತು’ ಎಂದು ವ್ಯಾಖ್ಯಾನಿಸುವುದು, ಮನೋವೈಜ್ಞಾನಿಕ ವೈಚಾರಿಕತೆಗೆ ವ್ಯತಿರಿಕ್ತವಾದುದು. ಚಿಕ್ಕ ಮಕ್ಕಳ ಚಿತ್ರಕಲೆಯನ್ನು ನಾವು ನ್ಯಾಯಾಧೀಶರೆಂಬಂತೆ ನಮ್ಮ ಶ್ರೀಮಂತ ಪದಪುಂಜಗಳಲ್ಲಿ, ಮಾರ್ಗದರ್ಶಕರಾಗಿ ಸಲಹೆ ಸೂಚನೆಗಳ ಸಹಿತ ವಿಮರ್ಶೆ ಬರೆಯುತ್ತೇವೆ. ಆದರೆ ಮಕ್ಕಳ ತರಹದ ಚಿತ್ರವನ್ನು ಪ್ರಸಿದ್ಧ ಕಲಾವಿದರು ರಚಿಸಿದಾಗ, ನಮ್ಮ ವಿಮರ್ಶೆಯ ಓಘ ಮತ್ತು ಓಟಗಳು ಭಿನ್ನವಾಗುತ್ತವೆ. ಯಾವ ಮಕ್ಕಳ ಕೃತಿಯಲ್ಲಿ ನಮ್ಮ ಪಾಠ ಪ್ರವಚನ ಇತ್ತೋ ಅದು ಪ್ರಖ್ಯಾತ ಕಲಾವಿದರ ಕೃತಿಗಳ ವಿಮರ್ಶೆಯ ಗತಿ ಸಂದರ್ಭದಲ್ಲಿ ಇರದೇ, ನಾವು ಆ ವಿಮರ್ಶೆಯಲ್ಲಿ ಪ್ರಶಂಸೆಯ ಸಂತೆಯನ್ನೇ ಸೇರಿಸಿರುತ್ತದೆ. ಇದು ಏಕೆ ಹೀಗೆ ? ಎಂಬ ಪ್ರಶ್ನೆಗೆ ಉತ್ತರವೆಂದರೆ, ನಾವು ವಿಮರ್ಶೆಯ ಸಿದ್ಧಾಂತಗಳ ಬದ್ಧತೆಯ ವಿರುದ್ಧ ರಾಜಿಮಾಡಿಕೊಳ್ಳುತ್ತೇವೆ ಎಂದಾಗುವುದಲ್ಲವೇ ?
ದಿ. ಸೋಮಶೇಖರ ಸಾಲಿಯವರ ಕಲಾಲಾಲಿತ್ಯ ಪ್ರಭುತ್ವವು ತೀಕ್ಷ್ಣ ದೃಷ್ಟಿ ಮತ್ತು ಸೂಕ್ಷ್ಮ ಸಂವೇದನೆಗೆ ಮಾತ್ರ ಸಂವಹನವಾಗುವ ಮೌಲ್ಯವಾಗಿದೆ. ಕಲಾವಿದ ಎಷ್ಟು ಕಲಾಕೃತಿಗಳನ್ನು ರಚಿಸಿದ್ದಾನೆ ? ಎಷ್ಟು ಪ್ರದರ್ಶನಗಳನ್ನು ಮಾಡಿದ್ದಾನೆ ? ಎಂಬ ಮಾನದಂಡದ ಮಾರ್ಗದಲ್ಲಿ ನಾವು ಅವರ ಕಲಾತ್ಮಕತೆಯನ್ನು ಪರಿಗಣಿಸುವುದು ಪ್ರಾಮಾಣಿಕ ಪ್ರತಿಪಾದನೆಯಲ್ಲ. ಕಲಾ ಇತಿಹಾಸದ ಪುಟಗಳ ಪುರಾವೆಗಳ ಪ್ರಕಾರ, ಜೀವಮಾನದಲ್ಲಿ ಒಂದೇ ಒಂದು ಕಲಾಕೃತಿ ರಚಿಸಿದವರು ಮಹಾನ್ ಕಲಾವಿದರೆಂದು ಖ್ಯಾತನಾಮರಾಗಿ ಕಂಗೊಳಿಸಿದ್ದಾರೆ. ಹೀಗಿದ್ದಾಗ ಕಲಾಶಿಕ್ಷಣವನ್ನು ಅಕಾಡೆಮಿಕ್ಕಾಗಿ ಅಧ್ಯಯನ ಮಾಡಿದ ದಿ. ಸೋಮಶೇಖರ ಸಾಲಿಯವರು ಸೃಜನಸೃಷ್ಟಿಯ ಶಿಸ್ತಿನ ಸಿಪಾಯಿಗಳಾಗಿ ಗೋಚರಿಸುತ್ತಾರೆ.
