ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ಫಲಾನುಭವಿಗಳು | ಎಂಎಲ್ಸಿ ಸುನೀಲಗೌಡ ಪಾಟೀಲ ವಿತರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರಕಾರದ ನಾನಾ ಪಿಂಚಣಿ ಯೋಜನೆಗಳಡಿ ಆಯ್ಕೆಯಾದ ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ಫಲಾನುಭವಿಗಳಿಗೆ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಮಂಜೂರಾತಿ ಆದೇಶ ಪತ್ರ ವಿತರಿಸಿದರು.
ಶುಕ್ರವಾರ ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಬಲೇಶ್ವರ ಮತಕ್ಷೇತ್ರದ ತಿಕೋಟಾ ತಾಲೂಕಿನ 198 ಮತ್ತು ಬಬಲೇಶ್ವರ ತಾಲೂಕಿನ 127 ಸೇರಿದಂತೆ ಒಟ್ಟು 325 ಫಲಾನುಭವಿಗಳಿಗೆ ಶಾಸಕರು ಆದೇಶ ಪತ್ರ ವಿತರಿಸಿದರು.
ಇಂದಿರಾಗಾಂಧಿ ರಾಷ್ಟ್ರೀಯ ವೃದ್ಯಾಪ ವೇತನ, ನಿರ್ಗತಿಕ ವಿಧವಾ ವೇತನ, ಅಂಗವೀಕಲರ ವೇತನ, ಸಂಧ್ಯಾ ಸುರಕ್ಷಾ ಪಿಂಚಣಿ ಯೋಜನೆ ಮತ್ತು ಮೈತ್ರಿ ಹಾಗೂ ಮನಸ್ವೀನಿ ಪಿಂಚಣಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯ 29 ಗ್ರಾಮ ಪಂಚಾಯತಿ ಮತ್ತು ಎರಡು ಪಟ್ಟಣ ಪಂಚಾಯತಿಗಳ ಒಟ್ಟು 325 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸಚಿವ ಎಂ. ಬಿ. ಪಾಟೀಲ ಅವರ ಮುತುವರ್ಜಿಯಿಂದಾಗಿ ಫಲಾನುಭವಿಗಳಿಗೆ ಈಗ ಮಂಜೂರಾತಿ ಆದೇಶ ಪತ್ರ ವಿತರಿಸಲಾಗಿದೆ. ಮಂಜೂರಾತಿ ಆದೇಶ ಪತ್ರ ಪಡೆದಿರುವ ಫಲಾನುಭವಿಗಳು ಸರಕಾರದ ಈ ನೆರವನ್ನು ಸದುಪಯೋಗ ಪಡಿಸಿಕೊಂಡು ಸ್ವಾಭಿಮಾನ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಅಲ್ಲದೇ, ಹೊಸದಾಗಿ ಪಿಂಚಣಿ ಯೋಜನೆಯ ಲಾಭ ಪಡೆಯಲು ಬಯಸುವವರು ನೇರವಾಗಿ ಶಾಸಕರ ಕಚೇರಿಯನ್ನು ಸಂಪರ್ಕಿಸಿ ಉಚಿತವಾಗಿ ಅರ್ಜಿಯನ್ನು ಪಡೆದು ಸಲ್ಲಿಸಬಹುದಾಗಿದೆ. ಯಾರೂ ಏಜೆಂಟ್‌ರ ಮಾತಿಗೆ ಮರುಳಾಗಬಾರದು ಎಂದು ಕಿವಿಮಾತು ಹೇಳಿದರು.