ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ನಂದಿಮಠದ ಗುರುವೀರಸಿದ್ದ ಶಿವಯೋಗಿಗಳವರ ೭೫ ನೇ ಜಾತ್ರಾಮಹೋತ್ಸವ ಹಾಗೂ ಲಿಂ. ಮಲ್ಲಿಕಾರ್ಜುನ ಸ್ವಾಮೀಜಿಯವರ ತೃತೀಯ ಪುಣ್ಯಾರಾಧನೆಯಂಗವಾಗಿ ಏ.೧೯ ರಂದು ಸಂಜೆ ೭ ಗಂಟೆಗೆ ಶಿವಾನುಭವ ಚಿಂತನ ಹಾಗೂ ರಾಜ್ಯಮಟ್ಟದ ನಂದಿಸಿರಿ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ. ಸಮಾರಂಭವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಶಾಸಕರಾದ ರಾಜುಗೌಡ ಪಾಟೀಲ,ಅಶೋಕ ಮನಗೂಳಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಎ.ಎಸ್.ಪಾಟೀಲ ನಡಹಳ್ಳಿ, ಶರಣಪ್ಪ ಸುಣಗಾರ ಆಗಮಿಸುವರು. ಸಾನಿಧ್ಯವನ್ನು ಶಿರಹಟ್ಟಿಯ ಜಗದ್ಗುರು ಫಕೀರ ಸಿದ್ದರಾಮ ಸ್ವಾಮೀಜಿ, ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಬಸವನಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ, ಪಡೇಕನೂರದ ಮಲ್ಲಿಕಾರ್ಜುನ ಸ್ವಾಮೀಜಿ, ಕಲಕೇರಿಯ ಮಡಿವಾಳೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಅನೇಕ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ವೀರಸಿದ್ದ ಸ್ವಾಮೀಜಿ ವಹಿಸುವರು.
ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಹಚ್ಯಾಳದ ಶಾಂತಪ್ಪ ನಾಗಪ್ಪ ಶಿರಶ್ಯಾಡ, ಶಿಕ್ಷಣ ಕ್ಷೇತ್ರದಲ್ಲಿ ವಿಜಯಪುರದ ಎನ್.ಎಂ.ಬಿರಾದಾರ, ಸಮಾಜ ಸೇವೆಗೆ ಬಸವನ ಬಾಗೇವಾಡಿಯ ಈರಣ್ಣ ಪಟ್ಟಣಶೆಟ್ಟಿ, ಸಾಹಿತ್ಯ ಕ್ಷೇತ್ರದಲ್ಲಿ ವಿಜಯಪುರದ ಮೋಹನ ಕಟ್ಟಿಮನಿ, ಕಲಾಕ್ಷೇತ್ರದಲ್ಲಿ ದೇವರ ಉಪ್ಪಲದಿನ್ನಿಯ ಮೌಲಸಾಬ ಜಾಗೀರದಾರ, ಜಾನಪದ ಕ್ಷೇತ್ರದಲ್ಲಿ ಬೀಳಗಿಯ ಡಾ.ಸಿದ್ದಪ್ಪ ಬಿದರಿ, ಪತ್ರಿಕಾಕ್ಷೇತ್ರದಲ್ಲಿ ಬಸವನಬಾಗೇವಾಡಿ ಹಿರಿಯ ಪತ್ರಕರ್ತ ಬಸವರಾಜ ನಂದಿಹಾಳ ಅವರಿಗೆ ರಾಜ್ಯಮಟ್ಟದ ನಂದಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ರಾತ್ರಿ 10.30 ಗಂಟೆಗೆ ಜಾನಪದ ಹಬ್ಬದಲ್ಲಿ ಬೀಳಗಿಯ ಡಾ.ಸಿದ್ದಪ್ಪ ಬಿದರಿ ಅವರಿಂದ ಜಾನಪದ ಹಾಸ್ಯಭರಿತ ಜವಾರಿ ಮಾತುಗಳು, ವಿಜಯಪುರದ ಶಾರದಾ ಲಂಬಾಣಿ ಅವರ ತಂಡದಿಂದ ಬಂಜಾರಾ ನೃತ್ಯಜರುಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.