ಅವರ ಕೃತಿಯಲ್ಲಿಯ ಅಕ್ಕಮಹಾದೇವಿ, ಕೇಶಕವಚದಿಂದ ಕಾಮಮುದ್ರೆಯನ್ನು ಮುಚ್ಚಿಕೊಂಡಿಲ್ಲ. ಇದು ಶರಣ ಸಾಹಿತ್ಯಕ್ಕೆ ಹೊಸ ದಿಕ್ಸೂಚಿ ಎನಿಸಿದೆ. ಅಂಗದಲ್ಲಿರುವ ಲಿಂಗದ ಕಡೆಗೆ ಸಹೃದಯರ ಆಸ್ವಾದನೆಯ ಆಸಕ್ತಿಯನ್ನು ಮತ್ತು ಅನುಭೂತಿಯ ಅಮೃತವನ್ನು ಆಕರ್ಷಿಸಿ, ಕಲಾಮೃತವನ್ನು ಅನುಗ್ರಹಿಸಲಾಗಿದೆ. ಅಲ್ಲಿ ಬಳಸಿದ ರೇಖೆಗಳ ಬದುವುಗಳು ವರ್ಣಗಳಿಗೆ ಸಮತ್ವ ಮತ್ತು ಸಮತೋಲನಗಳನ್ನೂ ಅಕ್ಷಿರಶ್ಮಿಗಳಿಗೆ ಚಲುವು ಮತ್ತು ಚಂದೋಬದ್ಧತೆಗಳನ್ನು ಚಲ್ಲರಿದು ರಮಣೀಯ ಸ್ವರೂಪ ಸಂಪತ್ತಿಗೆ ಸಾಕ್ಷಿಯಾಗಿವೆ. ಅಲ್ಲಿಯ ಭಾವ ತೀಕ್ಷ್ಣತೆ, ಸೌಂದರ್ಯದ ಸುಲಲಿತ ಸಾಗುವಿಕೆಗಳು, ರೋಚಕ ರಭಸದ ರಸಅಪ್ಪವುವಿಗೆ ಸೇತುವೆಯಾಗಿವೆ. ಅದು ರಸವಾರಿಧಿಯಲ್ಲಿ ನಮ್ಮನ್ನು ಮುಕ್ತವಾಗಿ ಯಾನ ಮಾಡಿಸುತ್ತದೆ.
ಸಾಲಿಯವರ ಭಾವಚಿತ್ರಗಳು ತಂತ್ರ ಹಿಡಿತದ ಹಿತ ಮತ್ತು ಮಿತ ಹೇತುವನ್ನು ಹೆಕ್ಕಿತೆಗೆದಿವೆ. ಅಲ್ಲಿಯ ತದ್ರೂಪತೆಯ ತನಗಳು, ಸ್ನಾಯು ಶಾಸ್ತçದ ಸಮ್ಮಿಳಿತಗಳು, ಸಮಯ ಸೆರೆಹಿಡಿದ ಸಾಧಕತೆಯ ಸಂಭ್ರಮ, ತ್ರಿಪರಿಮಾಣಗಳ ಪರಿಕಲ್ಪನೆಗಳು ಶ್ರೀಮಂತವಾಗಿ ಸೂರೆಗಂಡಿವೆ. ಅವರ ನಟರಾಜ ಕೃತಿಯಲ್ಲಿಯ ನಾವೀನ್ಯತೆ ನೋಡುಗನನ್ನು ಕಲಾಸಂಸ್ಕಾರ ಮೋಕ್ಷದ ಪರುಷಕ್ಕೆ ತಾಗಿಸುತ್ತದೆ. ಅಲ್ಲಿರುವ ವರ್ಣರೇಖೆಗಳ ಪ್ರಸನ್ನತೆ ಮತ್ತು ಪರಿಪೂರ್ಣತೆಗಳು ಅಲೌಕಿಕ ಅಮಲಿಗೆ ಆವ್ಹಾನಿಸುವ ಸೋಪಾನವಾಗಿವೆ.
