ಉದಯರಶ್ಮಿ ದಿನಪತ್ರಿಕೆ
ಇಂಡಿ: ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಪ್ರಯೋಜನಕಾರಿಯಾಗುವ ನಿಟ್ಟಿನಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಸ್ಥೆ ವತಿಯಿಂದ ಲಚ್ಯಾಣ ಗ್ರಾಮದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲರು ಚಾಲನೆ ನೀಡಿದರು.
ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಗ್ರಾ.ಪಂ ಲಚ್ಯಾಣ ಮತ್ತು ಧರ್ಮಸ್ಥಳ ಕ್ಷೇಮಾಭಿವೃದ್ದಿ ಸಂಸ್ಥೆ ಸಹಯೋಗದಲ್ಲಿ಼ ಶುದ್ಧ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲರು ಧರ್ಮಸ್ಥಳ ಕ್ಷೇಮಾಭಿವೃದ್ದಿ ಸಂಸ್ಥೆ ತಾಲೂಕಿನಲ್ಲಿ ಜನೋಪಯೋಗಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಂಡಿರುವದು ಶ್ಲಾಘನೀಯ. ಶುದ್ಧ ನೀರಿನ ಘಟಕದ ಮೂಲಕ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ ಎಂದರು.
ಮನುಕುಲ ಸೇವೆಯಲ್ಲಿ ಕಳೆದಿರುವ ಸಂಸ್ಥೆ ರಾಜ್ಯದ್ಯಾದಂತ ಲಕ್ಷಾಂತರ ಜನರಿಗೆ ಯೋಜನೆಗಳೊಂದಿಗೆ ಮಾನವ ಸೇವೆಗೆ ಮುಂದಾಗಿದೆ. ಗ್ರಾಮಸ್ಥರಿಗೆ ಅಗತ್ಯ ಶುದ್ಧ ಕುಡಿಯುವ ನೀರಿನ ಘಟಕದ ಮೂಲಕ ಧರ್ಮಸ್ಥಳ ಸಂಸ್ಥೆ ತನ್ನ ಕಾರ್ಯಯೋಜನೆಯನ್ನು ಮತ್ತಷ್ಟು ಅರ್ಥಪೂರ್ಣ ವಾಗಿಸಿಕೊಂಡಿದೆ ಎಂದರು.
ತಾಲೂಕಿನ ಯೋಜನಾಧಿಕಾರಿ ನಟರಾಜ ಎಲ್.ಎಂ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ತಾಲೂಕಿನಾದಂತ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲೂ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಪರಮಪೂಜ್ಯ ಶಂಕರಾನಂದ ಶ್ರೀಗಳು ಜ್ಞಾನ ಯೋಗಾಶ್ರಮ ವಿಜಯಪುರ, ಧರ್ಮರಾಜ ಮುಜಗೊಂಡ ಮಾತನಾಡಿದರು.
ಗ್ರಾ.ಪಂ ಉಪಾಧ್ಯಕ್ಷ ಕಾಶಿನಾಥ ಅವಜಿ, ಸದಸ್ಯ ರಾಜು ನದಾಫ, ದೇವಸ್ಥಾನ ಸಮಿತಿ ಅಧ್ಯಕ್ಷ ಮಲಕ್ಕಣ್ಣ ಬಿರಾದಾರ,ಯಶವಂತ ಬಿರಾದಾರ, ಧರ್ಮಸ್ಥಳ ಕ್ಷೇಮಾಭಿವೃದ್ದಿ ಸಂಸ್ಥೆಯ ಹುಸೇನಸಾಬ, ಸಂಗೀತ ಪ್ರಭಾವತಿ, ಮೇಲ್ವಿಚಾರಕ ಬಸವರಾಜ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಜಯಶ್ರೀ ಮತ್ತಿತರಿದ್ದರು.