ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಅಬ್ಬರದ ಗಾಳಿಯೊಂದಿಗೆ ಸಿಡಿಲು-ಮಿಂಚಿನೊಂದಿಗೆ ಕೆಲ ಹೊತ್ತು ಮಳೆ ಬರುವ ಮೂಲಕ ಬಿರುಬಿಸಿಲಿನಿಂದ ಬೇಸತ್ತಿದ್ದ ಜನತೆಗೆ ಮಳೆ ತಂಪರೆಯಿತು. ಪಟ್ಟಣದಲ್ಲಿ ಸಂಜೆ ಆರಂಭವಾದ ಮಳೆ ರಾತ್ರಿ ಎಂಟು ಗಂಟೆಯವರೆಗೂ ಅಬ್ಬರದ ಗಾಳಿ, ಗುಡುಗು-ಸಿಡಿಲಿನೊಂದಿಗೆ ಮಳೆ ಸುರಿಯಿತು. ವಿದ್ಯುತ್ ವ್ಯತ್ಯಯವಾಗಿತ್ತು. ಮಳೆ ನಿಂತ ನಂತರ ಮಾರುಕಟ್ಟೆ ಪ್ರದೇಶದಲ್ಲಿ ಜನರ ಸಂಚಾರ ಆರಂಭವಾಯಿತು.
ತಾಲೂಕಿನ ಡೋಣೂರ ಗ್ರಾಮದ ಮಲ್ಲಪ್ಪ ಯಮನಪ್ಪ ತಳಕೇರಿ, ಬಸಪ್ಪ ಮಲ್ಲಪ್ಪ ತಳಕೇರಿ, ಬಸಪ್ಪ ಶಿವಪ್ಪ ಈರಕಾರ,ಶಂಕ್ರೆಪ್ಪ ಶಿವಲಿಂಗ ಮರನೂರ ಅವರಿಗೆ ಸೇರಿದ ನಾಲ್ಕು ಕುರಿಗಳು ಸಿಡಿಲು ಬಡಿದು ಮೃತ ಪಟ್ಟಿವೆ. ತಾಲೂಕಿನ ಉಕ್ಕಲಿ ಗ್ರಾಮದ ಯಂಕಪ್ಪ ರಾಚಪ್ಪ ಬಡಿಗೇರ ಅವರ ಮನೆಯ ತಾಡಪಾಲ ಗಾಳಿಗೆ ಹಾರಿ ಹೋಗಿದೆ. ಸಾವಿತ್ರಿ ಈಶ್ವರಪ್ಪ ಮುರಾರ್ತಿಹಾಳ ಅವರ ಜಮೀನಿನಲ್ಲಿರುವ ಮಾವಿನ ಮರಗಳು ಗಾಳಿ-ಮಳೆಗೆ ಭಾಗಶಃ ಹಾನಿಯಾಗಿವೆ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ತಿಳಿಸಿದ್ದಾರೆ.