ಚರಕ ಹಿಡಿದು ನೂಲುತ್ತಿರುವ ಮಹಿಳೆಯ ಕೃತಿಯಲ್ಲಿಯ ಹಲವಾರು ವಿನ್ಯಾಸಗಳು ನೋಟಕ್ಕೆ ಮಾಟವಾಗಿ ಮೋಹದ ಮೂಲಕ್ಕೆ ಮೇಳವಾಗಿ ಮೆರೆದಿವೆ. ನಾವು ಇಂದಿನ ಕಲಾರಂಗದಲ್ಲಿ ನಿಂತು ದಿ. ಸೋಮಶೇಖರ ಸಾಲಿಯವರ ಕೃತಿ ರತ್ನಗಳನ್ನು ಅವಲೋಕಿಸಿದಾಗಲೂ ಅವುಗಳು ಮಾತಿಗೆ ಅತೀತವಾದವುಗಳು ಮತ್ತು ಅಜರಾಮರವಾದವುಗಳು. ಅವುಗಳಲ್ಲಿರುವ ವರ್ಣಸಿದ್ಧಿ, ರೇಖಾಶುದ್ಧಿ, ಭಾವಬಂಧುರತೆ, ಕಲ್ಪನಾಕುದುರೆಯ ಹುಚ್ಚಿನ ಕೆಚ್ಚು, ಭ್ರಮಾಲೋಕದ ಚಿತ್ರಕಶಕ್ತಿ, ಇವೆಲ್ಲ ಅವರ ಅಭಿವ್ಯಕ್ತಿಯ ಯೋಗಕ್ಕೆ, ಅಮರತ್ವವನ್ನು ಅನುಗ್ರಹಿಸಿವೆ. ಅವರು ಕಲೆಯನ್ನೇ ವೃತ್ತಿಯಾಗಿ ಅಪ್ಪಿಕೊಂಡಿದ್ದರೆ, ಅವರಿಗೆ ನಿವೃತ್ತಿಯೆಂಬುದೇ ಇರುತ್ತಿರಲಿಲ್ಲ. ಬಹು ದೊಡ್ಡ ಕೀರ್ತಿಯ ವ್ಯಾಪ್ತಿ ಅವರಿಗೆ ಪ್ರಾಪ್ತಿಯಾಗಿರುತ್ತಿತ್ತು.
ಕಲೆಯ ಅಂಬರದಲ್ಲಿ ದಿ. ಸೋಮಸೇಖರ ಸಾಲಿಯವರು ಶುಕ್ರ ತಾರೆಯಂತೆ ಸೇರ್ಪಡೆಯಾಗುತ್ತಾರೆ. ಆಕಾಶದಲ್ಲಿರುವ ಎಲ್ಲಾ ನಕ್ಷತ್ರಗಳು ಜನಸಾಮಾನ್ಯರಿಗೆ ಒಂದೇ ತರಹ ಕಾಣುತ್ತವೆ. ಆದರೆ ವಿಜ್ಞಾನಿಗಳಿಗೆ ಅವು ಬೇರೆ ಬೇರೆಯಾಗಿ ಕಾಣುತ್ತವೆ. ಅವುಗಳನ್ನು ವಿಜ್ಞಾನಿ ಹೆಸರಿಸಿ ಗುರುತಿಸುತ್ತಾನೆ. ಏಕೆಂದರೆ ಅದು ಅವನ ನೋಟದಲ್ಲಿಯ ನೈಪುಣ್ಯತೆ. ಹಾಗೆಯೇ ಸೂಕ್ಷ್ಮ ಸಂವೇದನೆಯ ವೀಕ್ಷಣಾ ಸಂಪನ್ನತೆಗೆ, ದಿ ಸೋಮಶೇಖರ ಸಾಲಿಯವರ ಕಲಾಕೃತಿಗಳಲ್ಲಿ ಸ್ವಚ್ಛಂದವಾದ ಮತ್ತು ಸ್ವತಂತ್ರವಾದ ಸೃಜನ ಶೀಲತೆಯ ಸಿದ್ಧಿ ಶೋಧಿತವಾಗುತ್ತದೆ. ಆ ಕಾಲದ ಅವರ ಕಲೆಯ ವ್ಯಾಪ್ತಿ ಮತ್ತು ಪ್ರಾಪ್ತಿಗಳು ಅಂಥ ಆಯಾಮಗಳಿಗೆ ಮೈಯೊಡ್ಡಿಕೊಂಡಿದ್ದವು. ಅವರ ಪ್ರತಿಭಾನ ಪರಿಶ್ರಮ ಅವರ ಕೃತಿಗಳಲ್ಲಿ ತಾದ್ಯಾತ್ಮದ ತೇರನ್ನು ಎಳೆದು ತೋರಿದೆ. ಅಂಥ ಮಹನೀಯರ ಸಂಪರ್ಕದ ಸೌಭಾಗ್ಯ ನನಗೂ ಸಾಧಿಸಿದ್ದನ್ನು ಸಂಪ್ರೀತಿಯಿಂದ ಸ್ಮರಿಸುತ್ತಿದ್ದೇನೆ.