ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರು ಏಪ್ರಿಲ್ ೩೦ರೊಳಗಾಗಿ ೨೦೨೫-೨೬ನೇ ಸಾಲಿನ ಆಸ್ತಿ ತೆರಿಗೆ ಪಾವತಿಸಿ ಆಸ್ತಿ ತೆರಿಗೆಯ ಮೇಲೆ ಶೇ.೫ ರಷ್ಟು ರಿಯಾಯತಿ ಲಾಭ ಪಡೆದುಕೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ತಿಳಿಸಿದ್ದಾರೆ.
ಪ್ರತಿ ವರ್ಷ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಏಪ್ರಿಲ್ ತಿಂಗಳಲ್ಲಿ ಪಾವತಿಸುವ ಕರದಾತರಿಗೆ ಚಾಲ್ತಿ ಸಾಲಿನ ಆಸ್ತಿ ತೆರಿಗೆಯ ಮೇಲೆ ಶೇ.೫ ರಷ್ಟು ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ. ೨೦೨೫-೨೬ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ೩೦ರೊಳಗಾಗಿ ಪಾವತಿಸುವ ಕರದಾತರಿಗೆ ಶೇ.೫ ರಿಯಾಯಿತಿಯನ್ನು ನೀಡಲಾಗುತ್ತಿದ್ದು, ತೆರಿಗೆ ಪಾವತಿಸಿ ಇದರ ಲಾಭ ಪಡೆಯಬಹುದು. ಜೂನ್ ಒಳಗಾಗಿ ಪಾವತಿಸದಿದ್ದರೆ ಜುಲೈ ತಿಂಗಳಿನಿಂದ ಪ್ರತಿ ತಿಂಗಳಿಗೆ ಶೇ.೨ ರಷ್ಟು ದಂಡದೊಂದಿಗೆ ಪಾವತಿಸಬೇಕಾಗುತ್ತದೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಸಕಾಲದಲ್ಲಿ ಪಾವತಿಸಲು ವಿಫಲರಾದ ಆಸ್ತಿ ಮಾಲೀಕರುಗಳ ವಿರುದ್ಧ ಕೆಎಂಸಿ ಕಾಯ್ದೆ ೧೯೭೬ರ ಅಧಿನಿಯಮಗಳನ್ವಯ ಬಾಕಿ ಇರುವ ಮೊತ್ತಗಳನ್ನು ವಸೂಲಿ ಮಾಡಲು, ಆಸ್ತಿ ಕರ ಬಾಕಿ ಉಳಿಸಿಕೊಂಡವರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ದಾಖಲಿಸಲು ಮತ್ತು ಆಸ್ತಿ ತೆರಿಗೆ ಬಾಕಿ ಇರುವ ಮೊತ್ತವನು ಜಪ್ತಿ ಮೂಲಕ ವಸೂಲಿ ಮಾಡಲು ಮಹಾನಗರ ಪಾಲಿಕೆ ಅಧಿಕಾರ ಹೊಂದಿರುತ್ತದೆ. ಕಾರಣ ಆಸ್ತಿ ಕರದಾತರು ಅವರ ವೈಯಕ್ತಿಕ ಆರ್ಥಿಕ ನಷ್ಟ, ಯಾವುದೇ ಅಹಿತಕರ ಸನ್ನಿವೇಶಗಳಿಗೆ ಅವಕಾಶ ನೀಡದೇ ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿಸಲು ಕೋರಲಾಗಿದೆ.
ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸಲು ತಿತಿತಿ.viರಿಚಿಥಿಚಿಠಿuಡಿಚಿಛಿiಣಥಿಛಿoಡಿಠಿ.oಡಿg ಪಾವತಿಸಲು ಕರದಾತರಿಗೆ ಮಹಾನಗರ ಪಾಲಿಕೆ ವಲಯ ಕಛೇರಿಗಳಾದ ಗಾಂಧಿಚೌಕ ವಲಯ ಕಚೇರಿ-೧, ಬಡಿಕಮಾನ ವಲಯ ಕಚೇರಿ-೨, ಜಲನಗರ ವಲಯ ಕಚೇರಿ-೩ ಕಚೇರಿಗಳಲ್ಲಿರುವ ಕರ್ನಾಟಕ ಒನ್ ಕೇಂದ್ರಗಳಲ್ಲಿ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧-೩೦ರವರೆಗೆ ಆಸ್ತಿ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದ್ದು, ನಿಗದಿತ ಅವಧಿಯಲ್ಲಿ ತೆರಿಗೆ ಪಾವತಿಸಿ ರಿಯಾಯಿತಿ ಲಾಭ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.